More

    ಹೆದ್ದಾರಿ ಬೈಪಾಸ್‌ಗಾಗಿ ಕೆರೆ ಜಾಗ ಒತ್ತುವರಿ : ವಿಧಾನಸಭೆ ಭರವಸೆ ಸಮಿತಿ ಭೇಟಿ ವೇಳೆ ದೃಢ, ಅಧಿಕಾರಿಗಳು ಗುತ್ತಿಗೆ ಸಂಸ್ಥೆ ಬೇಜವಾಬ್ದಾರಿ, ನಿರ್ಲಕ್ಷ್ಯ ಆರೋಪ

    ಚನ್ನಪಟ್ಟಣ : ಎನ್‌ಎಚ್ 275 ಬೈಪಾಸ್ ಕಾಮಗಾರಿಗಾಗಿ ಹತ್ತಾರು ಎಕರೆ ಕೆರೆ-ಕಟ್ಟೆಗಳ ಜಾಗ ಒತ್ತುವರಿ ಮಾಡಿಕೊಂಡಿರುವುದು ಬಹಿರಂಗಗೊಂಡಿದೆ. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೆ ಹಲವು ಕೆರೆಗಳನ್ನು ಬಲಿಕೊಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಖುದ್ದು ವಿಧಾನಸಭೆ ಭರವಸೆ ಸಮಿತಿ ಸದಸ್ಯರು ಸ್ಥಳ ಪರಿಶೀಲಿಸಿದ್ದಾಗ ಸಾಕಷ್ಟು ಕೆರೆ-ಕಟ್ಟೆಗಳನ್ನು ಕಾನೂನುಬಾಹಿರವಾಗಿ ಮುಚ್ಚಿರುವುದು ದೃಢಪಟ್ಟಿದೆ.

    ರಸ್ತೆ ಕಾಮಗಾರಿ ಭರದಿಂದ ಸಾಗಿದ್ದು, ಬೆಂಗಳೂರಿನ ಕೆಂಗೇರಿ ಬಳಿಯಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆಯವರೆಗೆ ಪ್ರಸ್ತುತ ಇರುವ 130 ಕಿ.ಮೀ. 4 ಪಥದ ರಸ್ತೆಯನ್ನು 10 ಪಥದ ರಸ್ತೆಯನ್ನಾಗಿ ವಿಸ್ತರಣೆ ಮಾಡುವ ಕಾಮಗಾರಿ ಇದಾಗಿದೆ.

    ಬಿಡದಿ ಬಳಿ ಒಟ್ಟು 6.9 ಕಿ.ಮೀ. ಬೈಪಾಸ್ ರಸ್ತೆ, ರಾಮನಗರದ ಬಸವನಪುರದಿಂದ ಚನ್ನಪಟ್ಟಣದ ಬೈರಾಪಟ್ಟಣದವರೆಗೆ 22 ಕಿ.ಮೀ. ಬೈಪಾಸ್ ರಸ್ತೆ ಹಾಗೂ ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ 23 ಕಿ.ಮೀ. ಬೈಪಾಸ್ ರಸ್ತೆಯನ್ನು ಈ ಕಾಮಗಾರಿ ಹೊಂದಿದೆ. ನಗರ ಪ್ರದೇಶಗಳ ಹೊರವಲಯದಲ್ಲಿ ಹಾದು ಹೋಗುವ ರಸ್ತೆ ಕಾಮಗಾರಿಗೆ ಸಾಕಷ್ಟು ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

    ಬೈಪಾಸ್ ರಸ್ತೆ ಹಾದು ಹೋಗುವುದು ಬಹುತೇಕ ಗ್ರಾಮೀಣ ಪ್ರದೇಶದಲ್ಲಿ. ಕಾಮಗಾರಿ ನಡೆಯುತ್ತಿರುವ ಇಕ್ಕೆಲಗಳಲ್ಲಿ ಸಿಗುವ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸುಮಾರು ಹತ್ತಕ್ಕೂ ಹೆಚ್ಚಿನ ಜಿಪಂ ಹಾಗೂ ಸಣ್ಣನೀರಾವರಿ ಇಲಾಖೆಯ ಕೆರೆ-ಕಟ್ಟೆಗಳನ್ನು ಬೇಕಾಬಿಟ್ಟಿಯಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದು ಬಹಿರಂಗಗೊಂಡಿದೆ.

    ರಸ್ತೆಗಾಗಿ ಹಾಗೂ ಕಾಮಗಾರಿಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಅಧಿಕಾರಿಗಳು ನಿಯಮಬಾಹಿರವಾಗಿ ಹಲವು ಕೆರೆಗಳ ಹತ್ತಾರು ಎಕರೆ ಜಾಗ ಕಬಳಿಸಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಕೆರೆ-ಕಟ್ಟೆಗಳು ಸ್ವರೂಪ ಕಳೆದುಕೊಂಡಿರುವುದು ವಾಸ್ತವದ ಸಂಗತಿಯಾಗಿದೆ.

    ಯೋಜನಾ ನಿರ್ದೇಶಕರ ವಿರುದ್ಧ ಗರಂ : ಸರ್ಕಾರಿ ಕೆರೆ ಒತ್ತುವರಿ ಮಾಡಿಕೊಳ್ಳುವುದು ಅಕ್ಷಮ್ಯ ಅಪರಾಧ. ಈ ಕಾಮಗಾರಿಗಾಗಿ ಸಾಕಷ್ಟು ನಿಯಮಬಾಹಿರ ಕೆಲಸಗಳನ್ನು ಮಾಡಿರುವುದು ಮೇಲ್ನೋಟಕ್ಕೆ ಕಾಣಸುತ್ತಿದೆ. ಇಷ್ಟೆಲ್ಲ ನಡೆದಿದ್ದರೂ, ನೀವೇನು ಮಾಡುತ್ತಿದ್ದೀರಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಸರ್ಕಾರದ ಆಸ್ತಿ-ಪಾಸ್ತಿಗಳನ್ನು ಉಳಿಸುವುದು ನಿಮ್ಮ ಕರ್ತವ್ಯವಾಗಬೇಕೇ ಹೊರತು, ಯಾವುದೋ ಗುತ್ತಿಗೆ ಕಂಪನಿಗೆ ನಿಮ್ಮ ನಿಷ್ಠೆ ಇರಬಾರದು ಎಂದು ಬೈಪಾಸ್ ರಸ್ತೆ ಕಾಮಗಾರಿಯ ಯೋಜನಾ ನಿರ್ದೇಶಕ ಶೀಧರ್ ವಿರುದ್ಧ ವಿಧಾನಸಭೆ ಭರವಸೆ ಸಮಿತಿ ಸದಸ್ಯರು ಗರಂ ಆದರು.

    ಸದನ ಸಮಿತಿಗೆ ದರ್ಶನ : ರಸ್ತೆ ಕಾಮಗಾರಿಗೆ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿರುವ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ವಿಧಾನಸಭೆ ಭರವಸೆ ಸದನ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ನೇತೃತ್ವದ ಸಮಿತಿಯ ಸದಸ್ಯರು ಜಿಲ್ಲೆಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಕೆರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರು ದಕ್ಷಿಣ ತಾಲೂಕಿನ ಅಗರ ಕೆರೆಯಿಂದ ಆರಂಭವಾದ ಈ ಸಮಿತಿಯ ಭೇಟಿ, ರಾಮನಗರದ ಲಕ್ಷ್ಮೀಸಾಗರ ಕೆರೆ, ಕೇತಿಗಾನಹಳ್ಳಿ ಕೆರೆ ಹಾಗೂ ತಾಲೂಕಿನ ತಿಟ್ಟಮಾರನಹಳ್ಳಿ ಕೆರೆಗಳಿಗೆ ಭೇಟಿ ನೀಡಿ ಒತ್ತುವರಿಯಾಗಿರುವ ಕೆರೆಯ ಜಾಗ ಪರಿಶೀಲಿಸಿದರು. ಈ ವೇಳೆ ನಿಯಮಬಾಹಿರವಾಗಿ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಸಂಸ್ಥೆ ಈ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಸಮಿತಿಯ ಸದಸ್ಯರಿಗೆ ದರ್ಶನವಾಯಿತು.

    ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರುವ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರಸ್ತೆ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಗುತ್ತಿಗೆ ಸಂಸ್ಥೆ ಉದ್ಧಟತನ ತೋರಿದೆ. ಅಷ್ಟೆ ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯೂ ಎದ್ದು ಕಾಣುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ.
    ರವೀಂದ್ರ ಶ್ರೀಕಂಠಯ್ಯ
    ಭರವಸೆ ಸಮಿತಿ ಸದಸ್ಯ
    ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರುವ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರಸ್ತೆ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಗುತ್ತಿಗೆ ಸಂಸ್ಥೆ ಉದ್ಧಟತನ ತೋರಿದೆ. ಅಷ್ಟೆ ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯೂ ಎದ್ದು ಕಾಣುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ.
    ರವೀಂದ್ರ ಶ್ರೀಕಂಠಯ್ಯ
    ಭರವಸೆ ಸಮಿತಿ ಸದಸ್ಯ

    ಎರಡು ವಾರಗಳಲ್ಲಿ ತಪ್ಪುಗಳನ್ನು ಸರಿಪಡಿಸಿ : ತಾಲೂಕಿನ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆಗೆ ಗುರುವಾರ ವಿಧಾನಸಭೆ ಭರವಸೆಗಳ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಸಮಿತಿ ಭೇಟಿನೀಡಿ ಪರಿಶೀಲನೆ ನಡೆಸಿದರು.
    ರಸ್ತೆ ಕಾಮಗಾರಿಗಾಗಿ ರಾಮಮ್ಮನ ಕೆರೆಯ ಕೋಡಿ ಮುಚ್ಚಿ ಮೇಲ್ಸೆತುವೆ ನಿರ್ಮಿಸುತ್ತಿರುವುದನ್ನು ಕಂಡ ಸಮಿತಿಯ ಸದಸ್ಯರು, ಯೋಜನಾ ನಿರ್ದೇಶಕ ಶ್ರೀಧರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದರು.

    ವಿಶಾಲವಾಗಿರುವ ಈ ಕೆರೆಯ ನೀರು ಹರಿದುಹೋಗಲು ಇರುವ ಕೋಡಿಯನ್ನು ಮುಚ್ಚಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು.

    ಈ ಬಗ್ಗೆ ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಕಾಮಗಾರಿಗೆ ಬಳಸಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆಯಷ್ಟೇ, ಆದರೆ, ಗುತ್ತಿಗೆ ನಿರ್ವಹಿಸುತ್ತಿರುವ ಸಂಸ್ಥೆ ನಿಯಮ ಮೀರಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದೆ ಎಂದರು.

    ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಯ ವತಿಯಿಂದ ತಿಳಿಹೇಳಲಾಗಿದೆ. ಆದರೆ, ಅಧಿಕಾರಿಗಳನ್ನು ಗುತ್ತಿಗೆ ಸಂಸ್ಥೆ ಸಿಬ್ಬಂದಿ ಬೆದರಿಸಿ ಕಳುಹಿಸುವ ಮೂಲಕ ದೌರ್ಜನ್ಯ ನಡೆಸಿರುವ ಸಾಕ್ಷಿಯಿದೆ ಎಂದು ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಸಿ. ಮೃತ್ಯುಂಜಯಸ್ವಾಮಿ ಸದನ ಸಮಿತಿಯ ಸದಸ್ಯರ ಗಮನಕ್ಕೆ ತಂದರು.

    ಸರ್ಕಾರಕ್ಕೆ ನಿಷ್ಠರಾಗಿರಿ: ಕೆರೆಯನ್ನು ಮುಚ್ಚುವ ಕ್ರಮ ಹಾಗೂ ಇನ್ನಿತರ ದೂರುಗಳ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಮೇಲೆ ಸಮಿತಿ ಅಧ್ಯಕ್ಷ ರಘುಪತಿಭಟ್, ಸದಸ್ಯ ರವೀಂದ್ರ ಶ್ರೀಕಂಠಯ್ಯ ಗರಂ ಆದರು. ಕೂಡಲೇ ಕೆರೆಯ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಿ.

    ಒತ್ತುವರಿಯಾಗಿರುವ ಜಾಗದಷ್ಟೇ ಜಮೀನನ್ನು ಸಂಬಂಧಪಟ್ಟವರು ಸ್ವಾಧೀನ ಪಡಿಸಿ, ಕೆರೆಯ ಜಾಗಕ್ಕೆ ನೀಡಬೇಕು. ಇನ್ನೆರಡು ವಾರಗಳಲ್ಲಿ ಈ ಎಲ್ಲ ತಪ್ಪುಗಳನ್ನು ಸರಿಪಡಿಸಬೇಕು. ಇಲ್ಲವಾದರೆ, ಮುಂದಿನ ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಕೆ.ರಘುಪತಿಭಟ್, ಈ ರಸ್ತೆ ಕಾಮಗಾರಿಗಾಗಿ ಸಾಕಷ್ಟು ಕೆರೆಕಟ್ಟೆಗಳನ್ನು ಒತ್ತುವರಿ ಮಾಡಲಾಗಿದೆ ಎಂಬ ದೂರುಬಂದ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರು ಭೇಟಿ ನೀಡಿದ್ದೇವೆ. ಈ ವೇಳೆ ಸಾಕಷ್ಟು ಕೆರೆಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ.

    ಗುತ್ತಿಗೆ ನಿರ್ವಹಣೆಯ ಸಂಸ್ಥೆ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ವಷ್ಟವಾಗಿದೆ. ಹಿರಿಯ ಅಧಿಕಾರಿಗಳು ಗುತ್ತಿಗೆ ಕಂಪನಿ ಜತೆ ಶಾಮೀಲಾಗಿರುವ ಶಂಕೆಯಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

    ಸಮಿತಿ ಸದಸ್ಯರಾದ ರವೀಂದ್ರ ಶ್ರೀಕಂಠಯ್ಯ, ರಾಮಪ್ಪ, ಹರೀಶ್ ಪೂಂಜಾ, ಸಂಜೀವ ಮಠಂದೂರು, ವೆಂಕಟರೆಡ್ಡಿ ಮುದ್ನಾಳ್, ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಯೋಜನಾ ನಿರ್ದೇಶಕ ಶ್ರೀಧರ್ ಇತರರು ಇದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts