More

    ವಾಕರಸಾ ಸಂಸ್ಥೆಯ ಬಸ್ ಸಂಚಾರ ಪುನರಾರಂಭ

    ಹುಬ್ಬಳ್ಳಿ: ನಗರದಿಂದ ವಿವಿಧೆಡೆ ಮಂಗಳವಾರ ವಾಕರಸಾ ಸಂಸ್ಥೆಯ ಬಸ್ ಸಂಚಾರ ಪುನರಾರಂಭಗೊಂಡಿತು. ಮೊದಲ ದಿನ ಪ್ರಯಾಣಿಕರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಹಾಗೂ ಹು-ಧಾ ನಗರ ಸಾರಿಗೆ ಹೊರತುಪಡಿಸಿ ದೂರದ ಊರುಗಳಿಗೆ ತೆರಳುವ ಬಸ್​ಗಳು ಪ್ರಯಾಣಿಕರಿಗಾಗಿ ಗಂಟೆಗಟ್ಟಲೇ ಕಾಯಬೇಕಾಯಿತು.

    ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಇದೇ ಮೊದಲ ಬಾರಿಗೆ ಹು-ಧಾ ಹಾಗೂ ಗ್ರಾಮೀಣ ಸಾರಿಗೆ ಬಸ್​ಗಳನ್ನು ಮಾತ್ರ ಓಡಿಸಲಾಯಿತು. ದೂರದ ಊರುಗಳಿಗೆ ತೆರಳುವ ವೇಗದೂತ ಬಸ್​ಗಳ ಸಂಚಾರವನ್ನು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಸಾರಿಗೆ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಸಿಬಿಟಿಯಿಂದ ನಗರ ಸಾರಿಗೆ ಬಸ್​ಗಳು ಸಂಚರಿಸಿದವು. ಎಲ್ಲೆಡೆ ಪ್ರಯಾಣಿಕರ ಕೊರತೆ ಕಂಡು ಬಂದಿತು.

    ಬೆಂಗಳೂರಿಗೆ ಹೆಚ್ಚು: ಹುಬ್ಬಳ್ಳಿಯಿಂದ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಜಾಸ್ತಿ ಕಂಡುಬಂದಿತು. ಹೊಸ ಬಸ್ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ 10 ಗಂಟೆಯ ಒಳಗೆ 5 ಬಸ್​ಗಳು ಬೆಂಗಳೂರಿಗೆ ತೆರಳಿದವು. 10 ಗಂಟೆಯ ಬಳಿಕ ಬೆಂಗಳೂರಿಗೆ ಬಸ್ ಓಡಿಸುವಂತಿಲ್ಲ. ಸಂಜೆ 7 ಗಂಟೆಯ ವೇಳೆಗೆ ಕರ್ಫ್ಯೂ ಜಾರಿಯಾಗುವುದರಿಂದ ಅಷ್ಟರೊಳಗೆ ಬಸ್​ಗಳು ಬೆಂಗಳೂರು ತಲುಪಿರಬೇಕು ಎಂಬುದು ಇದಕ್ಕೆ ಕಾರಣ.

    ಇಲ್ಲಿಂದ ಬೆಳಗಾವಿ, ಕಲಬುರಗಿ, ಶಿರಸಿ, ದಾವಣಗೆರೆ, ಹಾವೇರಿಗೆ ಬಸ್​ಗಳನ್ನು ಓಡಿಸಲಾಯಿತು. ಆದರೆ, ಮೊದಲು ಹತ್ತಿದ ಪ್ರಯಾಣಿಕರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಸಾಮಾನ್ಯ ದಿನಗಳಲ್ಲಿ ನೂರಾರು ಬಸ್​ಗಳು ಹಾಗೂ ಸಾವಿರಾರು ಜನರಿಂದ ಸದಾ ಗಿಜುಗಿಡುತ್ತಿದ್ದ ಹಳೇ ಬಸ್ ನಿಲ್ದಾಣದಿಂದ ಗ್ರಾಮೀಣ ಭಾಗಕ್ಕೆ ಮೊದಲ ಟ್ರಿಪ್​ನಲ್ಲಿ ಬಹುತೇಕ ಖಾಲಿ ಬಸ್​ಗಳನ್ನೇ ಓಡಿಸಲಾಯಿತು. ಬೆ. 7.45ಕ್ಕೆ ಹೊರಟ ಮೊದಲ ಬಸ್ (ಹುಬ್ಬಳ್ಳಿ-ತರ್ಲಘಟ್ಟ)ನಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಇದ್ದ. ಬಳಿಕ ಮಂಟೂರ (0), ಬ್ಯಾಹಟ್ಟಿ (1), ಶಿರಹಟ್ಟಿ (2), ಕುಂದಗೋಳ (2), ಶಿರಗುಪ್ಪಿ (1), ಕಲಘಟಗಿ (4), ತಡಸ (1), ಹೆಬ್ಬಳ್ಳಿ (1), ನರಗುಂದ (1)ಕ್ಕೆ ಪ್ರಯಾಣಿಕರ ಕೊರತೆಯ ನಡುವೆಯೂ ಬಸ್​ಗಳನ್ನು ಓಡಿಸಲಾಯಿತು.

    ‘ಲಾಕ್​ಡೌನ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಗ್ರಾಮೀಣ ಭಾಗದ ಜನರು ನಗರದಲ್ಲಿ ಇರಲಿಲ್ಲ. ಗ್ರಾಮೀಣ ಭಾಗದಿಂದ ಜನರು ಬಸ್​ನಲ್ಲಿ ನಗರಕ್ಕೆ ಬರಲು ಅನುಕೂಲವಾಗುವಂತೆ ಮೊದಲ ಟ್ರಿಪ್​ನಲ್ಲಿ ಒಬ್ಬಿಬ್ಬರು ಪ್ರಯಾಣಿಕರಿದ್ದರೂ ಇಲ್ಲಿಂದ ವಿವಿಧ ಗ್ರಾಮಗಳಿಗೆ ಬಸ್ ಬಿಡಲಾಗಿದೆ’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

    ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸಮಾಧಾನಕರವಾಗಿತ್ತು. ಸಿಬಿಟಿಯಿಂದ 20 ಪ್ರಮುಖ ಮಾರ್ಗಗಳಲ್ಲಿ ನಗರ ಸಾರಿಗೆ ಬಸ್​ಗಳು ಸಂಚರಿಸಿದವು. ಗೋಕುಲ ರಸ್ತೆ, ಲಿಂಗರಾಜನಗರ, ವಿದ್ಯಾನಗರ, ಇನ್ನಿತರ ಕಡೆ ಬಸ್ ಸಂಚಾರವಿತ್ತು. ಒಳ ರಸ್ತೆಗಳಲ್ಲಿ ಬಸ್​ಗಳು ಓಡಾಡಲಿಲ್ಲ.

    ಸುರಕ್ಷಾ ಕ್ರಮ: ಬಸ್ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಿ ಒಳಗೆ ಬಿಡಲಾಯಿತು. ಮಾಸ್ಕ್ ಧರಿಸಿದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಯಿತು. ಚಾಲಕ, ನಿರ್ವಾಹಕರ ಆರೋಗ್ಯ ತಪಾಸಣೆ ನಡೆಸಿಯೇ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಚಾಲಕ-ನಿರ್ವಾಹಕರು ಮಾಸ್ಕ್, ಹ್ಯಾಂಡ್​ಗ್ಲೌಸ್ ಧರಿಸಿದ್ದರು. ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್, ಸಿಟಿಎಂ ಸಂತೋಷಕುಮಾರ, ಡಿಟಿಒ ಅಶೋಕ ಪಾಟೀಲ, ಇತರರು ಇದ್ದರು. ಬಸ್ ನಿಲ್ದಾಣದ ಸುತ್ತಮುತ್ತ ಆಟೋ ರಿಕ್ಷಾಗಳು ಸಾಲುಗಟ್ಟಿ ನಿಂತಿದ್ದವು.

    ಧಾರವಾಡದಿಂದ 67 ಬಸ್ ಕಾರ್ಯಾಚರಣೆ:ಧಾರವಾಡ ಡಿಪೋದಿಂದ ಗ್ರಾಮೀಣ ಪ್ರದೇಶ, ಉಪನಗರ ಸೇರಿ 67 ಬಸ್​ಗಳು ಕಾರ್ಯಾಚರಣೆ ನಡೆಸಿವೆ. ಪ್ರಯಾಣಿಕರ ಹಾಗೂ ಸಿಬ್ಬಂದಿ ಹಿತದೃಷ್ಟಿಯಿಂದ ಸಾರಿಗೆ ಸಂಸ್ಥೆ ವತಿಯಿಂದ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

    ಬಸ್ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಮುಖ್ಯದ್ವಾರದ ಬಳಿಯೇ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಹೆಸರು, ದೂರವಾಣಿ ಸಂಖ್ಯೆ ಪಡೆದು ಪ್ರವೇಶ ನೀಡಲಾಗುತ್ತಿತ್ತು. ಬೇರೆ ಜಿಲ್ಲೆಗಳಿಗೆ ತೆರಳುವ ಬಸ್​ಗಳಲ್ಲಿ ಸರಾಸರಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು, ಬಾಗಲಕೋಟೆ,

    ಬೆಳಗಾವಿ ಮತ್ತಿತರ ಜಿಲ್ಲೆಗಳಿಗೆ ಬಸ್ ಸಂಚಾರ ನಡೆಸಿದವು. ಪ್ರಾರಂಭಿಕ ಹಂತದಲ್ಲಿ ಕೆಲ ಬಸ್​ಗಳು ಮಾತ್ರ ಕಾರ್ಯಾಚರಣೆಗೆ ಇಳಿದಿರುವ ಕಾರಣಕ್ಕೆ ಕೆಲ ಪ್ರಯಾಣಿಕರಿಗೆ ಅವಕಾಶ ಸಿಗದೇ ಮನೆಗೆ ಮರಳಿದರು.

    ಉಪನಗರ ಬಸ್ ನಿಲ್ದಾಣದಲ್ಲೂ ಮಾರ್ಕಿಂಗ್ ಸೇರಿ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಸಿಟಿ ಬಸ್ ನಿಲ್ದಾಣದಲ್ಲಿ ಮಾತ್ರ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಪ್ರಯಾಣಿಕರು, ಚಾಲಕರು ಹಾಗೂ ನಿರ್ವಾಹಕರು ಗುಂಪು ಗುಂಪಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

    ಜನರಿಲ್ಲದೆ ಕುಂದಗೋಳ ಬಸ್ ನಿಲ್ದಾಣ ಭಣಭಣ: ಲಾಕ್​ಡೌನ್​ನಿಂದ ಬಸ್ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬಸ್​ಗಳ ಸಂಚಾರ ಪುನರಾರಂಭವಾಗಿದೆ. ಆದರೆ, ಸಾರ್ವಜನಿಕರಿಂದ ಪ್ರಯಾಣಕ್ಕೆ ಉತ್ಸಾಹ ಕಂಡುಬರಲಿಲ್ಲ. ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್​ಗಳು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಯರಗುಪ್ಪಿ, ಕಮಡೊಳ್ಳಿ, ಸಂಶಿ, ಲಕ್ಷೆ್ಮೕಶ್ವರ ಕಡೆಗೆ ಬಸ್​ಗಳು ಸಂಚರಿಸಿದವು. ಆದರೆ, ಸಾರ್ವಜನಿಕರು ಪ್ರಯಾಣಕ್ಕೆ ಹಿಂದೇಟು ಹಾಕಿದ್ದರಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು. ಇನ್ನು ಗ್ರಾಮೀಣ ಭಾಗದ ಪ್ರಯಾಣಿಕರು ಬಾರದೇ ಇರುವುದರಿಂದ ಬಸ್ ನಿಲ್ದಾಣ ಭಣಗುಡುತ್ತಿತ್ತು. ಬಹುತೇಕ ಜನರು ಬೈಕ್​ಗಳಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಕಲಘಟಗಿಯಲ್ಲಿ ಉತ್ತಮ ಪ್ರತಿಕ್ರಿಯೆ: ಕಲಘಟಗಿ ಪಟ್ಟಣದ ಬಸ್ ನಿಲ್ದಾಣದಿಂದ ಹುಬ್ಬಳ್ಳಿಗೆ ಸುವರ್ಣ ಸಾರಿಗೆ 2, ಧಾರವಾಡ 2, ಮುತ್ತಗಿ ಮಾರ್ಗವಾಗಿ 1 ಬಸ್ ಹೀಗೆ ಬಸ್​ಗಳು ಸಂಚರಿಸಿದವು. ಹಳಿಯಾಳ ತಾಲೂಕಿನಿಂದ ಪ್ರಯಾಣಿಕರು ಬರದಿದ್ದರಿಂದ ಆ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಕಲಘಟಗಿಯಿಂದ ಸುವರ್ಣ ಬಸ್ ಸಂಚಾರ ಪ್ರಾರಂಭವಾಗಿದ್ದು, 1 ಬಸ್​ನಲ್ಲಿ 10-15 ಜನ ಪ್ರಯಾಣಿಸಿದರು. ಹಳ್ಳಿಗಳಿಗೆ ಬಸ್ ಸಂಚಾರವಿಲ್ಲದ ಕಾರಣ ಕಡಿಮೆ ಜನ ಕಂಡುಬಂದರು. ಹುಬ್ಬಳ್ಳಿಗೆ ತೆರಳುವ ಬಸ್​ನಲ್ಲಿ ಪ್ರಯಾಣಿಕರು ಪರಸ್ಪರ ಅಂತರ ಕಾಯ್ದುಕೊಂಡರು ಎಂದು ಕಲಘಟಗಿ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಎಸ್.ಸಿ. ಬುಲುಬಲೆ ತಿಳಿಸಿದರು.

    ನವಲಗುಂದದಲ್ಲಿ ಪ್ರಯಾಣಿಕರ ಕೊರತೆಯಿಂದ ಬಸ್ ಸಂಚಾರ ಸ್ಥಗಿತ: ಸಾರಿಗೆ ಸಂಸ್ಥೆಯ ಬಸ್​ಗಳ ಸಂಚಾರ ಆರಂಭಕ್ಕೆ ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಪ್ರಯಾಣಿಕರ ಕೊರತೆಯಿಂದ ಬಸ್​ಗಳ ಸಂಚಾರ ಮಂಗಳವಾರ ಸ್ಥಗಿತಗೊಂಡಿತು.

    24 ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಮುಂದಾಗಿದ್ದ ಸ್ಥಳೀಯ ಡಿಪೋ ವ್ಯವಸ್ಥಾಪಕಿ ಮಹೇಶ್ವರಿ ಅವರು, ಪ್ರಯಾಣಿಕರ ಹಿತದೃಷ್ಟಿಯಿಂದ ಕರೊನಾ ತಡೆಗಾಗಿ ಮುನ್ನೆಚ್ಚರಿಕೆ ಕ್ರಮ ಅನುರಿಸಿದ್ದೇವೆ. ಒಂದು ಬಸ್​ನಲ್ಲಿ ಕನಿಷ್ಠ 30 ಪ್ರಯಾಣಿಕರು ಬೇಕಾಗಿದ್ದರಿಂದ ಗ್ರಾಮೀಣ ಭಾಗಕ್ಕೆ ಬಸ್ ಓಡಿಸಿಲ್ಲ. ನವಲಗುಂದದಿಂದ ಹುಬ್ಬಳ್ಳಿಗೆ ಮತ್ತು ಗದುಗಿಗೆ ತಲಾ ಒಂದು ಬಸ್ ಓಡಿಸಲಾಗಿದೆ. ಉಳಿದ ಬಸ್​ಗಳಿಗೆ ನಿರೀಕ್ಷಿಸಿದಂತೆ ಪ್ರಯಾಣಿಕರು ಬಾರದ್ದರಿಂದ ಬಸ್​ಗಳನ್ನು ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿತ್ತು. ಸಂಜೆ ಹೊತ್ತಿಗೆ ಎಲ್ಲ ಬಸ್​ಗಳನ್ನು ಡಿಪೋಕ್ಕೆ ಮರಳಿ ಕಳುಹಿಸಲಾಯಿತು. ಬುಧವಾರದಿಂದ ಅಗತ್ಯಕ್ಕೆ ತಕ್ಕಂತೆ ಪ್ರಯಾಣಿಕರು ಲಭ್ಯವಾದರೆ ಗ್ರಾಮೀಣ ಭಾಗಕ್ಕೂ ಬಸ್ ಸಂಚಾರ ಆರಂಭಿಸುತ್ತೇವೆ. ಇಲ್ಲದಿದ್ದರೆ, ಸಾರಿಗೆ ಸಂಸ್ಥೆ ಮೇಲಧಿಕಾರಿಗಳು ನಿರ್ದೇಶನದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರ

    ಜಿಲ್ಲೆಯಿಂದ ಜಿಲ್ಲೆಗೆ ತೆರಳಲು ಬೇಕಿಲ್ಲ ಪಾಸ್

    ಧಾರವಾಡ: ಲಾಕ್​ಡೌನ್ ಸಂದರ್ಭದಲ್ಲಿ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಬೆಳೆಸಲು ಜಿಲ್ಲಾಡಳಿತದ ವತಿಯಿಂದ ಇ ಪಾಸ್ ಪಡೆಯಬೇಕಿತ್ತು. ಆದರೆ, ರಾಜ್ಯ ಸರ್ಕಾರ ಮಂಗಳವಾರದಿಂದ ಬಸ್ ಸಂಚಾರ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ಪಡೆಯಬೇಕಿದ್ದ ಪಾಸ್ ವ್ಯವಸ್ಥೆಯನ್ನೂ ಜಿಲ್ಲಾಡಳಿತ ರದ್ದು ಪಡಿಸಿದೆ.

    ಜಿಲ್ಲೆಗಳಿಂದ ಜಿಲ್ಲೆಗೆ ತೆರಳಲು ಪಡೆಯಬೇಕಿದ್ದ ಪಾಸ್ ವ್ಯವಸ್ಥೆಯನ್ನು ಮಾತ್ರ ರದ್ದು ಮಾಡಿದೆ. ಅಂತರ ರಾಜ್ಯಗಳಿಗೆ ಪ್ರಯಾಣ ಮಾಡುವವರು ಸೇವಾ ಸಿಂಧು ತಂತ್ರಾಂಶದ ಮೂಲಕ ಪಾಸ್​ಗಳನ್ನು ಪಡೆಯಬೇಕಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಖಾಸಗಿ ವಾಹನಗಳೂ ಸಂಚರಿಸಲು ಅವಕಾಶವಿದೆ. ಆದರೆ, ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಖಾಸಗಿ ವಾಹನದಲ್ಲಿ ಚಾಲಕ ಹಾಗೂ ಇಬ್ಬರಿಗೆ ಪ್ರಯಾಣ ಮಾಡಲು ಅವಕಾಶವಿದೆ. ಹೆಚ್ಚಿನ ಜನರು ಇದ್ದಲ್ಲಿ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪ್ರಯಾಣದ ಸಂದರ್ಭದಲ್ಲಿ ಪಾಲಿಸದಿದ್ದಲ್ಲಿ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲು ಅವಕಾಶ ಇದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದ್ದಾರೆ.

    1047 ಅನುಸೂಚಿಗಳಲ್ಲಿ ಸೇವೆ: ವಾಕರಸಾ ಸಂಸ್ಥೆಯ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಮಂಗಳವಾರ 1047 ಅನುಸೂಚಿ (ಶೆಡ್ಯೂಲ್)ಗಳಲ್ಲಿ ಬಸ್​ಗಳು ಸಂಚರಿಸಿವೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 110, ಧಾರವಾಡ ಗ್ರಾಮಾಂತರ-82, ಹು-ಧಾ ನಗರ ಸಾರಿಗೆ-62, ಬೆಳಗಾವಿ-144, ಚಿಕ್ಕೋಡಿ-152, ಬಾಗಲಕೋಟೆ-202, ಗದಗ-66, ಹಾವೇರಿ-218 ಹಾಗೂ ಉತ್ತರ ಕನ್ನಡ ವಿಭಾಗದಲ್ಲಿ 11 ಅನುಸೂಚಿಗಳಲ್ಲಿ ಸಾರಿಗೆ ಕಾರ್ಯಾಚರಣೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್​ಗಳನ್ನು ಓಡಿಸಲಾಗಿದೆ ಎಂದು ಹೇಳಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts