More

    ವಿದ್ಯಾರ್ಥಿಗಳಲ್ಲಿ ಸುಸಂಸ್ಕೃತ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಿ

    ಯಲ್ಲಾಪುರ: ಮಕ್ಕಳಿಗೆ ಪಠ್ಯದ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ, ಸುಸಂಸೃ್ಕ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನೂ ಶಿಕ್ಷಕರು ಮಾಡಬೇಕು. ಶಿಕ್ಷಕರ ವೃತ್ತಿಯನ್ನು ಗೌರವಿಸುವ, ಬಲಪಡಿಸುವುದು ಸಮಾಜದ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಸೋಮವಾರ ಪಟ್ಟಣದ ಅಡಕೆ ಭವನದಲ್ಲಿ ಶಿಕ್ಷಣ ಇಲಾಖೆ, ಅಂಕೋಲಾ ಅರ್ಬನ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರು ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಶಾಲೆ ಆರಂಭಿಸುವ ಕುರಿತು ಸರ್ಕಾರದಿಂದ ಸರಿಯಾದ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರ ವಿದ್ಯಾರ್ಥಿಗಳ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಪಾಲಕರು ಆಸಕ್ತಿ ತೋರದ ಹೊರತು ಶಾಲೆ ಆರಂಭಿಸಲು ಸಾಧ್ಯವಾಗುವುದಿಲ್ಲ. ಮಕ್ಕಳು ಒಂದು ವರ್ಷದ ಶಿಕ್ಷಣವನ್ನಾದರೂ ಕಳೆದುಕೊಳ್ಳಬಹುದು. ಆದರೆ, ಕರೊನಾಕ್ಕೆ ಮಕ್ಕಳನ್ನು ಬಲಿ ಕೊಡಲು ಸರ್ಕಾರ ಸಿದ್ಧವಿಲ್ಲ. ಮಕ್ಕಳ ಹಾಗೂ ಶಿಕ್ಷಕರ ಬದುಕು, ಆರೋಗ್ಯವೇ ನಮ್ಮ ಮೊದಲ ಆದ್ಯತೆ ಎಂದರು.

    ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಾಮುಖ ಪಾಟೀಲ, ರಾಮಚಂದ್ರ ಗಾಂವ್ಕರ, ಉದಯ ನಾಯ್ಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸಂತೋಷ ಶೆಟ್ಟಿ, ಶ್ರೀಧರ ಹೆಗಡೆ ಅವರಿಗೆ ಪ್ರಸಕ್ತ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಕಳೆದ ವರ್ಷ ನಿವೃತ್ತರಾದ ಶಿಕ್ಷಕರನ್ನು ಇಲಾಖೆಯ ವತಿಯಿಂದ ಗೌರವಿಸಲಾಯಿತು. ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಪೂರ್ವಿ ಹೆಗಡೆ ಅವರನ್ನು ಪುರಸ್ಕರಿಸಲಾಯಿತು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು.

    ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೆಕರ್, ನಿರ್ದೇಶಕ ಪ್ರಕಾಶ ಕುಂಜಿ, ಡಯಟ್ ಪ್ರಾಂಶುಪಾಲ ಬಿ.ವಿ.ನಾಯಕ, ಬಿಇಒ ಎನ್.ಆರ್.ಹೆಗಡೆ, ತಾಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯ ಸುಬ್ಬಣ್ಣ ಬೋಳ್ಮನೆ, ಇಒ ಜಗದೀಶ ಕಮ್ಮಾರ, ಜಿಪಂ ಸದಸ್ಯೆ ರೂಪಾ ಬೂರ್ಮನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ತಾಲೂಕಾಧ್ಯಕ್ಷ ಆರ್.ಆರ್. ಭಟ್ಟ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಆರ್. ನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts