More

    ಸ್ವಾಮೀ ಚಿನ್ಮಯಾನಂದರಿಗೆ 108

    | ಸ್ವಾಮಿ ಆದಿತ್ಯಾನಂದ ಸರಸ್ವತೀ, ಚಿನ್ಮಯ ಮಿಷನ್, ಮಂಡ್ಯ

    ಸ್ವಾಮೀ ಚಿನ್ಮಯಾನಂದರು ಮೂಲತಃ ಕೇರಳ ರಾಜ್ಯದವರು. 1916ರ ಮೇ 8 ರಂದು ಕೇರಳದ ಎರ್ನಾಕುಲಂ ಊರಲ್ಲಿ ಅವರ ಜನನ (8.5.1916). ತಂದೆ ತಾಯಿಗಳು ಇಟ್ಟ ಹೆಸರು ಬಾಲಕೃಷ್ಣ ಮೆನನ್. ಪ್ರಾಥಮಿಕ ವಿದ್ಯಾಭ್ಯಾಸ ಕೇರಳದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗವನ್ನು ಲಖ್ನೋದಲ್ಲಿ. ತಂದೆಯ ಇಚ್ಛೆಯಂತೆ ಸ್ನಾತಕೋತ್ತರ ವಕೀಲ ಪದವಿ ಪಡೆದರು. ಆದರೆ ಬಾಲಕೃಷ್ಣ ಮೆನನ್​ರ ಆಸಕ್ತಿಯಿದ್ದದ್ದು ಪತ್ರಿಕೋದ್ಯಮದಲ್ಲಿ. ದೆಹಲಿಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ ಮಾಡತೊಡಗಿದರು.

    ಭಾರತದ ಆರ್ಥಿಕ ಹಿನ್ನಡೆಗೆ ಸಾಧು ಸಂತರೇ ಕಾರಣ. ಅವರು ದುಡಿದರೆ ದೇಶಕ್ಕೆ ಹಿತವೆಂಬ ಮನೋಭಾವದಿಂದ ಸಂತ ಮಹಾಂತರ ಜೀವನವನ್ನು ಹಾಗೂ ಕಾಪಟ್ಯವನ್ನು ಜಗತ್ತಿಗೆ ಪರಿಚಯಿಸುವ ದೃಢವಿಶ್ವಾಸದಿಂದ ಹೃಷೀಕೇಶಕ್ಕೆ ಬಂದು ಸ್ವಾಮೀ ಶಿವಾನಂದರ ದಿವ್ಯಜೀವನಸಂಘದಲ್ಲಿ ತಂಗಿದರು. ಶಿವಾನಂದರು ಮೂಲತಃ ತಮಿಳುನಾಡಿನವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಜ್ಞಾನದಲ್ಲಿ ಜಿಜ್ಞಾಸೆ ಹೊಂದಿದವರಾಗಿ ಭಾರತಕ್ಕೆ ಹಿಂತಿರುಗಿ ವಿಧಿವತ್ತಾಗಿ ಸಂನ್ಯಾಸ ಸ್ವೀಕರಿಸಿ, ಹೃಷೀಕೇಶದಲ್ಲಿ ದಿವ್ಯಜೀವನ ಸಂಘವನ್ನು ಸ್ಥಾಪಿಸಿದರು. ಬಾಲಕೃಷ್ಣ ಮೆನನ್ ಅವರು ಶಿವಾನಂದರ ಜೀವನ ಹಾಗೂ ಅವರ ಕಾರ್ಯಗಳನ್ನು ನೋಡಿ ತಮ್ಮ ತಪ್ಪು ತಿಳುವಳಿಕೆಯನ್ನು ಬದಲಿಸಿಕೊಂಡು, ಕೆಲಕಾಲ ಅಲ್ಲೆ ವಾಸಿಸಿದರು. ಅಧ್ಯಾತ್ಮಗ್ರಂಥಗಳೆಂದರೆ ಸತ್ತಮೇಲಿನ ವಿಚಾರವನ್ನು ಹೇಳುತ್ತವೆ ಎಂದುಕೊಂಡಿದ್ದ ಚಿನ್ಮಯರಿಗೆ ಪರಮಾಶ್ಚರ್ಯ ಕಾದಿತ್ತು. ಶಿವಾನಂದರು ಇಂಗ್ಲಿಷ್​ನಲ್ಲಿ ಪ್ರವಚನ ಮಾಡುತ್ತಿದ್ದುದರಿಂದ ಇವರಿಗೆ ನಮ್ಮ ಶಾಸ್ತ್ರಗಳ ಸರಿಯಾದ ಪರಿಚಯವಾಯಿತು. ಸನಾತನ ಗ್ರಂಥಗಳು ಮಾನವನ ವ್ಯಕ್ತಿತ್ವ ನಿರ್ಮಾಣ ಮಾಡುವ ಪುಸ್ತಕಗಳು ಎಂಬುದು ಸ್ಪಷ್ಟವಾಯಿತು. ನಂತರ ಮೆನನ್​ಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗತೊಡಗಿತು. ನಿತ್ಯವೂ ಶಿವಾನಂದರೊಡನೆ ಸಂವಾದ ಮಾಡುತ್ತಿದ್ದರು. ಇವರ ಆಸಕ್ತಿಯನ್ನು ಗುರುತಿಸಿದ ಶಿವಾನಂದರು 1946ರ ಶಿವರಾತ್ರಿಯಂದು ಬಾಲಕೃಷ್ಣ ಮೆನನ್​ಗೆ ಸಂನ್ಯಾಸವನ್ನು ನೀಡಿ, ಸ್ವಾಮೀ ಚಿನ್ಮಯಾನಂದ ಸರಸ್ವತಿ ಎಂಬ ನಾಮಧೇಯವನ್ನು ನೀಡಿದರು. ಸಂನ್ಯಾಸಿಯಾದರೂ ಚಿನ್ಮಯಾನಂದರ ಜ್ಞಾನದಾಹ ಇಂಗಲಿಲ್ಲ. ಇದನ್ನರಿತ ಶಿವಾನಂದರು ಅವರನ್ನು ಉತ್ತರಕಾಶಿಯಲ್ಲಿದ್ದ ಸ್ವಾಮೀ ತಪೋವನ ಮಹರಾಜರ ಬಳಿ ಹೆಚ್ಚಿನ ವ್ಯಾಸಂಗಕ್ಕಾಗಿ ಕಳುಹಿಸಿದರು.

    ಸ್ವಾಮೀ ತಪೋವನ ಮಹಾರಾಜರು ಸಂಸ್ಕೃತಪಂಡಿತರು ಮಾತ್ರವಲ್ಲ, ಶ್ರೋತ್ರಿಯರೂ, ಬ್ರಹ್ಮನಿಷ್ಠರೂ ಆಗಿದ್ದರು. ಚಿನ್ಮಯಾನಂದರು ಹಲವಾರು ವರ್ಷ ಅಲ್ಲಿ ವೇದಾಂತವನ್ನು ಕಲಿತರು.

    ಗಂಗೆ ಹಿಮಾಲಯದ ಜನರಿಗೆ ಪರಮ ಪವಿತ್ರ ನದಿ. ಸ್ವಾಮೀ ಚಿನ್ಮಯಾನಂದರೂ ಗಂಗೆಯಿಂದ ಉತ್ತೇಜಿತರಾದರು. ಗೋಮುಖದಲ್ಲಿ ಹುಟ್ಟಿದ ಗಂಗೆ ಕೊನೆಗೆ ಕೊಲ್ಕತ್ತಾದಲ್ಲಿ ಗಂಗಾಸಾಗರವನ್ನು ಸೇರುವವರೆಗೆ ಹಲವಾರು ಪುಣ್ಯಕ್ಷೇತ್ರಗಳಿವೆ. ಗಂಗೆಯನ್ನು ವ್ಯವಸಾಯಕ್ಕೆ ಉಪಯೋಗಿಸುವ ರೈತರಿಗಂತೂ ಗಂಗೆ ಜೀವನದಿ. ಸಾಧು ಸಂತರಿಗೆ ಪವಿತ್ರ ನದಿ. ಉತ್ತರಕಾಶಿಯಲ್ಲಿ ಗಂಗೆಯ ಹಲವಾರು ಕಾರ್ಯಗಳನ್ನು ಗಮನಿಸಿದ ಗುರುದೇವರಿಗೆ ನಾನೇಕೆ ಈ ಜ್ಞಾನಗಂಗೆಯನ್ನು ಭಾರತದಲ್ಲಿ ಹಂಚಬಾರದು ಎಂಬ ಆಲೋಚನೆ ಬಂದಿತು. ಸ್ವಾಮೀ ತಪೋವನ ಮಹಾರಾಜರಿಂದ ಅನುಮತಿ ಪಡೆದು ಹಿಮಾಲಯದಿಂದ ದಕ್ಷಿಣದತ್ತ ಪ್ರಯಾಣ ಬೆಳೆಸಿದರು. 1951ರ ಡಿ. 31ರಂದು ಪುಣೆಯಲ್ಲಿ ಮೊದಲು ಆರಂಭವಾದ ಅವರ ಪ್ರವಚನಮಾಲೆ ಅವಿರತವಾಗಿ 43 ವರ್ಷಗಳ ಕಾಲ ನಡೆಯಿತು. ದೇಶವಿದೇಶಗಳಲ್ಲಿ ವಿಖ್ಯಾತರಾದರು. 1965ರಲ್ಲಿ ಮುಂಬೈನ ಪೊವಾಯ್ನಲ್ಲಿ ಸಾಂದೀಪನಿ ಸಾಧನಾಲಯವನ್ನು ಪ್ರಾರಂಭಿಸಿದರು. ದೇಶ ವಿದೇಶಗಳಿಂದ ಯುವಕ ಯುವತಿಯರು ಎರಡು ವರ್ಷಗಳ ಕಾಲ ವೇದಾಂತ, ಭಗವದ್ಗೀತೆ, ರಾಮಾಯಣ ಹಾಗೂ ಭಾಗವತ ಪುರಾಣಗಳನ್ನು ಕಲಿಯಲು ಪ್ರಾರಂಭಿಸಿದರು.

    ಈವರೆಗೆ ಸಾವಿರಕ್ಕೂ ಹೆಚ್ಚು ಮುಮುಕ್ಷುಗಳು ಸಾಂದೀಪನಿ ಸಾಧನಾಲಯದ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲಿ ಪ್ರಾರಂಭಗೊಂಡ ಮುಂಬೈನ ಸಾಂದೀಪನಿ ಸಾಧನಾಲಯ, ಮುಂದೆ ಭಾರತದ ಹಲವಾರು ರಾಜ್ಯಗಳಲ್ಲಿ ಅವರವರ ಭಾಷೆಗಳಲ್ಲಿ ಪ್ರಾರಂಭವಾಯಿತು.

    ಇಂದಿನಿಂದ ಕಾರ್ಯಕ್ರಮ: ಇಡೀ ವಿಶ್ವದಾದ್ಯಂತ ಗುರುದೇವ ಸ್ವಾಮೀ ಚಿನ್ಮಯಾನಂದರ 108ನೇ ಜನ್ಮದಿನವನ್ನು ಈ ವರ್ಷ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ 1008 ಮನೆಗಳಲ್ಲಿ ಸ್ವಾಮೀಜಿಯವರ ಪಾದುಕಾ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆಯ ಸಮಾರೋಪ ಮೇ 8 ರಿಂದ 12ರ ವರೆಗೆ ಬೆಂಗಳೂರಿನ ಜೆ.ಪಿ ನಗರದ 4ನೇ ಹಂತದಲ್ಲಿರುವ ಚಿನ್ಮಯ ಮಿಷನ್ನಿನ ಶ್ರೀಪಾದಕ್ಷೇತ್ರದಲ್ಲಿ ನಡೆಯಲಿದೆ. ಮೇ 12ರ ಬೆಳಿಗ್ಗೆ 10 ರಿಂದ 1 ರವರೆಗೆ ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರರು ಹಾಗೂ ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸ ಆಶ್ರಮದ ಜಗದ್ಗುರು ಶ್ರೀ ಜಯೇಂದ್ರ ಪುರಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಮಹೋತ್ಸವವು ಸಮಾರೋಪಗೊಳ್ಳಲಿದೆ.

    ಬೆಂಗಳೂರಿನಲ್ಲಿ ಲಾಂಗ್‌ನಿಂದ ಹೊಡೆದು ರೌಡಿಶೀಟರ್ ಬರ್ಬರ ಹತ್ಯೆ!

    ಹರಿಯಾಣ: ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದ ಮೂವರು ಪಕ್ಷೇತರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts