More

    ವಿವಿಧೆಡೆ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವ

    ಶಿವಮೊಗ್ಗ: ಬೆಂಗಳೂರಿನಲ್ಲಿ ಫೆ.26ರಿಂದ ಮಾರ್ಚ್ 4ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿದ್ದು, ತದನಂತರ ಪ್ರಾದೇಶಿಕ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಶಿವಮೊಗ್ಗ, ಮಂಗಳೂರು, ಧಾರವಾಡ ಸೇರಿ ಹಲವೆಡೆ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವ ಆಯೋಜಿಸುವ ಚಿಂತನೆ ಇದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದರು.

    ಗ್ರಾಮೀಣ ಪ್ರದೇಶಕ್ಕೂ ಅಕಾಡೆಮಿ ಚಟುವಟಿಕೆ ವಿಸ್ತರಿಸುವ ಉದ್ದೇಶದಿಂದ ಐದಾರು ಜಿಲ್ಲೆಗಳನ್ನೊಳಗೊಂಡು ಪ್ರಾದೇಶಿಕ ಚಲನಚಿತ್ರೋತ್ಸವ ನಡೆಸಲಾಗುವುದು ಎಂದು ಗುರುವಾರ ಪ್ರೆಸ್​ಟ್ರಸ್ಟ್ ಆಯೋಜಿಸಿದ್ದ ಸಂವಾದದಲ್ಲಿ ಹೇಳಿದರು.

    ಪ್ರಥಮ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವವನ್ನು ಶಿವಮೊಗ್ಗದಲ್ಲಿಯೇ ನಡೆಸಲಾಗುವುದು. ಈ ವಿಷಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆದ ಬಳಿಕ ಇದಕ್ಕೆ ತಯಾರಿ ನಡೆಸಲಾಗುವುದು. ಈ ಮೂಲಕ ಕನ್ನಡ, ತುಳು, ಕೊಡವ, ಕೊಂಕಣಿ ಮೊದಲಾದ ಪ್ರಾದೇಶಿಕಾ ಭಾಷೆಗಳ ಚಲನಚಿತ್ರಗಳಿಗೆ ಆದ್ಯತೆ ನೀಡಲಾಗುತ್ತದೆ. ಪ್ರಾದೇಶಿಕಾ ಭಾಷೆಗಳನ್ನು ಉತ್ತೇಜಿಸುವ ಉದ್ದೇಶವಿದೆ ಎಂದರು.

    200 ಸಿನಿಮಾ ಡಿಜಿಟಲೀಕರಣ: ಉತ್ತಮ ಸಂದೇಶಗಳಿರುವ ಹಳೆಯ ಚಲನಚಿತ್ರಗಳು ಶಿಥಿಲಾವಸ್ಥೆಗೆ ಹೋಗುತ್ತಿವೆ. ಅವುಗಳು ಕ್ರಮೇಣ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕನ್ನಡದ 100ರಿಂದ 200 ಸಿನಿಮಾಗಳನ್ನು ಡಿಜಿಟಲೀಕರಣ ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಹಳೆಯ ಚಿತ್ರಗಳು ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದರು.

    ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಗಿದ ಬಳಿಕ ಅಕಾಡೆಮಿಯಲ್ಲಿ ಚಟುವಟಿಕೆಗಳು ಕ್ಷೀಣಿಸುತ್ತಿದ್ದವು. ಆದರೆ ಅಕಾಡೆಮಿಯಿಂದ ವರ್ಷವಿಡಿ ಚಟುವಟಿಕೆ ನಡೆಸಲು ತೀರ್ವನಿಸಿದ್ದು, ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರಸ್ತುತ ಐಟಿ-ಬಿಟಿ ಕೆಲಸ ಬಿಟ್ಟು ಕನ್ನಡ ಸಿನಿಮಾಗಳತ್ತ ಯುವಕರು ವಾಲುತ್ತಿದ್ದಾರೆ. ಹಾಗಾಗಿ ಮುಂದಿನ ಎರಡು ವರ್ಷದಲ್ಲಿ ಕನ್ನಡ ಚಿತ್ರರಂಗದ ಚಹರೆ ಸಂಪೂರ್ಣ ಬದಲಾಗಲಿದೆ ಎಂದು ಹೇಳಿದರು.

    20 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ: ಹಿರಿಯ ನಿರ್ದೇಶಕರು, ನಟರು, ನಿರ್ವಪಕರ ಕೊಡುಗೆಗಳನ್ನು ಬಿಂಬಿಸಲು ಅವರ ಪ್ರೊಫೈಲ್​ಗಳನ್ನು ಸಿದ್ಧಪಡಿಸಿ ಅಕಾಡೆಮಿಯಲ್ಲಿ ಪ್ರದರ್ಶಿಸಲಾಗುತ್ತದೆ. ಯುವಕರಿಗೆ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಗ್ರಾಫಿಕ್ ಡಿಸೈನ್, ಅನಿಮೇಷನ್ ಕೋರ್ಸ್​ಗಳನ್ನು ನಡೆಸಲಾಗುವುದು ಎಂದ ಅವರು, ಸರ್ಕಾರ ಅಕಾಡೆಮಿಗೆ 2.5 ಎಕರೆ ಜಾಗ ನೀಡಿದ್ದು, ಅರದಲ್ಲಿ ಫಿಲ್ಮ ಕಾಂಪ್ಲೆಕ್ಸ್ ಆರಂಭಿಸುವ ಆಲೋಚನೆ ಇದೆ. 4-5 ಥಿಯೇಟರ್​ಗಳನ್ನು ನಿರ್ವಿುಸುವ ಚಿಂತನೆಯೂ ಇದೆ. ಜತೆಗೆ ಚಿತ್ರರಂಗದ ಅಲ್ಪಾವಧಿ ಕೋರ್ಸ್​ಗಳನ್ನು ನಡೆಸಲು ನಿರ್ಧರಿಸಿದ್ದು ಸರ್ಕಾರಕ್ಕೆ 20 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಅಂತಾರಾಷ್ಟ್ರೀಯ ಮಾನ್ಯತೆ ವಿಶ್ವಾಸ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ದೇಶವಿದೇಶಗಳ ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಕಲಾವಿದರು, ತಂತ್ರಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಬೆಂಗಳೂರನ್ನು ಜಾಗತಿಕಮಟ್ಟಕ್ಕೆ ತೆಗೆದುಕೊಂಡು ಹೋಗುವ ಯತ್ನ ಮಾಡಲಾಗುತ್ತದೆ. ಜತೆಗೆ ಇದರಿಂದ ಅಕಾಡೆಮಿಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ಸಿಗುವ ವಿಶ್ವಾಸವಿದೆ ಎಂದು ಸುನೀಲ್ ಪುರಾಣಿಕ್ ಹೇಳಿದರು.</p><p>ಪ್ರೆಸ್​ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts