More

    ಹೆಚ್ಚುತ್ತಿವೆ ಅನಧಿಕೃತ ನಿವೇಶನಗಳು!

    ಶಿರಸಿ; ಕಂದಾಯ ಭೂಮಿಯನ್ನು ತುಂಡು ಭೂಮಿಯನ್ನಾಗಿ ವಿಭಜಿಸಿ ಅನಧಿಕೃತ ಬಡಾವಣೆ, ನಿವೇಶನಗಳಾಗಿ ಮಾರುತ್ತಿರುವ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಶಿರಸಿ ನಗರ ಯೋಜನಾ ಪ್ರಾಧಿಕಾರ ಕಠಿಣ ಹೆಜ್ಜೆಯಿಟ್ಟಿದೆ.

    ನಗರ ವ್ಯಾಪ್ತಿಯ ಹಲವೆಡೆ ಬಡಾವಣೆ, ನಿವೇಶನಗಳು, ನಿವೇಶನಗಳಲ್ಲಿ ನಿರ್ವಿುಸಿರುವ ಮನೆಗಳು ಅಥವಾ ಕೃಷಿ ಜಮೀನಿನಲ್ಲಿ ಕಟ್ಟಡ ಕಟ್ಟಲು ಅನಧಿಕೃತ ಜಾಗವನ್ನು ಮಾರಲಾಗುತ್ತಿದೆ. ವಿಭಜಿಸಿದ ಭೂಮಿಯನ್ನು ಬಿನಶೇತ್ಕಿ ಅಥವಾ ಅಧಿಕೃತಗೊಳಿಸಲು, ವಿನ್ಯಾಸ ಅನುಮೋದನೆಗಾಗಿ ಪ್ರಾಧಿಕಾರದ ಕಚೇರಿಗೆ ಸಲ್ಲಿಸಲಾಗುತ್ತಿದೆ. ಇಂತಹ ಜಮೀನುಗಳಿಗೆ ನಗರ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯುವ ಪ್ರಸ್ತಾವನೆಗಳು ತಿರಸ್ಕೃತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ, ಇದ್ಯಾವುದರ ಪರಿವೆಯಿಲ್ಲದ ಜನರು ಭೂಮಾಲೀಕರು, ಮಧ್ಯವರ್ತಿಗಳಿಂದ ನಿವೇಶನ ಖರೀದಿಸಿ ಮೋಸ ಹೋಗುತ್ತಿದ್ದಾರೆ.

    ಬಹುತೇಕ ಅನಧಿಕೃತ: ಯಾವುದೇ ಖಾಸಗಿ ಅಧಿಕೃತ ವಿನ್ಯಾಸವನ್ನು ರಚಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಕಲಂ 17ರಡಿಯಲ್ಲಿ ಮಾತ್ರ ಅವಕಾಶವಿದೆ. ನಿವೇಶನವಾಗಲು ನಗರ ಯೋಜನಾ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕಾಗುತ್ತದೆ.

    ನಿಯಮದ ಅನುಸಾರ ನಿಯಮಿತ ರಸ್ತೆ ಪರಿಚಲನೆ, ಅಗಲ, ಉದ್ಯಾನವನ, ಬಯಲು ಜಾಗ, ಸಾರ್ವಜನಿಕ ಸ್ಥಳ ಬೆಳವಣಿಗೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಷರತ್ತಿಗೊಳಪಟ್ಟು ನಗರ ಯೋಜನಾ ಪ್ರಾಧಿಕಾರವು ವಿನ್ಯಾಸವನ್ನು ಅನುಮೋದಿಸುತ್ತದೆ. ಆದರೆ, ಬಹುತೇಕ ನಿವೇಶನಗಳು ಲ್ಯಾಂಡ್ ಮಾಫಿಯಾದವರ ಕೈಯಲ್ಲಿರುವುದರಿಂದ ಅವು ಅನಧಿಕೃತವಾಗಿದ್ದು, ಪ್ರಾಧಿಕಾರದ ಒಪ್ಪಿಗೆ ಪಡೆಯದೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಮೌಲ್ಯಕ್ಕೆ ಭೂಮಿ, ನಿವೇಶನ ಮಾರುತ್ತಿದ್ದಾರೆ. ತಾಲೂಕಿನಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಶಿರಸಿ ನಗರ ಯೋಜನಾ ಪ್ರಾಧಿಕಾರದ ಗಮನಕ್ಕೆ ಬಂದಿದ್ದು, ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ.

    ಕಾನೂನು ಕ್ರಮಕ್ಕೆ ತಯಾರಿ: ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಪ್ರಾಧಿಕಾರದ ಅನುಮೋದನೆ ಪಡೆಯದೆ ಅನಧಿಕೃತ ಬಡಾವಣೆ ನಿರ್ವಿುಸುತ್ತಿರುವ ಮಾಲೀಕರ ವಿರುದ್ಧ ಕ್ರಮಜರುಗಿಸಲು ಅವಕಾಶವಿದ್ದು, ಅದನ್ನು ಪ್ರಯೋಗಿಸಲು ಮುಂದಾಗಿದೆ. ಅನಧಿಕೃತ ಬಡಾವಣೆಯನ್ನು ರಚಿಸುತ್ತಿರುವ ವಿನ್ಯಾಸದ ಮಾಲೀಕರು, ಅಭಿವೃದ್ಧಿದಾರರು, ಜಿಪಿಎ ಹೋಲ್ಡರ್, ನಿವೇಶನದ ಮಾಲೀಕರು ಜನರಿಗೆ ಮೋಸ ಮಾಡಬಾರದು. ಒಂದೊಮ್ಮೆ ಇಂತಹ ಪ್ರಕರಣಗಳು ಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ.

    ಸೌಲಭ್ಯ ಇರುವ ಬಡಾವಣೆಯೆಂದು ನಿವೇಶನ ಖರೀದಿಸಲಾಗಿತ್ತು. ಆದರೆ, ಈ ಬಡಾವಣೆ ಯೋಜನಾ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬುದು ಆಘಾತ ತಂದಿದೆ. ಸಾಕಷ್ಟು ವರ್ಷದ ಶ್ರಮದ ಹಣವನ್ನು ನಿವೇಶನಕ್ಕಾಗಿ ಹಾಕಿದರೂ ಅನಧಿಕೃತ ನಿವೇಶನವನ್ನೇ ಪಡೆದಂತಾಗಿದೆ. ಜನರು ಎಚ್ಚರಿಕೆಯಿಂದ ಖರೀದಿಸಬೇಕು. | ಕೆ.ಆರ್. ನಾಯಕ ನಿವೇಶನ ಖರೀದಿದಾರ

    ಅನಧಿಕೃತ ನಿವೇಶನಗಳ ಮಾರಾಟ ಅಪರಾಧವಾಗಿದೆ. ಇದರಿಂದ ಸರ್ಕಾರಿ ಬೊಕ್ಕಸಕ್ಕೆ ನಷ್ಟ ಆಗುತ್ತದೆ. ಬಡಾವಣೆ ಮಾಡಿ ನಿವೇಶನ ಮಾರುವವರು ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. | ಆಕೃತಿ ಬನ್ಸಾಲ್ ಉಪವಿಭಾಗಾಧಿಕಾರಿ

    ಯೋಚಿಸಿ ಖರೀದಿಸಿ ಎಂದ ಪ್ರಾಧಿಕಾರ ನಗರದ ಸೌಂದರ್ಯ ಉಳಿಸಿ ವೈಜ್ಞಾನಿಕವಾಗಿ ಬೆಳೆಯಲು ಎಲ್ಲ ಸಾರ್ವಜನಿಕರು ಸಹಕರಿಸಬೇಕು. ಯಾವುದೇ ನಿವೇಶಗಳನ್ನು ಖರೀದಿಸುವ ಮುನ್ನ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವುದನ್ನು ಖಚಿತ ಪಡಿಸಿಕೊಂಡು ನಿವೇಶನಗಳನ್ನು ಖರೀದಿಸಬೇಕು. ಖರೀದಿಸಿ ಮೋಸ ಹೋದರೆ ಅಥವಾ ನಷ್ಟಕ್ಕೊಳಗಾದಲ್ಲಿ ಪ್ರಾಧಿಕಾರವು ಜವಾಬ್ದಾರಿಯಲ್ಲ ಎಂದು ಪ್ರಕಟಣೆಯನ್ನು ಈಗಾಗಲೇ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts