More

    ನಾಗಲಾಪುರ ಗ್ರಾಮ ಸೀಲ್​ಡೌನ್

    ಬ್ಯಾಡಗಿ: ಸರ್ಕಾರದ ಆದೇಶವಿದ್ದರೂ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಕರೊನಾ ಪರೀಕ್ಷೆಗೆ ಜನ ಒಳಪಡುತ್ತಿಲ್ಲ. ಆರೋಗ್ಯ ಕಾರ್ಯಕರ್ತರು, ತಾಲೂಕಾಡಳಿತಕ್ಕೂ ಸಹಕಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಗ್ರಾಮವನ್ನು ಸೀಲ್​ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ದ್ಯಾಮಣ್ಣನವರ ಗವಿಸಿದ್ದಪ್ಪ ತಿಳಿಸಿದ್ದಾರೆ.

    ಜೂ. 1ರಿಂದ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಲಾಗುವುದು. ಆದರೆ, ಕೆಲವೆಡೆ ಜನರ ಸಹಕಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಗಲಾಪುರ ಗ್ರಾಮವನ್ನು ಸೀಲ್​ಡೌನ್ ಮಾಡಿದ್ದು, ಕಂಟೇನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದೆ. ತಾಲೂಕಿನ ಇನ್ನುಳಿದ ಗ್ರಾಮಗಳಿಗೂ ಘಟನೆ ಎಚ್ಚರಿಕೆ ಗಂಟೆಯಾಗಿದೆ ಎಂದರು.

    12 ಜನರ ಪರೀಕ್ಷೆ: ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು, 500-600 ಜನಸಂಖ್ಯೆ ಹೊಂದಿದೆ. ಜೂ. 3ರಂದು ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಆಡಳಿತ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಕರೊನಾ ಪರೀಕ್ಷೆಗೆ ಮುಂದಾಗಿತ್ತು. ಆದರೆ, ಬೆಳಗ್ಗೆಯಿಂದ ಸಂಜೆಯವರೆಗೂ ಕೇವಲ 12 ಜನರು ಮಾತ್ರ ಪರೀಕ್ಷೆ ಮಾಡಿಸಿಕೊಂಡಿದ್ದರು. ಸ್ವತಃ ತಹಸೀಲ್ದಾರ್ ಜನರ ಮನೆ ಬಾಗಿಲಿಗೆ ಹೋಗಿ ತಿಳಿ ಹೇಳಿದರೂ ಜನರು ಪರೀಕ್ಷೆಗೆ ಒಪ್ಪುತ್ತಿಲ್ಲ. ಇದು ಸರ್ಕಾರದ ಆದೇಶ ಉಲ್ಲಂಘನೆ ಆಗಲಿದ್ದು, ಘಟನೆ ಕುರಿತು ತಹಸೀಲ್ದಾರ್ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು. ಜನರ ನಿರ್ಲಕ್ಷ್ಯ್ಕೆ ತಾಲೂಕಾಡಳಿತ ಬೇಸರ ವ್ಯಕ್ತಪಡಿಸಿದೆ.

    ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ ಸೀಲ್​ಡೌನ್ ಮಾಡಿದ್ದು, ಪೊಲೀಸರ ಕಾವಲು ಹಾಕಲಾಗಿದೆ. ಗ್ರಾಮದಿಂದ ಯಾರೊಬ್ಬರೂ ಹೊರ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

    ಜೂ. 1ರಿಂದ ಸರ್ಕಾರದ ಆದೇಶದಂತೆ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜೂ. 1ರಿಂದ 4 ರವರೆಗೂ 2 ಸಾವಿರ ಜನರ ಪರೀಕ್ಷೆ ನಡೆದಿದೆ. ನಾಗಲಾಪುರ ಗ್ರಾಮಸ್ಥರು ಸಹಕಾರ ನೀಡುತ್ತಿಲ್ಲ. ತಾಲೂಕಿನ ಬೇರೆ ಗ್ರಾಮಗಳಿಗೂ ಜಿಲ್ಲಾಧಿಕಾರಿ ಆದೇಶ ಎಚ್ಚರಿಕೆ ಗಂಟೆಯಾಗಿದೆ. ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಮುಂದಾಗಬೇಕು.

    | ಡಾ. ಸುಹೀಲ್ ಹರವಿ, ತಾಲೂಕು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts