More

    ಹತ್ತು ಪ್ರದೇಶಗಳು ಸೀಲ್​ಡೌನ್

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 3 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯ 54 ವರ್ಷದ ಪುರುಷ ಹಾಗೂ ಗಣೇಶಪೇಟೆಯ 51 ವರ್ಷದ ಪುರುಷನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇವರಿಬ್ಬರ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ನವಲಗುಂದ ತಾಲೂಕು ಮೊರಬ ಗ್ರಾಮದ 55 ವರ್ಷದ ಮಹಿಳೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಮೊರಬದಲ್ಲಿ 29ನೇ ಪ್ರಕರಣ: ದೆಹಲಿಯಿಂದ ಮೊರಬ ಗ್ರಾಮಕ್ಕೆ ಮರಳಿದ್ದ ಮಹಿಳೆ ಹಾಗೂ ಆಕೆಯನ್ನು ಬೆಂಗಳೂರಿನಿಂದ ಕರೆತಂದಿದ್ದ ತಂದೆಯಿಂದ ಈವರೆಗೆ 26 ಜನರಿಗೆ ಕರೊನಾ ಸೋಂಕು ಹರಡಿತ್ತು. ಶುಕ್ರವಾರ ಮತ್ತೊಬ್ಬ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಮೊರಬ ಗ್ರಾಮವೊಂದರಲ್ಲೇ 29 ಜನರು ಕರೊನಾ ಪೀಡಿತರಾಗಿದ್ದಾರೆ. ಈ ಪೈಕಿ ವೃದ್ಧನೊಬ್ಬ ಮೃತಪಟ್ಟಿದ್ದಾನೆ.

    ಸೀಲ್​ಡೌನ್: ನಗರದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆಗಳು ಏರಿಕೆಯಾಗುತ್ತ ಸಾಗಿದಂತೆ ಸೀಲ್​ಡೌನ್ ಪ್ರದೇಶಗಳೂ ಹೆಚ್ಚಾಗುತ್ತಿವೆ. ನಗರದಲ್ಲಿ ಸದ್ಯ 10 ಪ್ರದೇಶಗಳನ್ನು ಸೀಲ್​ಡೌನ್ ಮಾಡಲಾಗಿದೆ.

    ನಗರದ ಜಿಲ್ಲಾ ಆಸ್ಪತ್ರೆ ಪಕ್ಕದ ಕಟ್ಟಿ ಚಾಳದಲ್ಲಿ ಶಿಕ್ಷಕಿ ಸೇರಿ 8 ಜನರಲ್ಲಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಎಲ್ಲರೂ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಡ್ಡ ಕುಟುಂಬದಲ್ಲಿ 80 ವರ್ಷದ ವೃದ್ಧೆಯೊಬ್ಬರಿದ್ದು, ಸಂಬಂಧಿಕರಿಂದ ಆರೈಕೆ ನಡೆಯುತ್ತಿದೆ. ಈ ಪ್ರದೇಶ ಸೀಲ್​ಡೌನ್ ಆಗಿದ್ದು, ಪಾಲಿಕೆಯಿಂದ ಪ್ರತಿದಿನ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. ಅಲ್ಲಿಯವರು ಹೊರಗೆ ಬರದಂತೆ ಹಾಗೂ ಹೊರಗಿನವರು ಒಳಗೆ ಬರದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಳಗಿರುವ ಕುಟುಂಬದವರಿಗೆ ಈ ಪ್ರದೇಶದ ಕೇಬಲ್ ಆಪರೇಟರ್ ಒಬ್ಬರು ಅಗತ್ಯ ಸಾಮಗ್ರಿ ತಂದು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆತನಿಗೆ ಪಾಲಿಕೆಯಿಂದ ಪಾಸ್ ವ್ಯವಸ್ಥೆ ಮಾಡಲಾಗಿದೆ.

    ನಾಡಗೀರ ಕಾಂಪೌಂಡ್, ತಪೋವನ ಹತ್ತಿರ, ಮಾಳಮಡ್ಡಿ ಗೋಪಾಲಪುರ, ನಾರಾಯಣಪುರ 1ನೇ ಕ್ರಾಸ್, ಸಾಧನಕೇರಿ, ಮರಾಠಾ ಕಾಲನಿ, ಕೆರಿ ಕೆಳಗಿನ ಓಣಿ, ನಗರೇಶ್ವರ ಗುಡಿ ಹತ್ತಿರ, ಯಾಲಕ್ಕಿ ಶೆಟ್ಟರ್ ಕಾಲನಿ ಸೇರಿ 10 ಕಡೆಗಳಲ್ಲಿ ಸೀಲ್​ಡೌನ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಅವರಿಗೆ ದಿನನಿತ್ಯ ಬಳಕೆಗೆ ತರಕಾರಿ, ಔಷಧ, ಹಾಲು, ದಿನಸಿ ಸಾಮಗ್ರಿಗಳನ್ನು ಅವರದೇ ಖರ್ಚಿನಲ್ಲಿ ಪೂರೈಸುವ ವ್ಯವಸ್ಥೆಯನ್ನು ಪಾಲಿಕೆಯಿಂದ ಮಾಡಲಾಗಿದೆ.

    152 ಶಂಕಿತರು ಪತ್ತೆ: ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 152 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಗುರುವಾರ 22,913 ನಿಗಾವಹಿಸಿದವರ ಸಂಖ್ಯೆ ಶುಕ್ರವಾರ 23072ಕ್ಕೆ ಏರಿಕೆಯಾಗಿದೆ.

    ರೋಗ ಲಕ್ಷಣದ ಮಾಹಿತಿ ಕರೊನಾ ಪತ್ತೆಗೆ ಸಹಕಾರಿ: ಕೆಮ್ಮು, ನೆಗಡಿ, ತೀವ್ರ ಜ್ವರದ ಲಕ್ಷಣ ಇರುವವರ ಕುರಿತು ಕೆಪಿಎಂಇ ಅಡಿ ನೋಂದಣಿಯಾಗಿರುವ ವೈದ್ಯರು ತ್ವರಿತವಾಗಿ, ಸಕಾಲಕ್ಕೆ ಮಾಹಿತಿ ನೀಡಬೇಕು. ವೈದ್ಯರ ಸಲಹೆ ಆಧರಿಸಿ ಸರ್ಕಾರ ಅಂಥ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸುತ್ತದೆ. ಕೋವಿಡ್ ತಡೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ತಮ್ಮ ಧಾರವಾಡ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳ ವೈದ್ಯರಿಗೆ ಕೆಪಿಎಂಇ ಪೋರ್ಟಲ್ ಅಪ್​ಡೇಟ್ ಮಾಡುವ ಕುರಿತು ವಿವರಣೆ ನೀಡಿದರು.

    ಕೋವಿಡ್ ತಡೆಗೆ ಕೆಮ್ಮು, ನೆಗಡಿ, ತೀವ್ರ ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಇರುವ ಲಕ್ಷಣಗಳ ವ್ಯಕ್ತಿಗಳು ಖಾಸಗಿ ವೈದ್ಯರ ಬಳಿ ಚಿಕಿತ್ಸೆಗೆ ಬಂದರೆ ತಕ್ಷಣ ಅವರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇತರ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವುದು ವೈದ್ಯರ ಜವಾಬ್ದಾರಿ. ಆಡಳಿತ ವ್ಯವಸ್ಥೆಯು ನಿಖರ ಮಾಹಿತಿಗೆ ವೈದ್ಯರನ್ನೇ ಅವಲಂಬಿಸಿರುತ್ತದೆ. ಜಿಲ್ಲೆಯಲ್ಲಿ ಬಹುತೇಕ ಆಸ್ಪತ್ರೆಗಳು ಮಾಹಿತಿ ನೀಡುತ್ತಿವೆ. ಪ್ರತಿನಿತ್ಯ ಅಪ್​ಡೇಟ್ ವರದಿ ನೀಡದ ಆಸ್ಪತ್ರೆಗಳ ಪಟ್ಟಿ ಲಭ್ಯವಿದೆ. ಅಂತಹ ಆಸ್ಪತ್ರೆಗಳು ಸಕ್ರಿಯವಾಗಿ ಪ್ರತಿದಿನ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್ ಮಾತನಾಡಿ, ಅವಳಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫೀವರ್ ಕ್ಲಿನಿಕ್​ಗಳನ್ನು ಸ್ಥಾಪಿಸಲಾಗಿದೆ. ಅರ್ಹ ಪ್ರಕರಣಗಳನ್ನು ಅಲ್ಲಿಗೆ ಶಿಫಾರಸು ಮಾಡಬೇಕು ಎಂದರು. ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ಶಶಿ ಪಾಟೀಲ, ಡಾ. ತನುಜಾ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಇದ್ದರು.

    ಚರ್ಮರೋಗ, ಮನೋರೋಗ ಮತ್ತಿತರ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ, ಕೆಮ್ಮು, ನೆಗಡಿ, ಜ್ವರದ ಚಿಕಿತ್ಸೆಗೆ ಜನರು ಬರುವುದಿಲ್ಲ. ಆದರೂ ಬಂದಿರುವ ಜನರಲ್ಲಿ ರೋಗ ಲಕ್ಷಣಗಳಿದ್ದರೆ ಹತ್ತಿರದ ಫೀವರ್ ಕ್ಲಿನಿಕ್​ಗಳಿಗೆ ಕಳುಹಿಸಬೇಕು. ಅವರ ಹೆಸರು, ವಿಳಾಸದ ಮಾಹಿತಿಯನ್ನು 1077 ಸಹಾಯವಾಣಿಗೆ ನೀಡಬೇಕು.

    | ಡಾ. ಬಿ.ಸಿ. ಸತೀಶ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts