More

    ಒತ್ತುವರಿ ವಿಚಾರಕ್ಕೆ ಸಂಸದ-ಎಸ್ಪಿ ಮಧ್ಯೆ ಮಾತಿನ ಚಕಮಕಿ : ನೋಟಿಸ್​ ನೀಡಿದರಷ್ಟೇ ಭದ್ರತೆ ಎಂದ ಎಸ್ಪಿ

    ಬಂಗಾರಪೇಟೆ ಗ್ರಾಮಾಂತರ: ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ಆಲದಮರದ ಬಳಿ ರಸ್ತೆ ಒತ್ತುವರಿ ತೆರವುಗೊಳಿಸುವ ವಿಚಾರವಾಗಿ ಶುಕ್ರವಾರ ಸಂಸದ ಎಸ್​.ಮುನಿಸ್ವಾಮಿ ಹಾಗೂ ಕೆಜಿಎಫ್​ ಎಸ್ಪಿ ಡಾ.ಧರಣಿದೇವಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

    ತಾಲೂಕಿನ ದೇಶಿಹಳ್ಳಿಯಿಂದ ಆಂಧ್ರಪ್ರದೇಶದ ವಿ.ಕೋಟೆ ಗಡಿಯವರೆಗೂ ರಸ್ತೆ ಅಗಲೀಕರಣಗೊಳಿಸಲು ಕೇಂದ್ರ ಸರ್ಕಾರ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಗೆ ಅಭಿವೃದ್ಧಿಯ ಜವಾಬ್ದಾರಿ ವಹಿಸಲಾಗಿದೆ. ಈ ಮಾರ್ಗದ ರಸ್ತೆ ಅಭಿವೃದ್ಧಿಪಡಿಸಲು ರಸ್ತೆ ಮಧ್ಯ ಭಾಗದಿಂದ 12.5 ಮೀಟರ್​ ಅಗಲೀಕರಣಗೊಳಿಸಲು ಸೂಚಿಸಲಾಗಿದೆ. ಈ ಮಾರ್ಗದ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ಮೇಲೆ ರೆಡ್​ ಮಾರ್ಕ್​ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಕ ಅಭಿವೃದ್ಧಿಪಡಿಸಲು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದರೂ ಒತ್ತುವರಿದಾರರು ನಿರ್ಲಕ್ಷ್ಯ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಎಸ್​.ಮುನಿಸ್ವಾಮಿ ಕಾಮಗಾರಿ ಪರಿಶೀಲಿಸಲು ಆಗಮಿಸಿದ್ದರು. ಆಲದಮರ ಬಳಿ ರಸ್ತೆ ಅಗಲೀಕರಣಗೊಳ್ಳಲು ಒತ್ತುವರಿ ಮಾಡಿಕೊಂಡಿರುವುದನ್ನು ಖಂಡಿಸಿದ ಅವರು ಒತ್ತುವರಿ ತೆರವಿಗೆ ಮುಂದಾದರು.

    ಸ್ಥಳಕ್ಕೆ ಕೆಜಿಎಫ್​ ಎಸ್ಪಿ ಡಾ.ಧರಣಿದೇವಿ ಆಗಮಿಸಿ, ತೆರವು ಮಾಡುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿ, ಒತ್ತುವರಿ ತೆರವುಗೊಳಿಸುವ ಮುನ್ನಾ ಸಂಬಂಧಪಟ್ಟವರಿಗೆ ನೋಟಿಸ್​ ನೀಡಬೇಕು. ಪೊಲೀಸ್​ ಇಲಾಖೆಗೆ 24 ಗಂಟೆ ಮುಂಚಿತವಾಗಿ ರಕ್ಷಣೆಗೆ ಅರ್ಜಿ ನೀಡಬೇಕು ಎಂದರು. ಸಂಸದ ಮುನಿಸ್ವಾಮಿ ಮಧ್ಯಪ್ರವೇಶಿಸಿ ಸರ್ಕಾರಿ ರಸ್ತೆ ಒತ್ತುವರಿ ಮಾಡಿಕೊಂಡರೆ ಒತ್ತುವರಿದಾರರಿಗೆ ನೋಟಿಸ್​ ನೀಡುವುದಿಲ್ಲ. ತೆರವುಗೊಳಿಸಲು ಪೊಲೀಸ್​ ಇಲಾಖೆಯು ಸಹಕಾರ ನೀಡಬೇಕೆ ಹೊರತು ವಿರೋಧ ವ್ಯಕ್ತಪಡಿಸಬಾರದು ಎಂದರು.

    ಸಂಸದ ಎಸ್​.ಮುನಿಸ್ವಾಮಿ ಗಟ್ಟಿಯಾಗಿ ಮಾತನಾಡುತ್ತಿದ್ದಂತೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಎಸ್ಪಿ ರೇಗಾಡಿದರು. ಮಧ್ಯ ಪ್ರವೇಶಿಸಿದ ಸಂಸದರು, ರಸ್ತೆ ಮಾಡುತ್ತಿರುವುದು ಸರ್ಕಾರಿ ಇಲಾಖೆಗಳ ಅಧಿಕಾರಿಗಳೇ, ಒತ್ತುವರಿ ತೆರವುಗೊಳಿಸುವ ಜವಾಬ್ದಾರಿ ಅಧಿಕಾರಿಗಳಿಗೆ ಇದ್ದು ನೀವೊಬ್ಬರೇ ಅಧಿಕಾರಿ ಅಲ್ಲ. ನಾವು ಸರ್ಕಾರದ ಪ್ರತಿನಿಧಿ ಆಗಿರುವುದರಿಂದ ನೀವು ಸೀನ್​ ಸೃಷ್ಟಿ ಮಾಡಬೇಡಿ. ಸರ್ಕಾರಿ ಕೆಲಸಕ್ಕೆ ಸರ್ಕಾರಿ ಅಧಿಕಾರಿಗಳೇ ಅಡ್ಡಿಪಡಿಸುವುದು ಸರಿಯೇ, ಸರ್ಕಾರಿ ಕೆಲಸ ಮಾಡುವುದಕ್ಕೆ ಪೊಲೀಸ್​ ಇಲಾಖೆ ಅನುಮತಿ ಬೇಕಾಗಿಲ್ಲ ಎಂದು ಎಚ್ಚರಿಸಿದರು.

    ರಸ್ತೆ ಉದ್ದಕ್ಕೂ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಅಂಗಡಿಗಳನ್ನು ಸ್ವತಃ ಸಂಸದರೇ ನಿಂತು ತೆರವುಗೊಳಿಸಿದರು. ಆಲದಮರ ಬಳಿ ಮುಖ್ಯ ಸರ್ಕಲ್​ನಲ್ಲಿ ಮೊಯಿದು ಕಾಂಪ್ಲೆಕ್ಸ್​ನ ಕಟ್ಟಡ ರಸ್ತೆಯವರೆಗೂ ಒತ್ತುವರಿ ಮಾಡಿಕೊಂಡಿರುವುದನ್ನು ಗಮನಿಸಿದ ಸಂಸದರು ಸಂಬಂಧಪಟ್ಟ ಮಾಲೀಕರನ್ನು ಕರೆಸಿ ವಿಚಾರಿಸಿದರು. ಅವರು ಸ್ವಯಂಪ್ರೇರಿತರಾಗಿ ತೆರವುಗೊಳಿಸಲು ಒಪ್ಪಿದರು.

    ನೋಟಿಸ್​ ನೀಡದೆ ಏಕಾಏಕಿಯಾಗಿ ಒತ್ತುವರಿ ತೆರವುಗೊಳಿಸಿದರೆ ಪೊಲೀಸ್​ ಇಲಾಖೆಯು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಎಸ್ಪಿ ಡಾ.ಧರಣಿದೇವಿ ಪೊಲೀಸ್​ ಸಿಬ್ಬಂದಿಯನ್ನು ವಾಪಸ್​ ಬರುವಂತೆ ಸೂಚನೆ ನೀಡಿದರು. ಸಂಸದರೊಂದಿಗೆ ಮಾತಿನ ಚಕಮಕಿ ನಡೆದಿದ್ದರಿಂದ ಎಚ್ಚೆತ್ತ ಎಸ್ಪಿ ತಮ್ಮ ಮಾತನ್ನು ಬದಲಿಸಿಕೊಂಡು ಸಂಸದರ ರಕ್ಷಣೆಗಾಗಿ ಮತ್ತೆರಡು ರಿಸರ್ವ್​ ಪೊಲೀಸ್​ ತುಕಡಿಗಳನ್ನು ಹೆಚ್ಚುವರಿಯಾಗಿ ಕಳುಹಿಸಿದ್ದು ವಿಶೇಷವಾಗಿತ್ತು. ಎಸ್ಪಿ ಬಂದ ದಾರಿಗೆ ಸುಂಕವಿಲ್ಲದಂತೆ 10 ನಿಮಿಷದಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ ಎಂದುಕೊಂಡು ವಾಪಸಾದರು.

    ಈ ವೇಳೆ ಸಂಸದರು ಮಾತನಾಡಿ, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಪ್ರಭಾವಿಗಳು ಕೆಲವು ಕಡೆ ರಸ್ತೆ ಅಗಲ ಕಡಿಮೆ ಮಾಡಿದ್ದಾರೆ. ಅಮಾಯಕರು ನೆಲೆಸಿರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಗಲ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದನ್ನು ಪರಿಶೀಲಿಸಲು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಆದೇಶದ ಅನುಸಾರ ರಸ್ತೆ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾರೇ ಬಂದು ಅಡ್ಡಿಪಡಿಸಿದರೂ ಆಸ್ಪದ ಕೊಡುವುದಿಲ್ಲ ಎಂದರು.

    ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್​, ಬಿ.ಹೊಸರಾಯಪ್ಪ, ತಾಲೂಕು ಅಧ್ಯಕ್ಷ ಎಂ.ನಾಗೇಶ್​, ಎಂ.ಪಿ.ಶ್ರೀನಿವಾಸಗೌಡ, ತಹಸೀಲ್ದಾರ್​ ಎಂ.ದಯಾನಂದ್​, ಲೋಕೋಪಯೋಗಿ ಇಲಾಖೆ ಎಇಇ ಎಂ.ಸರಸ್ವತಿ, ತಾಪಂ ಇಒ ಎನ್​.ವೆಂಕಟೇಶಪ್ಪ, ಕೆಜಿಎಫ್​ ಇಒ ಮಂಜುನಾಥ್​, ಸರ್ಕಲ್​ ಇನ್​ಸ್ಪೆಕ್ಟರ್​ ಬಿ.ಸುನೀಲ್​ಕುಮಾರ್​, ಡಿ.ಕೆ.ಹಳ್ಳಿ ಗ್ರಾಪಂ ಅಧ್ಯೆ ಕಲಾವತಿ ರಮೇಶ್​, ಉಪಾಧ್ಯೆ ರಾಧಮ್ಮ, ಸದಸ್ಯರಾದ ಸುಧಾಗೌಡ, ಬಾಬು, ವಿಕ್ಟೋರಿಯಾ, ಕುಮಾರ್​, ಪಿಡಿಒ ಭಾಸ್ಕರ್​, ಚಂದ್ರಶೇಖರ್​ ಮತ್ತಿತರರಿದ್ದರು.

    ಭದ್ರತೆಗೆ ಮನವಿ ಸಲ್ಲಿಸದೆ ರಸ್ತೆ ಅಗಲೀಕರಣ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದೆ. ನಿಯಮಾನುಸಾರ ಇಲಾಖೆಗಳಿಗೆ ಮನವಿ ನೀಡಿ ತೆರವು ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    |ಧರಣಿದೇವಿ, ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts