More

    ಶ್ರೀಮಂತ ದೇಗುಲ ಮಾತೋಬಾರ ಮುರ್ಡೆಶ್ವರ!

    ಸುಭಾಸ ಧೂಪದಹೊಂಡ ಕಾರವಾರ: 3 ಕೋಟಿಗೂ ಅಧಿಕ ಆದಾಯ ಗಳಿಸುವ ಮೂಲಕ ಮಾತೋಬಾರ ಮುರ್ಡೆಶ್ವರ ದೇವಸ್ಥಾನ ಜಿಲ್ಲೆಯಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಮುಜರಾಯಿ ದೇವಸ್ಥಾನ ಎನಿಸಿಕೊಂಡಿದೆ.

    ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆ ಧಾರ್ವಿುಕ ದತ್ತಿ ಇಲಾಖೆಯ ದೇವಸ್ಥಾನಗಳ ಲೆಕ್ಕಾಚಾರ ಪರಿಶೀಲಿಸಿ ಈಗ ವರದಿ ನೀಡಿದೆ. ಮುರ್ಡೆಶ್ವರ ದೇವಸ್ಥಾನಕ್ಕೆ 2018-19 ನೇ ಸಾಲಿನಲ್ಲಿ 3 ಕೋಟಿ 53 ಲಕ್ಷ ರೂಪಾಯಿ ಆದಾಯ ಬಂದಿದೆ. 2019-20 ನೇ ಸಾಲಿನಲ್ಲಿ 3.80 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಇದೆ.

    ಎ ದರ್ಜೆಯ 9 ದೇವಸ್ಥಾನಗಳು: ಜಿಲ್ಲೆಯಲ್ಲಿ 25 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಬರುವ ‘ಎ’ದರ್ಜೆಯ 9 ದೇವಸ್ಥಾನಗಳಿವೆ. ಅದರಲ್ಲಿ ಇಡಗುಂಜಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಿಚಾರ ಸುಪ್ರೀಂ ಕೋರ್ಟ್​ನಲ್ಲಿ ಬಾಕಿ ಇರುವುದರಿಂದ ಅದರ ಲೆಕ್ಕಾಚಾರ ಧಾರ್ವಿುಕ ದತ್ತಿ ಇಲಾಖೆ ನಡೆಸುತ್ತಿಲ್ಲ. ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಜಿಲ್ಲಾ ನ್ಯಾಯಾಧೀಶರಿಂದ ನೇಮಕವಾದ ಸಮಿತಿ ಇದೆ. ಆದರೂ ಧಾರ್ವಿುಕ ದತ್ತಿ ಇಲಾಖೆ ಅದನ್ನು ತನ್ನ ವ್ಯಾಪ್ತಿಗೆ ಸೇರಿಸಿ ವಿವರ ಪಡೆದಿದೆ. ಇನ್ನುಳಿದ ಏಳು ದೇವಸ್ಥಾನಗಳಿಗೆ ಇಲಾಖೆಯಿಂದ ಆಯ್ಕೆಯಾದ ನಿರ್ವಹಣಾ ಸಮಿತಿ ದೇವಸ್ಥಾನಗಳ ನಿರ್ವಹಣೆ ನೋಡಿಕೊಳ್ಳುತ್ತಿದೆ.

    3.36 ಕೋಟಿ ರೂ. ಆದಾಯ ಗಳಿಸುವ ಮೂಲಕ ಶಿರಸಿಯ ಮಾರಿಕಾಂಬಾ ದೇವಸ್ಥಾನ ಜಿಲ್ಲೆಯಲ್ಲಿ ಆದಾಯದಲ್ಲಿ ಎರಡನೇ ಸ್ಥಾನದಲ್ಲಿದೆ. ಭಟ್ಕಳ ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಸ್ಥಾನ 1.45 ಕೋಟಿ ರೂ. ಆದಾಯ ಪಡೆದು ಮೂರನೇ ಸ್ಥಾನದಲ್ಲಿದೆ.

    ಶಿರಸಿಯ ರಾಯರಪೇಟೆ ಮಹಾ ಗಣಪತಿ, ಶಂಕರ ದೇವಸ್ಥಾನ 74.37 ಲಕ್ಷ ರೂ., ಕುಮಟಾ ಬಾಡ ಗುಡೇ ಅಂಗಡಿಯ ಬಾಡ ಕಾಂಚಿಕಾ ಪರಮೇಶ್ವರಿ ದೇವಸ್ಥಾನ 54.52 ಲಕ್ಷ ರೂ., ಶಿರಸಿ ಮಂಜಗುಣಿ ವೆಂಕಟರಮಣ ದೇವಸ್ಥಾನ 46.15 ಲಕ್ಷ ರೂ., ಭಟ್ಕಳ ಸೂಸಗಡಿ ಚೆನ್ನಪಟ್ಟಣ ದೇವಸ್ಥಾನ 39.43 ಲಕ್ಷ ರೂ. ಆದಾಯ ಗಳಿಸಿವೆ. ಕಡವಿನಕಟ್ಟಾ ದುರ್ಗಾ ಪರಮೇಶ್ವರಿ ದೇವಸ್ಥಾನ ಇಲಾಖೆಯ ಲೆಕ್ಕಾಚಾರದಲ್ಲಿ ‘ಎ’ದರ್ಜೆಯಲ್ಲಿದ್ದರೂ 5.60 ಲಕ್ಷ ರೂ. ಮಾತ್ರ ಆದಾಯ ಗಳಿಸಿದೆ.

    ಮಧುಕೇಶ್ವರ ದೇಗುಲದ ಗಳಿಕೆ ಹೆಚ್ಚು: 5 ರಿಂದ 25 ಲಕ್ಷ ರೂವರೆಗೆ ಆದಾಯ ಗಳಿಸುವ ದೇವಸ್ಥಾನಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಜಿಲ್ಲೆಯಲ್ಲಿ 8 ‘ಬಿ’ ವರ್ಗದ ದೇವಸ್ಥಾನಗಳಿವೆ. 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ 600 ಕ್ಕೂ ಅಧಿಕ ದೇವಸ್ಥಾನಗಳು ಮುಜರಾಯಿ ಇಲಾಖೆಯಡಿ ಇವೆ. 2017-18 ರ ಆದಾಯ ಆಧರಿಸಿ ಶಿರಸಿ ಬನವಾಸಿಯ ಮಧುಕೇಶ್ವರ ದೇವಸ್ಥಾನವನ್ನು ‘ಬಿ’ ವರ್ಗದ ದೇವಸ್ಥಾನ ಎಂದು ಪರಿಗಣಿಸಲಾಗಿತ್ತು. ಆದರೆ, 2018-19 ನೇ ಸಾಲಿನಲ್ಲಿ 25.42 ಲಕ್ಷ ರೂ. ಆದಾಯ ಗಳಿಸುವ ಮೂಲಕ ಬನವಾಸಿ ‘ಎ’ ದರ್ಜೆಯ ದೇವಸ್ಥಾನಗಳ ಪಟ್ಟಿಗೆ ಸೇರುವ ಅರ್ಹತೆ ಪಡೆದಿದೆ. 2019-20 ನೇ ಸಾಲಿನಲ್ಲಿ 28.5 ಲಕ್ಷ ರೂ. ಆದಾಯದ ನಿರೀಕ್ಷೆ ಇದೆ. ಭಟ್ಕಳ ಸೋಡಿಗದ್ದೆ ಮಹಾಸತಿ ದೇವಸ್ಥಾನ 19.70 ಲಕ್ಷ ರೂ., ಚಿತ್ತಾಕುಲಾ ಶಾಂತಾದುರ್ಗಾ ಮಹಾಮಾಯಾ ದೇವಸ್ಥಾನ 17.12 ಲಕ್ಷ ರೂ., ಕಾರವಾರ ಬಾಡ ಮಹಾದೇವ ದೇವಸ್ಥಾನ 15 ಲಕ್ಷ ರೂ., ಗೋಕರ್ಣ ಮಹಾಗಣಪತಿ ದೇವಸ್ಥಾನ 6.96 ಲಕ್ಷ ರೂ., ತಾಮ್ರಗೌರಿ ದೇವಸ್ಥಾನ 6 ಲಕ್ಷ ರೂ. ಆದಾಯ ಗಳಿಸಿವೆ. ‘ಬಿ’ ದರ್ಜೆಯಲ್ಲೇ ಇದ್ದರೂ ಗೋಕರ್ಣ ಭದ್ರಕಾಳಿ ದೇವಸ್ಥಾನ, ಕುಮಟಾದ ಬರ್ಗಿ ಮಹಾಲಿಂಗೇಶ್ವರ ದೇವಸ್ಥಾನಗಳು 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಗಳಿಸಿವೆ.

    ಸರ್ಕಾರಕ್ಕೆ ಆದಾಯ ಖೋತಾ: ಧಾರ್ವಿುಕ ದತ್ತಿ ಇಲಾಖೆಯ ನಿಯಮದಂತೆ ದೇವಸ್ಥಾನಗಳ ಆದಾಯದಲ್ಲಿ ವೆಚ್ಚಗಳನ್ನು ಕಳೆದು ಉಳಿಯುವ ನಿವ್ವಳ ಮೊತ್ತದಲ್ಲಿ ಶೇ.10 ರಷ್ಟನ್ನು ಸರ್ಕಾರಕ್ಕೆ ನೀಡಬೇಕು. ಜಿಲ್ಲೆಯಲ್ಲಿ ಕೆಲವೇ ದೇವಸ್ಥಾನಗಳು ಈ ನಿಮಯವನ್ನು ಪಾಲಿಸುತ್ತಿವೆ. ಹಲವು ದೇವಸ್ಥಾನಗಳು ಸರ್ಕಾರಕ್ಕೆ ಯಾವುದೇ ಆದಾಯ ನೀಡುತ್ತಿಲ್ಲ ಎಂಬುದು ಧಾರ್ವಿುಕ ದತ್ತಿ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ.

    ಜಾರಿಯಾಗದ ಕಾಯ್ದೆ: ಜಿಲ್ಲೆಯ ಬಹುತೇಕ ದೇವಸ್ಥಾನಗಳು ಬಾಂಬೆ ಸಾರ್ವಜನಿಕ ಜಿಮ್ಮೆಗಳ ಕಾಯ್ದೆ 1950 ರಡಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ರಾಜ್ಯದಲ್ಲಿ ಮೈಸೂರು, ಹೈದ್ರಾಬಾದ್, ಮದ್ರಾಸ್ ಹೀಗೆ ಪ್ರತಿ ಪ್ರಾಂತ್ಯಕ್ಕೂ ಪ್ರತ್ಯೇಕ ಕಾಯ್ದೆಗಳಿದ್ದವು. ರಾಜ್ಯದಲ್ಲಿ ಏಕರೂಪ ಧಾರ್ವಿುಕ ದತ್ತಿ ಕಾಯ್ದೆ ತರುವ ಹಿನ್ನೆಲೆಯಲ್ಲಿ 1997 ರಲ್ಲಿ ಅಧಿನಿಯಮ ಜಾರಿಗೆ ತರಲಾಯಿತು. 2011 ರಲ್ಲಿ ಅದಕ್ಕೆ ತಿದ್ದುಪಡಿ ತಂದು ಜಾರಿ ಮಾಡಲಾಗಿದೆ. ಸದ್ಯ ಅದೇ ಕಾಯ್ದೆ ಎಲ್ಲೆಡೆ ಜಾರಿಯಲ್ಲಿದೆ. ಅದರ ಪ್ರಕಾರ ಧಾರ್ವಿುಕ ದತ್ತಿ ಇಲಾಖೆ ದೇವಸ್ಥಾನಗಳ ಆಡಳಿತ ಸಮಿತಿಯ ಸದಸ್ಯರನ್ನು ನೇಮಕ ಮಾಡುತ್ತದೆ. ಆದರೆ, ಈ ಕಾಯ್ದೆಯನ್ನು ಹಲವು ದೇವಸ್ಥಾನಗಳು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿವೆ. ಹೆಚ್ಚು ಆದಾಯವಿರುವ ಹಾಗೂ ವಿವಾದವಿರುವ ಕೆಲವು ದೇವಸ್ಥಾನಗಳಿಗೆ ಮಾತ್ರ ಜಿಲ್ಲಾಡಳಿತದಿಂದ ಸಮಿತಿಗಳನ್ನು ರಚಿಸಲಾಗಿದೆ. ಉಳಿದವು ಇನ್ನೂ ಹಳೆಯ ಕಾಯ್ದೆಯಡಿಯೇ ಕಾರ್ಯನಿರ್ವಹಿಸುತ್ತಿವೆ. ಹಿಂದಿನ ಕಾಯ್ದೆಯಂತೆ ಅರ್ಚಕರಿಗೆ ತಲಾ 7275, ಗುಮಾಸ್ತ, ಜವಾನರಿಗೆ 6 ಸಾವಿರ ರೂ.ಗಳನ್ನು ಪಾವತಿಸಲಾಗುತ್ತಿದೆ. 2019 ಜುಲೈನಲ್ಲಿ ಹೊರ ನಿಯಮಾವಳಿ ರೂಪಿಸಲಾಗಿದೆ ಅದರಂತೆ ದೇವಸ್ಥಾನದ ಸಿಬ್ಬಂದಿ ವೇತನ ಇನ್ನಷ್ಟು ಹೆಚ್ಚಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts