More

    ಸೌಹಾರ್ದವಾಗಿರಲಿ ಈದ್‌ಮಿಲಾದ್-ಗಣೇಶ ಹಬ್ಬ  -ನಾಗರಿಕ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ ಆಶಯ

    ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್‌ಮಿಲಾದ್ ಹಬ್ಬಗಳನ್ನು ಸೌಹಾರ್ದವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನಸ್ಸಿಗೆ ನೆಮ್ಮದಿ, ಸಮಾಜದಲ್ಲಿ ಸಮೃದ್ಧಿ ತರುವುದೇ ಹಬ್ಬಗಳ ಉದ್ದೇಶವಾಗಿದ್ದು ದಾವಣಗೆರೆ ಏಕತೆಯ ನೆಲವಾಗಿದೆ. ಸ್ವಾಸ್ಥೃ ಸಮಾಜಕ್ಕಾಗಿ ಜನರು ಶಾಂತಿಯ ರಾಯಭಾರಿಯಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು.
    ಕೆರೆ ಹಾಗೂ ಜಲಮೂಲಗಳು ಮಲಿನವಾಗದಂತೆ ಹಬ್ಬಗಳನ್ನು ಆಚರಿಸಬೇಕು. ಕೆರೆ ಹಾಗೂ ಸುತ್ತಮುತ್ತಲ ಗ್ರಾಪಂಗಳಲ್ಲಿ ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಬಂಟಿಂಗ್ಸ್ ಅಳವಡಿಸುವಾಗ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದರು.
    ಹಬ್ಬಗಳ ಮೆರವಣಿಗೆಯಲ್ಲಿ ಆ್ಯಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆಯ ಕಿಟ್ ವ್ಯವಸ್ಥೆ ಮಾಡಬೇಕು. ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಅಡಚಣೆ ಆಗದಂತೆ ಬೆಸ್ಕಾಂ ಅಧಿಕಾರಿಗಳು ಪರಿವೀಕ್ಷಣೆ ಮಾಡಬೇಕು. ಗೂಡಂಗಡಿ, ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ತಡೆಗಟ್ಟಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ ಶಾಂತಿಸಾಗರ ಕೆರೆಗೆ ಆರು ಜಾಕ್‌ವೆಲ್‌ಗಳಿದ್ದು ಒಂದರಲ್ಲಿನ ನೀರು ಪೂರೈಕೆ ಪರಿಶೀಲಿಸಲಾಗಿ ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬಂದಿತ್ತು. ಈಗ ಯಾವುದೇ ಸಮಸ್ಯೆ ಇಲ್ಲ. ಕೆರೆ ಮಲಿನವಾಗದಿರಲು ಗಣೇಶ ವಿಸರ್ಜನೆಗೆ ಪರ್ಯಾಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
    ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಬರಹ ಫಾರ್ವರ್ಡ್ ಮಾಡಿದಲ್ಲಿ, ಸುಳ್ಳು ಸುದ್ದಿ ಹರಡಿದಲ್ಲಿ, ಮೆರವಣಿಗೆಯಲ್ಲಿ ಅಸಭ್ಯವಾಗಿ ವರ್ತಿಸಿದರೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
    ಗಣೇಶನನ್ನು ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳು ಜವಾಬ್ದಾರಿ ವಹಿಸಬೇಕು. ಇಲಾಖೆ ಸೂಚನೆಯನ್ನು ಯಾರೂ ಸಹ ಷರತ್ತು ಎಂದು ಭಾವಿಸಬಾರದು. ಗಣಪತಿ ಸಮಿತಿಗಳು ಸಮಸ್ಯೆಗಳಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು.
    ಹನ್ನೊಂದನೇ ದಿನದ ಗಣೇಶ ವಿಸರ್ಜನೆ ದಿನವೇ (ಸೆ..28) ಈದ್‌ಮಿಲಾದ್ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 6 ಗಂಟೆಯೊಳಗೆ ಈದ್‌ಮಿಲಾದ್, ನಂತರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಬೇಕು. ಹಿಂದಿನ ಅವಧಿಯ ಮಾರ್ಗದಲ್ಲಿ ಬದಲಾವಣೆ ಇಲ್ಲ. ಮಿಲಾದ್ ಮೆರವಣಿಗೆಗೆ ಅಶೋಕ ಚಿತ್ರಮಂದಿರ ಮಾರ್ಗದಲ್ಲಿ ಸಮಸ್ಯೆ ಇದ್ದು ಪರಿಶೀಲಿಸಲಾಗುವುದು ಎಂದು ಹೇಳಿದರು.
    ಪಾಲಿಕೆ ಆಯುಕ್ತೆ ಎನ್. ರೇಣುಕಾ ಮಾತನಾಡಿ ಪಾಲಿಕೆಯಿಂದ 30 ಕಡೆ ಹಾಗೂ ಹದಡಿ ರಸ್ತೆ, ಪಿ.ಬಿ ರಸ್ತೆಗಳಲ್ಲಿ ಗಣೇಶ ವಿಸರ್ಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೌರಕಾರ್ಮಿಕರ ಸಮಸ್ಯೆ ಇದ್ದಾಗ್ಯೂ ಪಾಲಿಕೆ ಸ್ವಚ್ಛತೆಗೆ ಆದ್ಯತೆ ನೀಡಿದೆ. ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
    ಹಿಂದು ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಮಾತನಾಡಿ ಎರಡೂ ಧರ್ಮೀಯರ ಸೌಹಾರ್ದಕ್ಕಾಗಿ ದೇವರೇ ಹಬ್ಬಗಳನ್ನು ಒಟ್ಟಿಗೆ ಸೃಷ್ಟಿಸಿದ್ದಾನೆ. ಪರಿಸರ ಇಲಾಖೆ, ಪಾಲಿಕೆ ಅಧಿಕಾರಿಗಳು ಎಚ್ಚತ್ತು ಕೆಲಸ ಮಾಡಬೇಕು ಎಂದರು.
    ಮೆರವಣಿಗೆಯಲ್ಲಿ ಆ್ಯಂಬುಲೆನ್ಸ್, ಪ್ರಥಮಚಿಕಿತ್ಸಾ ಕಿಟ್ ಇರಿಸಬೇಕು ಎಂದು ಎಂ.ಜಿ.ಶ್ರೀಕಾಂತ್, ಭೂಗತ ವಿದ್ಯುತ್ ಕೇಬಲ್‌ಗಳಿರುವ ಕಾರಣಕ್ಕೆ ಕಂಬ ನೆಡುವಾಗ ಅನಾಹುತವಾಗದಿರಲು ಬೆಸ್ಕಾಂ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಟಿ. ಅಸ್ಗರ್ ಸಲಹೆ ನೀಡಿದರು.
    ಹಿಂದು ಮಹಾಗಣಪತಿ ಸಮಿತಿಯಿಂದ 16 ಅಡಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯಲು ಮರಗಳು ಅಡ್ಡವಿವೆ. ಕೆಲವು ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ಹೇಳಿದರು.
    ಕೆ.ಬಿ.ಶಂಕರನಾರಾಯಣ, ಜೆ.ಅಮಾನುಲ್ಲಾಖಾನ್ ಮಾತನಾಡಿ 91-92ರ ಅವಧಿಯಲ್ಲಿ ದಾವಣಗೆರೆಯಲ್ಲಿ ಕೋಮು ಘರ್ಷಣೆಯಾಗಿತ್ತು. ತದನಂತರ ನಗರದಲ್ಲಿ ಶಾಂತಿ ಇದೆ. ಎಲ್ಲ ಹಬ್ಬದಲ್ಲೂ ಸೌಹಾರ್ದ ವಾತಾವರಣವಿದೆ ಎಂದರು.
    ನಗರದ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿವೆ. ಜಲಸಿರಿಯಡಿ ತೆಗೆದ ಕಂದಕಗಳು ಹಾಗೇ ಇವೆ. ಇವನ್ನು ಮುಚ್ಚುವ ಕ್ರಮವಾಗಬೇಕು. ನೀರು, ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಡಿ.ಕುಮಾರ್, ಗೌಡ್ರ ಚನ್ನಬಸಪ್ಪ, ಯಾಸಿಂಪೀರ್ ರಜ್ವಿ ಮೊದಲಾದವರು ಆಗ್ರಹಿಸಿದರು. ಅನಧಿಕೃತ ಮಧ್ಯ ಸಂಗ್ರಹ, ಮಾರಾಟಕ್ಕೆ ಕಡಿವಾಣ ಹಾಕುವಂತೆ ನಾಗರಾಜ್ ಸುರ್ವೆ ಒತ್ತಾಯಿಸಿದರು.
    ಚನ್ನಗಿರಿಯ ಸರ್ದಾರ್ ಅಹ್ಮದ್, ವಿಎಚ್‌ಪಿ ಉಪಾಧ್ಯಕ್ಷ ಮಂಜುನಾಥ್, ದಸಂಸ ಮಂಜುನಾಥ್ ಮಾತನಾಡಿದರು. ವೇದಿಕೆಯಲ್ಲಿ ಎಡಿಸಿ ಪಿ.ಎನ್.ಲೋಕೇಶ್, ಎಎಸ್ಪಿ ರಾಮಗೊಂಡ ಆರ್.ಬಸರಗಿ, ಅಬಕಾರಿ ಇಲಾಖೆ ಉಪಾಯುಕ್ತೆ ಆರ್.ಎಸ್. ಸ್ವಪ್ನಾ ಇದ್ದರು.
    ಬರಲಿದ್ದಾನೆ ಬೆಲ್ಲದ ಬೆನಕ
    ಮಂಡ್ಯ ಡಿಸಿ ಆಗಿದ್ದಾಗ ಬೆಲ್ಲದ ಗಣಪತಿ ಪ್ರತಿಷ್ಠಾಪಿಸಿ ಅದನ್ನೇ ಪ್ರಸಾದವಾಗಿ ಜನರಿಗೆ ನೀಡಲಾಯಿತು. ಇದರಿಂದ ಶೂನ್ಯ ತ್ಯಾಜ್ಯ ನಿರ್ಮಾಣವಾಗಿತ್ತು ಎಂದು ಡಿಸಿ ಡಾ.ಎಂ.ವಿ.ವೆಂಕಟೇಶ ಸ್ಮರಿಸಿದರು. ದಾವಣಗೆರೆ ಜಿಲ್ಲೆಯಲ್ಲೂ ಈ ವಿನೂತನ ಕ್ರಮ ಜಾರಿಗೊಳಿಸಲಾಗುವುದು ಎಂದು ಜಿಪಂ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts