More

    ಮತ ಯಂತ್ರ ಜೋಡಣೆ ವೇಳೆ ಇರಲಿ ಎಚ್ಚರ

    ಚಿತ್ರದುರ್ಗ: ಮತದಾನ ಸೇರಿ ಚುನಾವಣೆ ಕಾರ‌್ಯಗಳಿಗೆ ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿ ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಸಲಹೆ ನೀಡಿದರು.
    ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ 2ನೇ ಹಂತದ ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿ, ನಿಯೋಜಿತ ಅಧಿಕಾರಿ, ಸಿಬ್ಬಂದಿ ಒತ್ತಡವೆಂದು ಭಾವಿಸದೆ ಸಂತಸ, ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
    ಪ್ರಸ್ತುತ ಚಿತ್ರದುರ್ಗ ಕ್ಷೇತ್ರದ ಮತಗಟ್ಟೆಗಳಲ್ಲಿ 2 ಬ್ಯಾಲೆಟ್‌ಯೂನಿಟ್‌ಗಳು ಇರಲಿವೆ. ಇವುಗಳನ್ನು ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್‌ಗಳಿಗೆ ಸರಿಯಾಗಿ ಜೋಡಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶವಿರಬಾರದು. ಮತಗಟ್ಟೆ ಅಧಿಕಾರಿಗಳಿಗೆ ಕೈಪಿಡಿ, ಚೆಕ್ ಲೀಸ್ಟ್ ವಿತರಿಸಲಾಗುತ್ತದೆ. ಮತದಾನ ಮುನ್ನ ದಿನದಂದು ಮಸ್ಟರಿಂಗ್ ಕಾರ್ಯಗಳು, ಮತದಾನದಂದು ಕಲ್ಪಿತ ಮತದಾನ, ಪ್ರಕ್ರಿಯೆ ಹಾಗೂ ಮತದಾನ ಪೂರ್ಣಗೊಳಿಸಿ, ಡಿಮಸ್ಟರಿಂಗ್ ಸಮಯದಲ್ಲಿ ಇವಿಎಂ ಸಹಿತ ಇತರ ದಾಖಲೆಗಳನ್ನು ಹಸ್ತಾಂತರ ಕುರಿತಂತೆ ಕೂಲಂಕುಷವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
    ಚುನಾವಣೆ ಆಯೋಗ ಈ ಬಾರಿ ನಿರ್ವಹಿಸಬೇಕಾದ ಕಾರ್ಯಗಳು, ಮುಚ್ಚಿದ ಹಾಗೂ ತೆರೆದ ಲಕೋಟೆಗಳನ್ನು ಒಪ್ಪಿಸುವ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಿದೆ. ಇದಕ್ಕಾಗಿ ವಿವಿಧ ಬಣ್ಣದ ಲಕೋಟೆಗಳನ್ನು ನಿರ್ಧರಿಸಲಾಗಿದೆ. ಹೆಚ್ಚುವರಿ ಲಕೋಟೆಗಳನ್ನು ಸಹ ವಿತರಿಸಲಾಗುವುದು. ಏಪ್ರಿಲ್ 25 ಮಸ್ಟರಿಂಗ್ ದಿನ ಹಂಚಿಕೆಯಾದ ಮತಗಟ್ಟೆ ಬಗ್ಗೆ ತಿಳಿಸಲಾಗುವುದು ಎಂದರು.
    ಮತಗಟ್ಟೆಗಳಲ್ಲಿ ಅಕ್ಷರ ದಾಸೋಹ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಲಿದ್ದಾರೆ, ಮೆನು ಕೂಡ ಸಿದ್ಧವಾಗಿದೆ. ಆರೋಗ್ಯ ಸಂಬಂಧಿ ವಿಚಾರಗಳ ಮೇಲ್ವಿಚಾರಣೆಗೆ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಹಿಳಾ ಸಿಬ್ಬಂದಿ ಸಹಾಯಕ್ಕಾಗಿ ಸಿಡಿಪಿಒಗಳನ್ನು ನೋಡಲ್ ಅಧಿಕಾರಿಗಳಾಗಿರುತ್ತಾರೆ ಎಂದು ತಿಳಿಸಿದರು.
    ಯಾವುದೇ ಪಕ್ಷದ ಅಭ್ಯರ್ಥಿಗಳು ಮತಗಟ್ಟೆ ಸಿಬ್ಬಂದಿಗೆ ಆಹಾರ ಸರಬರಾಜು ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಮತಗಟ್ಟೆ ಕಾರ್ಯಕ್ಕೆ ನೇಮಕವಾದವರಿಗೆ ಶನಿವಾರ ಇಡಿಸಿ (ಚುನಾವಣೆ ಕರ್ತವ್ಯ ಪ್ರಮಾಣ ಪತ್ರ) ನೀಡಲಾಗುವುದು. ಇಡಿಸಿಯೊಂದಿಗೆ ಕರ್ತವ್ಯ ನಿರತರು ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಬಹುದು ಎಂದರು.
    ಸಾಮಾನ್ಯ ವೀಕ್ಷಕ ಮನೋಹರ ಮರಂಡಿ ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಮತದಾನ ಆರಂಭಕ್ಕೂ ಮುನ್ನ ಕಲ್ಪಿತ ಮತದಾನ ಕಡ್ಡಾಯ ನಡೆಸಬೇಕು. ತರುವಾಯ ಕಂಟ್ರೋಲ್ ಯೂನಿಟ್‌ನಲ್ಲಿ ಕಲ್ಪಿತ ಮತದಾನದ ವಿವರ ಅಳಿಸಬೇಕು. ವಿವಿ ಪ್ಯಾಟ್‌ನಲ್ಲಿ ಸಂಗ್ರಹವಾದ ಕಲ್ಪಿತ ಮತದಾನ ಖಾತ್ರಿ ಚೀಟಿಗಳನ್ನು ಹೊರತೆಗೆದು, ಕ್ರಮಬದ್ಧವಾಗಿ ವಿವಿ ಪ್ಯಾಟ್ ಸೀಲ್ ಮಾಡಬೇಕು ಎಂದು ತಿಳಿಸಿದರು.
    ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಆಯುಕ್ತೆ ಎಂ.ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮತ್ತಿತರು ಇದ್ದರು.

    *ಎಲ್ಲ ತಾಲೂಕುಗಳಲ್ಲಿ ಕಾರ್ಯಾಗಾರ
    ಎರಡನೇ ಹಂತದ ಚುನಾವಣೆ ತರಬೇತಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತದಾನ ಅಧಿಕಾರಿ ಸೇರಿದಂತೆ ಸಖಿ, ಅಂಗವಿಕಲ ಹಾಗೂ ಯುವ ಮತಗಟ್ಟೆಗಳ 7864 ಅಧಿಕಾರಿ,ಸಿಬ್ಬಂದಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ತರಬೇತಿ ನೀಡಲಾಯಿತು.

    *ಇವಿಎಂ ತಪಾಸಣೆ
    ನಗರದ ಮತಯಂತ್ರಗಳ ಗೋದಾಮಿನಲ್ಲಿ ತರಬೇತಿ ಹಾಗೂ ಜಾಗೃತಿಗೆಂದು ಕೊಟ್ಟಿದ್ದ ಇವಿಎಂ, ವಿವಿ ಪ್ಯಾಟ್‌ಗಳನ್ನು ಇಂಜಿನಿಯರ್‌ಗಳ ತಂಡ ಶನಿವಾರ ತಪಾಸಣೆ ನಡೆಸಿತು. ಜಿಲ್ಲಾದ್ಯಂತ 60 ಬ್ಯಾಲೆಟ್ ಯೂನಿಟ್, 72 ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

    ಸಂತೆ, ಜಾತ್ರೆ, ಉತ್ಸವ ನಿಷೇಧ
    ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.26ರ ಮತದಾನದ ದಿನ ಹಾಗೂ ಜೂನ್ 4ರ ಮತ ಎಣಿಕೆ ದಿನದಂದು ಬೆಳಗ್ಗೆ 5ರಿಂದ ಸಂಜೆ 7ರ ವರೆಗೆ ಜಿಲ್ಲಾದ್ಯಂತ ಎಲ್ಲ ಸಂತೆ, ಜಾತ್ರೆ, ಉತ್ಸವ ನಡೆಸದಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ. ಚುನಾವಣೆ ಸುಸೂತ್ರ ನಡೆಸಲು ಮತ್ತು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts