More

    ಶಾಂತಿಗೆ ಧರ್ಮಪ್ರಜ್ಞೆ ಅಗತ್ಯ

    ಹುಬ್ಬಳ್ಳಿ: ಪ್ರತಿಯೊಬ್ಬರಲ್ಲೂ ದೇಶ ಮತ್ತು ಧರ್ಮದ ಬಗೆಗೆ ಸ್ವಾಭಿಮಾನ, ಶ್ರದ್ಧೆ ಇರಬೇಕು. ಎಲ್ಲರೂ ಸುಖ, ಶಾಂತಿಯಿಂದ ಬದುಕಲು ಧರ್ಮಪ್ರಜ್ಞೆ ಅತ್ಯಗತ್ಯ. ವೀರಶೈವ ಧರ್ಮ, ಸಂಸ್ಕಾರ-ಸಂಸ್ಕೃತಿ ಉಳಿವಿಗೆ ಶ್ರಮಿಸುತ್ತ ಬಂದಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಬಾಳೆಹೊನ್ನೂರಿನ ಶ್ರೀ ಮದ್ವೀರಶೈವ ಸದ್ಭೋಧನ ಸಂಸ್ಥೆ ಹಾಗೂ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ವಿದ್ಯಾನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶ ಉದ್ಘಾಟನೆ ಪ್ರಯುಕ್ತ ಗುರುವಾರ ಸಂಜೆ ಏರ್ಪಡಿಸಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ನಾಗರಿಕತೆಯ ಸಮಾಜದಲ್ಲಿ ಅನಾಗರಿಕತೆಯ ವರ್ತನೆಗಳು ಹೆಚ್ಚುತ್ತಿರುವುದು ನೋವಿನ ಸಂಗತಿ. ಸತ್ಯ, ಸಂಸ್ಕೃತಿ ಪರಿಪಾಲನೆಯಿಂದ ಸಮಾಜದಲ್ಲಿ ಶಾಂತಿ-ಸಾಮರಸ್ಯ ಬೆಳೆಯಲು ಸಾಧ್ಯ. ಸಂಸ್ಕಾರದಿಂದ ಮಾತ್ರ ಭಾರತೀಯ ಸಂಸ್ಕೃತಿ ಉತ್ಕೃಷ್ಟವಾಗಿ ಉಳಿಯಲು ಸಾಧ್ಯ. ವೀರಶೈವ ಧರ್ಮದ ಆದರ್ಶ, ಮೌಲ್ಯಗಳನ್ನು ಬಿತ್ತಿ ಬೆಳೆದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ವೈಶಾಲ್ಯತೆಯ ಧರ್ಮ ಸಂದೇಶ ಸಾಮರಸ್ಯ ಬದುಕಿಗೆ ಸಾಕ್ಷಿಯಾಗಿದೆ. ಗುರುಪೀಠ ಪರಂಪರೆಯಲ್ಲಿ ಶಿವಾಚಾರ್ಯರ ಪಾತ್ರ ಅತ್ಯಂತ ಜವಾಬ್ದಾರಿಯುತವಾದುದು. ಹುಟ್ಟಿನಿಂದ ಅಂತ್ಯದವರೆಗೆ ಶಿವಾಚಾರ್ಯರು ಕೊಡುವ ಸಂಸ್ಕಾರ ಬದುಕಿನ ಉನ್ನತಿಗೆ ಕಾರಣವಾಗಿದೆ. ಆಧುನಿಕತೆ ಮತ್ತು ವೈಚಾರಿಕತೆಯ ಇಂದಿನ ದಿನಗಳಲ್ಲಿ ಸಂಸ್ಕೃತಿ ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದರು.

    ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕಾರದ ಕೊರತೆಯಿಂದ ಸಂಸ್ಕೃತಿ ವಿನಾಶದ ಅಂಚಿನಲ್ಲಿದೆ. ಧರ್ಮ-ಸಂಸ್ಕೃತಿಯನ್ನು ಎತ್ತಿ ಹಿಡಿಯುವ, ಪುನಶ್ಚೇತನಗೊಳಿಸುವ ಕೆಲಸವಾಗಬೇಕಿದೆ ಎಂದರು.

    ‘ವೀರಶೈವ ಧರ್ಮ, ಸಂಸ್ಕೃತಿ ಸಂರಕ್ಷಣೆ’ ಕುರಿತು ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಗರಿಕತೆ ಮತ್ತು ಸಂಸ್ಕೃತಿ ಮಧ್ಯೆ ವ್ಯತ್ಯಾಸವಿದೆ. ನಾಗರಿಕತೆಗೆ ಆಧ್ಯಾತ್ಮದ ಸ್ಪರ್ಶವಾದರೆ ಸಂಸ್ಕೃತಿ ಬೆಳೆಯುತ್ತದೆ. ಆಚಾರ, ವಿಚಾರ, ಮೌಲ್ಯ, ಸಿದ್ಧಾಂತಗಳು ಸಂಸ್ಕೃತಿಯ ಪ್ರತೀಕ ಎಂದರು.

    ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ, ಮುಕ್ತಿ ಮಂದಿರ ಕ್ಷೇತ್ರದ ಶ್ರೀ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

    ಶ್ರೀ ಮದ್ವೀರಶೈವ ಸದ್ಭೋದನಾ ಸಂಸ್ಥೆ ಅಧ್ಯಕ್ಷ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮದ್ವೀರಶೈವ ಸದ್ಭೋದನಾ ಸಂಸ್ಥೆ ತಾಲೂಕು ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ, ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳ ಅಧ್ಯಕ್ಷೆ ಇಂದುಮತಿ ಮಾನ್ವಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts