More

    ಹತ್ತಿ ಖರೀದಿ ಕೇಂದ್ರದ ಮುಂದೆ ರೈತರ ಜಾಗರಣೆ

    ಹುಬ್ಬಳ್ಳಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ವಿಳಂಬದಿಂದಾಗಿ ಬೆಳೆಗಾರರು ಟ್ರಾ್ಯಕ್ಟರ್ ತುಂಬಿಕೊಂಡು ಬಂದು ಖರೀದಿ ಕೇಂದ್ರದ ಎದುರು ಮೂರು- ನಾಲ್ಕು ದಿನಗಟ್ಟಲೆ ಮಳೆ, ಗಾಳಿ ಎನ್ನದೇ ಜಾಗರಣೆ ಮಾಡಬೇಕಾದ ಪ್ರಸಂಗ ಬಂದಿದೆ.

    ಕೆಲ ವರ್ತಕರು, ಎಪಿಎಂಸಿ ಸದಸ್ಯರು, ಅಧಿಕಾರಿಗಳು ಶಾಮೀಲಾಗಿ ರೈತರ ಹೆಸರಲ್ಲಿ ಈ ಮೊದಲು ಕಡಿಮೆ ಬೆಲೆಗೆ ಖರೀದಿ ಮಾಡಿಟ್ಟುಕೊಂಡಿದ್ದ ಹತ್ತಿಯನ್ನು ತಮ್ಮ ಪ್ರಭಾವ ಬಳಸಿ ಸಿಸಿಐಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಿಜವಾದ ರೈತರ ಪಾಳಿ ಬರದೇ ಪರದಾಡಬೇಕಾಗಿದೆ ಎಂದು ಎರಡು ದಿನದಿಂದ ಖರೀದಿ ಕೇಂದ್ರದ ಮುಂದೆ ಮೊಕ್ಕಾಂ ಹೂಡಿರುವ ಬೆಳೆಗಾರರು ದೂರಿದ್ದಾರೆ.

    ಹುಬ್ಬಳ್ಳಿ ಎಪಿಎಂಸಿ ಸಹಯೋಗದೊಂದಿಗೆ ಭಾರತೀಯ ಹತ್ತಿ ನಿಗಮ (ಸಿಸಿಐ) ಇಲ್ಲಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಖರೀದಿ ಕೇಂದ್ರ ಆರಂಭಿಸಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಈಗಾಗಲೇ 1300ಕ್ಕೂ ಹೆಚ್ಚು ರೈತರು ಹತ್ತಿ ಮಾರಾಟ ಮಾಡಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ದೂರವಾಣಿ ಕರೆ ಮಾಡಿ ದಿನವೊಂದಕ್ಕೆ 20-30 ರೈತರಿಗೆ ಹತ್ತಿ ತರಲು ಹೇಳಲಾಗುತ್ತಿದೆ.

    ಆದರೆ, ಇದೀಗ ಮಳೆಗಾಲ ಆರಂಭವಾಗಿದ್ದರಿಂದ ರೈತರಿಗೆ ಮನೆಯಲ್ಲಿ ಹತ್ತಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಶೀಘ್ರ ಖರೀದಿ ಪ್ರಕ್ರಿಯೆ ಮುಗಿಸಬೇಕು ಎಂಬುದು ರೈತರ ಒತ್ತಾಯ.

    ಇದುವರೆಗೂ ಕೇವಲ 200 ರೈತರ ಹತ್ತಿ ಖರೀದಿ ಮಾಡಲಾಗಿದೆ. ಸೋಮವಾರ ಒಂದೇ ದಿನ 80ಕ್ಕೂ ಹೆಚ್ಚು ಗಾಡಿಗಳಲ್ಲಿ ಹತ್ತಿ ತರಲಾಗಿತ್ತು. ಬಹುತೇಕ ರೈತರು ಶುಕ್ರವಾರ ಸಂಜೆ ಹಾಗೂ ಶನಿವಾರವೇ ಬಂದಿದ್ದಾರೆ. ಅವರ ಹತ್ತಿ ಖರೀದಿ ಆಗದ ಹಿನ್ನೆಲೆಯಲ್ಲಿ ರಸ್ತೆ ಬದಿ ಮೊಕ್ಕಾಂ ಹೂಡಿದ್ದಾರೆ. ಕರೆ ಮಾಡಿ ಹೇಳದೇ ಇದ್ದರೂ ಸೋಮವಾರ ಬೆಳಗ್ಗೆ ಮತ್ತಷ್ಟು ರೈತರು ಹತ್ತಿ ತಂದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅವರೆಲ್ಲರ ದಾಖಲೆ ಪರಿಶೀಲಿಸಿ ಮಧ್ಯಾಹ್ನದ ವೇಳೆಗೆ ಖರೀದಿ ಪ್ರಕ್ರಿಯೆ ಆರಂಭಿಸಬೇಕಾಯಿತು.

    30 ಗಾಡಿ ಮಾತ್ರ ಸೋಮವಾರ ಖರೀದಿ ಮಾಡಲಾಗುತ್ತದೆ. ಉಳಿದವರಿಗೆ ಟೋಕನ್ ನೀಡಿ ನಾಳೆ ಮತ್ತೆ ಖರೀದಿ ಮಾಡಲಾಗುವುದು ಎಂದು ಸಿಸಿಐ ಅಧಿಕಾರಿ ಗಣೇಶ ಚವ್ಹಾಣ ತಿಳಿಸಿದರು.

    ಸದಸ್ಯರು ಶಾಮೀಲು, ರೈತರ ಆರೋಪ ನೋಂದಣಿ ಮಾಡಿಕೊಂಡ ರೈತರನ್ನು ಮೊದಲು ಕರೆಸಿ ಹತ್ತಿ ಖರೀದಿ ಪ್ರಕ್ರಿಯೆ ಚುರುಕುಗೊಳಿಸಬೇಕಾಗಿತ್ತು. ಆದರೆ, ಕೆಲ ಪ್ರಭಾವಿಗಳು ಶಾಮೀಲಾಗಿ ಬೇಕಾದವರ ಹತ್ತಿಯನ್ನಷ್ಟೇ ಮಾರಾಟ ಮಾಡಿಸಿದ್ದಾರೆ. ನೋಂದಣಿಯಾದ ರೈತರನ್ನು ದೂರ ಇಟ್ಟಿದ್ದಾರೆ ಎಂದು ಖರೀದಿ ಕೇಂದ್ರದ ಮುಂದೆ ಜಮಾಯಿಸಿದ್ದ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಶುರುವಾಗಿದ್ದರಿಂದ ಕಂಗಾಲಾದ ರೈತರು ತಮ್ಮಲ್ಲಿರುವ ಹತ್ತಿ ತುಂಬಿಕೊಂಡು ತಂದಿದ್ದಾರೆ. ಎಲ್ಲರ ಹತ್ತಿ ಖರೀದಿ ಮಾಡಬೇಕು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯಬಾರದು ಎಂದು ರೈತ ಮುಖಂಡ ಗುರು ರಾಯನಗೌಡ್ರ ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಕರೊನಾ ಇದ್ದಿದ್ದರಿಂದ ಬಹಳಷ್ಟು ಕಾರ್ವಿುಕರು ತಮ್ಮ ತಮ್ಮ ಊರಿಗೆ ಹೋಗಿದ್ದು, ಜಿನ್​ಗಳಲ್ಲಿ ಕೆಲಸಗಾರರು ಕಡಿಮೆಯಾಗಿದ್ದಾರೆ. ಆದಾಗ್ಯೂ ಖರೀದಿ ಮುಂದುವರಿಸಲು ತಿಳಿಸಿದ್ದು, ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts