More

    ಸಂಸದ ಸಿದ್ದೇಶ್ವರ ಅವರಿಗೆ ಪ್ರಾಣ ಭಯ! ದಾಖಲೆ ರಹಿತ ಆರೋಪಕ್ಕೆ ಮಾನನಷ್ಟ ದಾವೆಯ ಎಚ್ಚರಿಕೆ 

    ದಾವಣಗೆರೆ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಪ್ರಾಣ ಭಯವಂತೆ! ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಖುದ್ದು ಅವರೇ ಇಂಥದ್ದೊಂದು ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
    ಅಡಕೆ ಹಣ ಕಳವು ಮಾಡಿದ ಕೆಲವರು ಆ ಹಣಕ್ಕೆ ಹವಾಲಾ ನಂಟಿದೆ ಎಂದು ಪುಕಾರು ಹಬ್ಬಿಸಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಆರೋಪಿತರು ಹಾಗೂ ಕಾಣದ ಕೈಗಳಿಂದ ನನಗೆ ಜೀವ ಭಯವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ನನ್ನ ಮೇಲೆ ಆರೋಪ ಮಾಡಿದವರು ನಾಳೆ ಏನು ಬೇಕಾದರೂ ಮಾಡಬಹುದು. ಆಹಾರದಲ್ಲಿ ವಿಷ ಬೆರೆಸಬಹುದು. ನನ್ನ ಮೇಲೆ ದಾಳಿ ಮಾಡಬಹುದು. ಅವರು ಏನು ಮಾಡಲಿಕ್ಕೂ ಹೇಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
    ಜೀವ ಭೀತಿ ಹಿನ್ನೆಲೆಯಲ್ಲಿ ಭದ್ರತೆ ಪಡೆಯವ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಕಾನೂನು ಘಟಕವನ್ನು ಸಂಪರ್ಕಿಸಿ ಅವರ ಸಲಹೆಯಂತೆ ಮುಂದುವರಿಯುವೆ ಎಂದು ತಿಳಿಸಿದರು.
    ಅಡಕೆಗೆ ಸಂಬಂಧಿಸಿದ 97ಲಕ್ಷ ರೂ. ಕಳವಾದ ಬಗ್ಗೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 2023ರ ಅಕ್ಟೋಬರ್ 7ರಂದು ದೂರು ದಾಖಲಾಗಿತ್ತು. ಇದಕ್ಕೂ ನನಗೂ ಸಂಬಂಧವಿಲ್ಲ. ಈ ಕುರಿತು ಆರೋಪಿಗಳು ನೀಡಿದ ಹೇಳಿಕೆಗಳೆಲ್ಲ ಸುಳ್ಳು ಎಂದು ಪ್ರತಿಕ್ರಿಯಿಸಿದರು.
    ಕಳ್ಳತನದ ಆರೋಪಿ ಹಾಗೂ ಆತನ ಸ್ನೇಹಿತೆ, ದೂರು ದಾಖಲಾಗಿ ಮೂರು ತಿಂಗಳ ಬಳಿಕ ನನ್ನ ಹಾಗೂ ನನ್ನ ಸಹೋದರ ಪ್ರಸನ್ನಕುಮಾರ್ ವಿರುದ್ಧ ಆರೋಪಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
    ಇದರ ಹಿಂದಿರುವ ಕೈವಾಡದ ತನಿಖೆಗೆ ಆಗ್ರಹಿಸಿ ಪೂರ್ವವಲಯದ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು.
    ನಾನು ಪ್ರತಿ ವರ್ಷ 50 ಕೋಟಿ ರೂ. ತೆರಿಗೆ ಪಾವತಿಸುತ್ತೇನೆ. ನಾಲ್ಕು ಬಾರಿ ಸಂಸದನಾಗಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಕೆಲವರು ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ದೂರಿದರು.
    ಆರೋಪಿ ನನ್ನ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡಿಲ್ಲ. ಆತ ಸುಳ್ಳು ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದರು.
    ಇಡಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸಿಗರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದಿದೆ. ಈ ವೇಳೆ ನನ್ನ ವಿರುದ್ಧ ದಾಖಲೆರಹಿತವಾಗಿ ಹೇಳಿಕೆ ನೀಡಿ ಅಪಪ್ರಚಾರ ಮಾಡಿದರೆ ಅವರ ವಿರುದ್ಧ ಹಾಗೂ ಈಗಾಗಲೆ ಆಪಾದಿಸಿದವರ ವಿರುದ್ಧ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.
    ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಬಿ.ಪಿ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮುಖಂಡರಾದ ಬಿ.ಎಸ್. ಜಗದೀಶ್, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts