More

    ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ 91 ಲಕ್ಷ ರೂ. ನಷ್ಟ

    ಹುಬ್ಬಳ್ಳಿ: ಕರೊನಾ ವೈರಸ್ ಆತಂಕ ರೈಲು ಪ್ರಯಾಣದ ಮೇಲೆಯೂ ಸಾಕಷ್ಟು ಪರಿಣಾಮ ಬೀರಿದ್ದು, ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿವೊಂದರಲ್ಲಿಯೇ ಕೇವಲ 7 ದಿನಗಳಲ್ಲಿ ಒಟ್ಟು 24,294 ಪ್ರಯಾಣಿಕರು ಮುಂಗಡ ಟಿಕೆಟ್ ರದ್ದುಗೊಳಿಸಿದ್ದಾರೆ.

    ಇದರಿಂದಾಗಿ ಹುಬ್ಬಳ್ಳಿ ವಿಭಾಗಕ್ಕೆ ಸುಮಾರು 91 ಲಕ್ಷ ರೂ. ನಷ್ಟವಾಗಿದೆ. ಮುಂಗಡ ಟಿಕೆಟ್ ರದ್ದುಗೊಳಿಸುವ ಪ್ರಯಾಣಿಕರ ಸಂಖ್ಯೆ ನಿತ್ಯ ಹೆಚ್ಚುತ್ತಿದೆ. ಇದರೊಂದಿಗೆ ನಿತ್ಯ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಇಳಿಮುಖವಾಗುತ್ತಿದೆ.

    ಸದಾ ಪ್ರಯಾಣಿಕರ ದಟ್ಟಣೆ ಕಾಣಿಸುತ್ತಿದ್ದ ಮುಂಗಡ ಟಿಕೆಟ್ ಕೌಂಟರ್​ಗಳು, ಮುಂಗಡ ರಹಿತ ಟಿಕೆಟ್ ಕೌಂಟರ್​ಗಳು, ಪ್ಲಾಟ್​ಫಾಮರ್್​ಗಳು ಕಳೆದ ನಾಲ್ಕೈದು ದಿನಗಳಿಂದ ಬಿಕೋ ಎನ್ನುತ್ತಿವೆ. ರೈಲು ನಿಲ್ದಾಣಗಳತ್ತ ಸುಳಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

    ಹುಬ್ಬಳ್ಳಿ ರೈಲ್ವೆ ವಿಭಾಗದ ವಿವಿಧ ನಿಲ್ದಾಣಗಳಿಂದ ಮಾ. 12 ರಿಂದ 18ರವರೆಗೆ ಮುಂಗಡ ಟಿಕೆಟ್​ಗಳನ್ನು ಕಾಯ್ದಿರಿಸಿದ್ದ 36,731 ಪ್ರಯಾಣಿಕರಲ್ಲಿ 24,294 ಪ್ರಯಾಣಿಕರು ಪ್ರಯಾಣ ರದ್ದುಗೊಳಿಸಿದ್ದಾರೆ. ಇದರಿಂದಾಗಿ ಹುಬ್ಬಳ್ಳಿ ರೈಲ್ವೆ ವಿಭಾಗ 91.03 ಲಕ್ಷ ರೂ.ಗಳ ಮುಂಗಡ ಟಿಕೆಟ್ ಶುಲ್ಕವನ್ನು ಪ್ರಯಾಣಿಕರಿಗೆ ಹಿಂದುರಿಗಿಸಿದೆ ಎಂದು ಮೂಲಗಳು ತಿಳಿಸಿವೆ.

    ಕಾಯ್ದಿರಿಸದೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿಯೂ ಇಳಿಕೆಯಾಗಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಮಾ. 1 ರಂದು 4,210 ಟಿಕೆಟ್ ಪಡೆದ 6,072 ಪ್ರಯಾಣಿಕರು ಸಂಚರಿಸಿದ್ದು, 13.99 ಲಕ್ಷ ರೂ. ಆದಾಯ ಬಂದಿತ್ತು. ಮಾ. 2ರಂದು 4,122 ಟಿಕೆಟ್ ಪಡೆದ 8,055 ಪ್ರಯಾಣಿಕರು ಸಂಚರಿಸಿದ್ದು, 11.67 ಲಕ್ಷ ರೂ. ಆದಾಯವಾಗಿತ್ತು. ಮಾ. 3ರಂದು 3,684 ಟಿಕೆಟ್ ಪಡೆದ 7,790 ಪ್ರಯಾಣಿಕರು ಪಯಣಿಸಿದ್ದು, 13.29 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು.

    ಕಳೆದ ಕೆಲ ದಿನಗಳಿಂದ ಕರೊನಾ ವೈರಸ್ ಆತಂಕ ಹೆಚ್ಚಾದ ನಂತರ ಮಾ. 17ರಂದು 2,643 ಟಿಕೆಟ್ ಪಡೆದ 5,419 ಪ್ರಯಾಣಿಕರಿಂದ 10.63 ಲಕ್ಷ ರೂ. ಹಾಗೂ ಮಾ. 18ರಂದು 2,286 ಟಿಕೆಟ್ ಪಡೆದ 4,418 ಪ್ರಯಾಣಿಕರಿಂದ 7.66 ಲಕ್ಷ ರೂ. ಆದಾಯ ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕರೊನಾ ವೈರಸ್ ರೈಲ್ವೆ ಇಲಾಖೆ ಆದಾಯಕ್ಕೂ ಕೊಕ್ಕೆ ಹಾಕಿದೆ. ಪ್ರಯಾಣಿಕರ ಕೊರತೆಯಿಂದಾಗಿ ಬುಧವಾರವಷ್ಟೇ 5 ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದ ನೈಋತ್ಯ ರೈಲ್ವೆ ವಲಯ, ಗುರುವಾರ ಮತ್ತೆ 32 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಕೇವಲ 2 ದಿನಗಳಲ್ಲಿ ಒಟ್ಟು 37 ರೈಲುಗಳನ್ನು ನೈಋತ್ಯ ರೈಲ್ವೆ ವಲಯ ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಇನ್ನಷ್ಟು ರೈಲುಗಳ ಸಂಚಾರ ರದ್ದುಗೊಳ್ಳುವ ನಿರೀಕ್ಷೆ ಇದೆ.

    ಹುಬ್ಬಳ್ಳಿ ರೈಲ್ವೆ ವಿಭಾಗ ಸೇರಿದಂತೆ ನೈಋತ್ಯ ರೈಲ್ವೆ ವಲಯದ ಇತರ ವಿಭಾಗಗಳಲ್ಲಿಯೂ ಪ್ರಯಾಣಿಕರು ಮುಂಗಡ ಟಿಕೆಟ್​ಗಳನ್ನು ರದ್ದುಗೊಳಿಸುತ್ತಿದ್ದಾರೆ. ಅಂತಹ ಪ್ರಯಾಣಿಕರಿಗೆ ಟಿಕೆಟ್ ಶುಲ್ಕವನ್ನು ವಾಪಸ್ ನೀಡಲಾಗುತ್ತಿದೆ.
    | ಇ. ವಿಜಯಾ, ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts