More

    ಸೌಹಾರ್ದತೆ ಬೀಡು ಕರ್ನಾಟಕ

    ಮೂಡಲಗಿ, ಬೆಳಗಾವಿ: ಜಾತಿ, ಧರ್ಮ, ಮೇಲು, ಕೀಳು ಭಾವನೆಗಳು ತೊರೆದು, ಕರ್ನಾಟಕವು ಸೌಹಾರ್ದತೆಗೆ ಹೆಸರುವಾಸಿಯಾದ ಹೆಮ್ಮೆಯ ನಾಡು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ಪಟ್ಟಣದಲ್ಲಿ ತಾಲೂಕು ರಾಜ್ಯೋತ್ಸವ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಪ್ರತಿಯೊಬ್ಬರೂ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಗೌರವ ಹೊಂದಿರಬೇಕು ಎಂದರು. ಮೂಡಲಗಿಯ ರಾಜ್ಯೋತ್ಸವದ ಮೆರವಣಿಗೆಯು ಮೈಸೂರು ದಸರಾ ಉತ್ಸವವನ್ನು ನೆನಪಿಸುವ ರೀತಿಯಲ್ಲಿ ಅದ್ದೂರಿಯಾಗಿ ಜರುಗಿದ್ದು, ಇದು ಮೂಡಲಗಿಯ ಇತಿಹಾಸದಲ್ಲಿ ಅದ್ದೂರಿ ಮೆರವಣಿಗೆಯಾಗಿದೆ ಎಂದರು.

    ನೂರಾರು ವರ್ಷ ಭಾರತವನ್ನು ಆಳಿದ್ದ ಬ್ರಿಟನ್ ದೇಶಕ್ಕೆ ರಿಷಿ ಸುನಕ್ ಪ್ರಧಾನಿಯಾಗಿದ್ದು, ಅವರು ಕನ್ನಡ ನಾಡಿನ ಅಳಿಯನಾಗಿದ್ದಾರೆ. ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿರುವ ಚಂದ್ರ ಆರ್ಯ ಅವರು ಕರ್ನಾಟಕ ಮೂಲದವರಾಗಿದ್ದು, ಚಾರಿತ್ರಿಕ ಇತಿಹಾಸ ನಿರ್ಮಿಸಿದ್ದಾರೆ. ಹೀಗೆ ಕನ್ನಡದ ಕಂಪು ವಿಶ್ವವ್ಯಾಪ್ತಿಯಲ್ಲಿ ಹರಡಿರುವ ಬಗ್ಗೆ ನಾವೆಲ್ಲರೂ ಅಭಿಮಾನ ಹಾಗೂ ಹೆಮ್ಮೆ ಪಡಬೇಕು ಎಂದರು.

    ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರ ಭಾವಚಿತ್ರವನ್ನು ಅನಾವರಣಗೊಸುತ್ತಿದ್ದಂತೆ, ‘ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ’ ಹಾಡು ಪ್ರತಿಧ್ವನಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ದತ್ತಾತ್ರೇಯಬೋಧ ಸ್ವಾಮೀಜಿ ಮಾತನಾಡಿ, ಜನಮನ ಸೂರೆಗೊಳಿಸುವಂತ ರಾಜ್ಯೋತ್ಸವದ ಮೆರವಣಿಗೆಯು ತಾಲೂಕಿನ ಜನರಲ್ಲಿ ಕನ್ನಡ ಅಭಿಮಾನವನ್ನು ಉಕ್ಕಿಸಿದೆ ಎಂದು ಶ್ಲಾಘಿಸಿದರು. ಪ್ರತಿಯೊಬ್ಬರೂ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಗನೂರ ಪಟ್ಟಣದಿಂದ ನೂರಕ್ಕೂ ಅಧಿಕ ವಾಹನಗಳಲ್ಲಿ ಜಯಘೋಷಗಳೊಂದಿಗೆ ಮೆರವಣಿಗೆ ಪ್ರಾರಂಭದ ಸ್ಥಳವಾದ ಎಸ್‌ಎಸ್‌ಆರ್ ಕಾಲೇಜುವರೆಗೆ ಬರಮಾಡಿಕೊಂಡರು.

    ಕಣ್ಮನ ಸೆಳೆದ ಮೆರವಣಿಗೆ: ಎಲ್ಲೆಡೆ ಕನ್ನಡ ಬಾವುಟ ಹಾರಾಟ, ಮುಗಿಲು ಮುಟ್ಟುವ ಕನ್ನಡ ಪರ ಘೋಷಣೆಗಳು, ಮೂಡಲಗಿ ತಾಲೂಕಿನ ಕಲಾ ಸಂಸ್ಕೃತಿಯನ್ನು ಬಿಂಬಿಸುವ ತಾಲೂಕಿನ ವಿವಿಧ ಕಲಾ ತಂಡಗಳಿಂದ ಕರ್ನಾಟಕ ರಜ್ಯೋತ್ಸವ ಆಚರಣೆಯ ಮೆರವಣಿಗೆಯು ಕಳೆಕಟ್ಟಿತ್ತು. ಮೂಡಲಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts