More

    ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ : ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ನಾರಾಯಣಸ್ವಾಮಿ ಸೂಚನೆ

    ಬಂಗಾರಪೇಟೆ : ಕರೊನಾ ನಂತರ ತಾಲೂಕಿನಾದ್ಯಂತ ಶಾಲೆಗಳು ಪ್ರಾರಂಭವಾಗಿದ್ದು, ಎಲ್ಲೆಡೆ ಕೋವಿಡ್ ಮಾರ್ಗಸೂಚಿ ಪಾಲಿಸಿದ್ದೀರಾ, ಶಾಲೆಗಳಲ್ಲಿ ಶುಚಿತ್ವ ಕಾಪಾಡಿದ್ದೀರಾ? ಈಗಿರುವ ಶಾಲೆಗಳ ಶೌಚಗೃಹ ಬಳಸಲು ಯೋಗ್ಯವಾಗಿಲ್ಲ, ಶುಚಿತ್ವ ಕಾರ್ಯಗಳನ್ನು ಕೈಗೊಂಡಿದ್ದೀರಾ? ಎಂದು ಬಿಇಒ ಬಿ.ಪಿ.ಕೆಂಪಯ್ಯ ಅವರನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಒಂದು ವರ್ಷ ಸುದೀರ್ಘ ರಜೆ ಬಳಿಕ ಶಾಲೆ ಪುನರಾರಂಭಗೊಂಡಿದ್ದು, ಬಹುತೇಕ ಎಲ್ಲ ಶಾಲೆಗಳಲ್ಲಿ ಇರುವ ಶೌಚಗೃಹ ಬಳಕೆ ಮಾಡಲು ಸೂಕ್ತವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದೀರಿ, ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ ನೀಡಿದ್ದೀರಾ ಎಂದು ಪ್ರಶ್ನಿಸಿದರು.

    ತಾಲೂಕಿನ ಯಾವ ಯಾವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಿಕಕ್ಷರ ಕೊರತೆ ಇರುವ ಶಾಲೆಗಳಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಿದ್ದೀರಾ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಬಿಇಒ ಸಮರ್ಪಕ ಉತ್ತರ ನೀಡದಿದ್ದಾಗ ಕೋಪಗೊಂಡ ಶಾಸಕರು ಮುಂದಿನ ದಿನಗಳಲ್ಲಿ ತಾವೇ ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.
    ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಡಿ ಕಾಮಗಾರಿಗಳಿಗೆ

    ಗುತ್ತಿಗೆದಾರರು ಶೇ.23 ಕಡಿಮೆ ಮೊತ್ತ ನಮೂದಿಸಿ ಟೆಂಡರ್ ಪಡೆದಿದ್ದಾರೆ. ಈ ಪ್ರಮಾಣದಲ್ಲಿ ಟೆಂಡರ್ ಪಡೆದರೆ ಗುಣಮಟ್ಟದ ಕಾಮಗಾರಿ ನಡೆಸಲು ಹೇಗೆ ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ತಾಲೂಕಿನಾದ್ಯಂತ ಕೈಗೊಂಡಿರುವ ಎಲ್ಲ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ನಡೆಸಿ ಅನುಮೋದನೆ ನೀಡುವಂತೆ ಲೋಕೋಪಯೋಗಿ ಇಲಾಖೆಯ ಎಇಇ ಎಂ.ರವಿ ಅವರಿಗೆ ಸೂಚಿಸಿದರು.

    ಅಧಿಕಾರ ವಹಿಸಿಕೊಂಡು ಒಂದು ವರ್ಷವಾಯಿತು, ಎರಡು ವರ್ಷಗಳ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿ, ಸ್ಥಳ ಗುರುತಿಸಿದ್ದರೂ ಇದುವರೆಗೆ ಭವನ ನಿರ್ಮಾಣವಾಗಿಲ್ಲ. ಕೂಡಲೆ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿ ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮುನಿರಾಜು ಅವರಿಗೆ ಎಚ್ಚರಿಸಿದರು.

    ಸಭೆಯಲ್ಲಿ ಹಾಜರಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಶಿಕಲಾ ಸೇರಿ ಎಂಟು ಇಲಾಖೆಗಳ ಬಗ್ಗೆ ಮಾಹಿತಿ ಪಡೆದರು. ಆದರೆ ಯಾವೊಬ್ಬ ಅಧಿಕಾರಿಯಿಂದಲೂ ಸಮರ್ಪಕ ಉತ್ತರ ಸಿಗದಿದ್ದರಿಂದ ಕೋಪಗೊಂಡ ಶಾಸಕರು ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಆಯಾ ಇಲಾಖೆ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ತಾಕೀತು ಮಾಡಿದರು.

    ತಾಪಂ ಇಒ ಎನ್.ವೆಂಕಟೇಶಪ್ಪ, ವ್ಯವಸ್ಥಾಪಕ ಮಂಜುನಾಥ ಮತ್ತು ವಿವಿಧ ಇಲಾಖೆಗಳ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts