More

    ಸೋರುತಿಹುದು ಭೂ ದಾಖಲೆ ಮಾಳಿಗೆ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಮಳೆ ಬಂದರೆ ಸಾಕು ಇಲ್ಲಿನ ಸಿಬ್ಬಂದಿಗೆ ದಾಖಲೆಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಮಳೆ ನೀರು ಸೋರುವ ಜಾಗದಲ್ಲಿ ತಾಡಪತ್ರಿ ಕಟ್ಟಿ, ಕೆಳಗೆ ಬಕೆಟ್ ಇಡುತ್ತಾರೆ. ಕಾಗದಪತ್ರಗಳು ಹಾಳಾಗದಂತೆ ಜತನದಿಂದ ಕಾಯುತ್ತಾರೆ.

    ಇದು ಹಾವೇರಿ ನಗರದ ರೈಲು ನಿಲ್ದಾಣದ ಎದುರಿಗಿರುವ ತಾಲೂಕು ಆಡಳಿತ ಸೌಧ (ತಹಸೀಲ್ದಾರ್)ದ ವಾಸ್ತವ ಚಿತ್ರಣ. ಐದಾರು ವರ್ಷಗಳ ಹಿಂದೆ ನಗರದ ತಾಲೂಕು ಆಡಳಿತ ಸೌಧ ಕಟ್ಟಡದಲ್ಲಿ ಅಳವಡಿಸಿದ್ದ ಸೋಲಾರ್ ಪ್ಯಾನಲ್ ಈಗ ಸಮಸ್ಯೆಯ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಸೋಲಾರ್ ಅಳವಡಿಕೆಯಿಂದಾಗಿ 10 ವರ್ಷದ ಕಟ್ಟಡ ಈಗಲೇ ಸೋರುತ್ತಿದೆ. ಇದರಿಂದ ಭೂಮಾಪನ ಹಾಗೂ ನಗರ ಮಾಪನ ಕಚೇರಿಗಳ ಮಹತ್ವದ ಭೂದಾಖಲೆಗಳನ್ನು ಕಾಪಾಡುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ಚಿಂತೆಯಾಗಿದೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಾಲೂಕು ಆಡಳಿತ ಸೌಧದ ಕಟ್ಟಡದ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಲಾಗಿದೆ. ಸೋಲಾರ್ ಅಳವಡಿಸುವಾಗ ಕಟ್ಟಡದಲ್ಲಿ ಡ್ರಿಲ್​ನಿಂದ ಹೋಲ್ ಕೊರೆಯಲಾಗಿತ್ತು. ಆ ಜಾಗದಲ್ಲಿ ಅಂದಿನಿಂದ ನೀರು ಸೋರಲು ಆರಂಭಿಸಿದೆ. ಹಾವೇರಿ ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಭೂದಾಖಲೆಗಳನ್ನು ಸಂಗ್ರಹಿಸಿ ಇಟ್ಟಿರುವ ಎರಡು ರೂಮ್ಳಲ್ಲಿ ಈ ಸಮಸ್ಯೆ ಉದ್ಭವಿಸಿದೆ. ಹೀಗೆ ಬಿಟ್ಟರೆ ಸಂಪೂರ್ಣ ಕಟ್ಟಡ ಕೆಲವೇ ವರ್ಷಗಳಲ್ಲಿ ಬಿದ್ದರೂ ಅಚ್ಚರಿಯಿಲ್ಲ.

    ಇದೇ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಇದೆ. ಕಟ್ಟಡದ ಎದುರು ನಾಮಫಲಕವನ್ನೂ ಹಾಕಲಾಗಿಲ್ಲ. ಸ್ವಚ್ಛತೆ, ರ್ಪಾಂಗ್ ವ್ಯವಸ್ಥೆ ಸರಿಯಾಗಿಲ್ಲ. ಭದ್ರತಾ ಸಿಬ್ಬಂದಿಯೂ ಇಲ್ಲಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ಕಳಪೆಯಾಗಿ ಕಟ್ಟಡ ನಿರ್ವಿುಸಿದ ಹಾಗೂ ಅವೈಜ್ಞಾನಿಕವಾಗಿ ಸೋಲಾರ್ ಪ್ಯಾನಲ್ ಅಳವಡಿಸಿದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಕಟ್ಟಡ ಸೋರುತ್ತಿರುವ ಕುರಿತು ವಿಷಯ ಗೊತ್ತಾಗಿದೆ. ಇದನ್ನು ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು.
    ಗಿರೀಶ ಸಾದ್ವಿ ತಹಸೀಲ್ದಾರ್ ಹಾವೇರಿ

    ಎಸಿಗೆ ಎಡಿಎಲ್​ಆರ್ ಪತ್ರ: ಕಟ್ಟಡ ಸೋರುತ್ತಿರುವ ಕಾರಣ ಮಳೆ ನೀರು, ತಂಪಿಗೆ ಮಹತ್ವದ ದಾಖಲೆಗಳು ಹಾಳಾಗುವ ಸಾಧ್ಯತೆಯಿದೆ. ಭೂದಾಖಲೆಗಳನ್ನು ಸಂಗ್ರಹಿಸಿ ಇಡಲು ಎರಡು ಪ್ರತ್ಯೇಕ ಅಥವಾ ಹೊಸ ಕೊಠಡಿ ನೀಡುವಂತೆ ಉಪವಿಭಾಗಾಧಿಕಾರಿಗಳಿಗೆ ನವೆಂಬರ್ 20, 2021ರಂದು ಡಿಎಲ್​ಆರ್ ನಾಗರಾಜ ಚಕ್ರಸಾಲಿ ಪತ್ರ ಬರೆದಿದ್ದಾರೆ.
    200 ವರ್ಷಗಳ ದಾಖಲೆಗಳಿವೆ: ಭೂದಾಖಲೆ ಕಚೇರಿಯಲ್ಲಿ ಸುಮಾರು 100, 200 ವರ್ಷಗಳ ಹಿಂದಿನಿಂದ ಹಿಡಿದು ಈವರೆಗಿನ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಅಂದಿನಿಂದ ಈವರೆಗೂ ಇಲ್ಲಿ ಎಲ್ಲವೂ ಪತ್ರ ವ್ಯವಹಾರ ನಡೆಯುತ್ತಿದೆ. ದಾಖಲೆಗಳ ಕಂಪ್ಯೂಟರೀಕರಣ ಈವರೆಗೆ ಆಗಿಲ್ಲ.
    ಕಣ್ಮುಚ್ಚಿ ಕುಳಿತ ತಾಲೂಕಾಡಳಿತ: ತಾಲೂಕು ಆಡಳಿತ ಸೌಧವನ್ನು 2008ರಲ್ಲಿ ನಿರ್ವಿುಸಲಾಗಿದೆ. ಕೇವಲ 10 ವರ್ಷಗಳಲ್ಲಿ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಸಣ್ಣ ಮಳೆಯಾದರೂ ಗೋಡೆಗಳಲ್ಲಿ ನೀರು ಬಸಿಯುತ್ತಿದೆ. ಸೋಲಾರ್ ಅಳವಡಿಸಿದ ಬಳಿಕ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗ್ಗೆ ತಹಸೀಲ್ದಾರ್ ಗಮನಕ್ಕೆ ಬಂದಿದ್ದರೂ ಈವರೆಗೆ ಪರಿಹಾರವಾಗಿಲ್ಲ. ಇಲ್ಲಿನ ಸಿಬ್ಬಂದಿಯೇ ಅಲ್ಪಸ್ವಲ್ಪ ದುರಸ್ಥಿ ಮಾಡಿದ್ದರಾದರೂ ಪ್ರಯೋಜವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts