More

    ಸೋರಿಕೆಯಾಗದಿರಲಿ ಮಾಹಿತಿ

    ಗದಗ: ಆಧುನಿಕರಣದ ಇಂದಿನ ಯುಗದಲ್ಲಿ ಪ್ರತಿಯೊಂದು ಕಾರ್ಯಗಳು ಗಣಕೀಕರಣವಾಗಿದ್ದು, ಇದರಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಸುಗಮ ಆಡಳಿತಕ್ಕಾಗಿ ಅಧಿಕಾರಿ, ಸಿಬ್ಬಂದಿಗೆ ಒದಗಿಸಿದ ಬಳಕೆದಾರ ಹೆಸರು ಹಾಗೂ ಪಾಸ್​ವರ್ಡ್​ಗಳನ್ನು ಗೌಪ್ಯವಾಗಿಟ್ಟು ಮಾಹಿತಿ ಸೋರಿಕೆಯಾಗದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಸಲಹೆ ನೀಡಿದರು.

    ಜಿಲ್ಲಾಡಳಿತ ಭವನದಲ್ಲಿ ಇ-ಆಡಳಿತ ದತ್ತಾಂಶ ವಿಶ್ಲೇಷಣಾ ಕೇಂದ್ರ, ಇ-ಆಡಳಿತ ಕೇಂದ್ರ ಮತ್ತು ಜಿಲ್ಲಾ ತರಬೇತಿ ಸಂಸ್ಥೆ ಆಶ್ರಯದಲ್ಲಿ ಗ್ರುಪ್ ಎ ಅಧಿಕಾರಿಗಳಿಗೆ ಗುರುವಾರ ಏರ್ಪಡಿಸಿದ್ದ ಸೈಬರ್ ಸೆಕುರಿಟಿ ಮತ್ತು ಇ-ಆಡಳಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಸುಂದರೇಶಬಾಬು, ಕಾಲ ಬದಲಾದಂತೆ ಸರ್ಕಾರಿ ಕಚೇರಿಗಳಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಇ-ಆಡಳಿತ ವ್ಯವಸ್ಥೆಯಡಿ ಕಾರ್ಯನಿರ್ವಹಿಸಲು ಹಿಂಜರಿಯಬಾರದು. ಪ್ರಸುತ್ತ ಆಧುನಿಕರಣದ ಈ ಯುಗದಲ್ಲಿ ತಂತ್ರಜ್ಞಾನವು ಮಹತ್ವ ಪಡೆದಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಇ-ಆಡಳಿತ ವ್ಯವಸ್ಥೆಯ ಬಳಕೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.

    ತೋಂಟದಾರ್ಯ ಇಂಜಿನಿಯರ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅರುಣಕುಮಾರ ಅವರು ಇ-ಆಡಳಿತ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯು ಕವಿತಾ.ಎ.ಎಸ್, ಉಪ ಪ್ರಾಚಾರ್ಯ ಎನ್.ಎಸ್. ಸೋನೆ ಸೇರಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

    ಆಕ್ಟಿವ್​ಗಿಂತ ಪ್ಯಾಸಿವ್ ಅಟ್ಯಾಕ್ ತುಂಬಾ ಅಪಾಯಕಾರಿ: ‘ಸೈಬರ್ ಅಪರಾಧಗಳು’ ಕುರಿತು ತೋಂಟದಾರ್ಯ ಇಂಜಿನಿಯರ್ ಕಾಲೇಜಿನ ಸಹ ಪ್ರಾಧ್ಯಾಪಕ ಮಂಜುನಾಥ ಅವರು ಮಾಹಿತಿ ನೀಡಿದರು. 2019ರಿಂದ ಇಲ್ಲಿವರೆಗೆ 540 ಮಿಲಿಯನ್​ಗೂ ಅಧಿಕ ಜನ ಸೈಬರ್ ಭದ್ರತೆಯ ಅರಿವಿನ ಕೊರತೆಯಿಂದಾಗಿ ಸಾಮಾಜಿಕ ಜಾಲತಾಣಗಳಿಂದ ತೊಂದರೆಗೀಡಾಗಿದ್ದಾರೆ. ಕೋವಿಡ್-19 ಸಮಯದಲ್ಲಿ ಶೇ.71ರಷ್ಟು ಜನರು ಸೈಬರ್ ಅಪರಾಧಗಳಿಗೆ ಒಳಗಾಗಿದ್ದಾರೆ. ಶೇ.50ರಷ್ಟು ಜನ ಸೈಬರ್ ಅಪರಾಧಗಳಿಗೆ ತುತ್ತಾಗುತ್ತಿದ್ದಾರೆ. ನೆಟ್​ವರ್ಕ್ ಮೂಲಕ ಹ್ಯಾಕರ್​ಗಳು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ. ಸೈಬರ್ ಪ್ರಕರಣಗಳಲ್ಲಿ ಆಕ್ಟಿವ್ ಅಟ್ಯಾಕ್ ಮತ್ತು ಪ್ಯಾಸಿವ್ ಅಟ್ಯಾಕ್ ಎಂಬ 2 ವಿಧಗಳಿವೆ. ಪ್ಯಾಸಿವ್ ಅಟ್ಯಾಕ್ ತುಂಬಾ ಅಪಾಯಕಾರಿಯಾಗಿದೆ. ನಾವು ಪೆನ್​ಡ್ರೖೆವ್​ನಂತಹ ಯಾವುದೇ ಇಲೆಕ್ಟ್ರಾನಿಕ್ ಉಪಕರಣ ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲಾಖೆಗೆ ಸಂಬಂಧಪಟ್ಟಂತೆ ಹಾರ್ಡ್​ವೇರ್, ಸಿಸ್ಟಂಗಳನ್ನು ಅಪ್​ಡೇಟ್ ಮಾಡುತ್ತಿರಬೇಕು. ಇಲಾಖೆಯ ಇ-ಮೇಲ್ ಐಡಿಯ ಪಾಸ್​ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇ-ಮೇಲ್ ಐಡಿಯ ಪಾಸ್​ವರ್ಡ್ ಅನ್ನು ವಿಶಿಷ್ಟವಾಗಿ ಮತ್ತು ಸರಳವಾಗಿ ಇಟ್ಟುಕೊಂಡಿರಬೇಕು ಎಂದರು. ಹೆಚ್ಚಿನ ಜನರು ಗೂಗಲ್ ಕ್ರೋಮ್ ಅಥವಾ ಗೂಗಲ್ ಮೂಲಕ ವೆಬ್​ಸೈಟ್​ಗಳಿಗೆ ಭೇಟಿ ನೀಡುತ್ತಿರುತ್ತಾರೆೆ. ಇಂತಹ ಬ್ರೌಸರ್ ಸಿಸ್ಟಂ ಅನ್ನು ಆಗಾಗ ಅಪ್​ಡೇಟ್ ಮಾಡಬೇಕು. ಎಲ್ಲರೂ ಸಾಮಾನ್ಯವಾಗಿ ಇ-ಮೇಲ್ ಐಡಿಯನ್ನು ಹೊಂದಿರುತ್ತಾರೆ. ಅಂತಹ ಇ-ಮೇಲ್ ಐಡಿಯ ಬಳಕೆದಾರರು ರಹಸ್ಯ ಪದಗಳನ್ನು ಮೂರು ತಿಂಗಳಿಗೊಮ್ಮೆ ಬದಲಾವಣೆ ಮಾಡುತ್ತಿರಬೇಕು. ಸಾಮಾಜಿಕ ಜಾಲತಾಣಗಳಾಗಲಿ ಅಥವಾ ಇಲಾಖೆಯ ಇ-ಮೇಲ್ ಐಡಿಗಳಲ್ಲಿ ಗೌಪ್ಯತೆ ಸಂಯೋಜನೆಯನ್ನು ಕಾಪಾಡಿಕೊಳ್ಳವುದು ಅಗತ್ಯವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts