More

    ಲೋಹದ ಹಕ್ಕಿಗಳ ಸ್ವಚ್ಛಂದ ಹಾರಾಟ!

    ಹುಬ್ಬಳ್ಳಿ: ಕರೊನಾ ವೈರಸ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ದೇಶದ ಹಲವೆಡೆ ಲಾಕ್​ಡೌನ್ ಹೇರಲಾಗಿದೆ. ರಾಜ್ಯದಲ್ಲೂ ಜನತಾ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ನಡುವೆ ಲೋಹದ ಹಕ್ಕಿಗಳು ಯಾವುದೇ ಅಡ್ಡಿ ಇಲ್ಲದೆ ಸ್ವಚ್ಛಂದವಾಗಿ ಹಾರಾಡುತ್ತಿವೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರೂ ಆಗಸಕ್ಕೆ ನೆಗೆಯುತ್ತಿದ್ದಾರೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಎಂದಿನಂತೆ ನಿತ್ಯ ಹತ್ತಾರು ವಿಮಾನಗಳು ಸಂಚರಿಸುತ್ತಿವೆ. ಕೆಲ ವಿಮಾನಗಳಲ್ಲಿ ಪ್ರಯಾಣಿಕರ ಕೊರತೆ ಇರುವುದನ್ನು ಬಿಟ್ಟರೆ ಉಳಿದೆಲ್ಲ ಸೇವೆ ಸಾಮಾನ್ಯವಾಗಿದೆ. ಇಂಡಿಗೋ, ಸ್ಟಾರ್ ಏರ್ ಸಂಸ್ಥೆಯ ವಿಮಾನಗಳು ನಿತ್ಯ ಸೇವೆ ಒದಗಿಸುತ್ತಿವೆ. ತಾಂತ್ರಿಕ ಕಾರಣದಿಂದ ಏರ್ ಅಲಯನ್ಸ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಬೆಂಗಳೂರು, ಮುಂಬೈ, ಹಿಂಡಾನ್, ಚೆನ್ನೈ, ಕಣ್ಣೂರು, ತಿರುಪತಿ, ಕೊಚ್ಚಿನ್, ಗೋವಾ, ಅಹಮದಾಬಾದ್ ಸೇರಿದಂತೆ ಮತ್ತಿತರ ಮಹಾನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ಕೋವಿಡ್ ನಿಯಮಾವಳಿ ಪ್ರಕಾರ ಸುರಕ್ಷಾ ಕ್ರಮಗಳೊಂದಿಗೆ ವೈಮಾನಿಕ ಸೇವೆ ಒದಗಿಸಲಾಗುತ್ತಿದೆ. ಪ್ರಯಾಣಿಕರ ಕೊರತೆ ಹಾಗೂ ತಾಂತ್ರಿಕ ಕಾರಣದಿಂದಾಗಿ ವಿಮಾನ ಸಂಸ್ಥೆಗಳು ಕೆಲವೊಮ್ಮೆ ವಿಮಾನ ಸೇವೆಯನ್ನು ರದ್ದು ಮಾಡುತ್ತವೆ. ಮೊದಲೇ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಮರುದಿನ ಅಥವಾ ನಂತರದ ವಿಮಾನಯಾನಕ್ಕೆ ಅನುವು ಮಾಡಿಕೊಡುತ್ತಿವೆ. ಬೇಡ ಎಂದರೆ ಟಿಕೆಟ್ ಶುಲ್ಕ ಮರುಪಾವತಿಯನ್ನೂ ಮಾಡಲಾಗುತ್ತದೆ ಎನ್ನುತ್ತವೆ ಏರ್​ಪೋರ್ಟ್ ಮೂಲಗಳು.

    500 ಪ್ರಯಾಣಿಕರ ಸಂಚಾರ: ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೇರೆ ನಗರಗಳಿಗೆ ಹಾಗೂ ಬೇರೆ ನಗರಗಳಿಂದ ಹುಬ್ಬಳ್ಳಿಗೆ ಏ. 28ರಂದು (ಬುಧವಾರ) ಒಂದೇ ದಿನ 400 ಪ್ರಯಾಣಿಕರು ಸಂಚರಿಸಿದ್ದಾರೆ. ಏ. 27ರಂದು (ಮಂಗಳವಾರ) 150 ಪ್ರಯಾಣಿಕರು ಸಂಚರಿಸಿದ್ದರು. ಏ. 26ರಂದು (ಸೋಮವಾರ) 500 ಪ್ರಯಾಣಿಕರು ಸಂಚರಿಸಿದ್ದರು.

    ಕೋವಿಡ್ ವರದಿ ಕಡ್ಡಾಯ

    ಕೋವಿಡ್ ಫಲಿತಾಂಶ ನೆಗೆಟಿವ್ ಇದ್ದರೆ ಮಾತ್ರ ವಿಮಾನಯಾನಕ್ಕೆ ಅವಕಾಶ ನೀಡಲಾಗುತ್ತದೆ. ವಿಮಾನಯಾನ ಬಯಸುವವರು ಆರ್​ಟಿಪಿಸಿಆರ್ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿರಬೇಕು. 72 ಗಂಟೆಯೊಳಗಿನ ನೆಗೆಟಿವ್ ವರದಿ ಹೊಂದಿರಬೇಕು.

    ಕೆಲವೊಮ್ಮೆ ವ್ಯತ್ಯಯ

    ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಇಂಡಿಗೊ ಸಂಸ್ಥೆ ಗುರುವಾರ (29.04.2021) ಮುಂಬೈ, ಚೆನ್ನೈ, ಕೊಚ್ಚಿನ್, ಗೋವಾ, ಅಹಮದಾಬಾದ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ನಂತರದ ದಿನಗಳಲ್ಲಿ ಸೇವೆ ಎಂದಿನಂತೆ ಇರಬಹುದಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

    ಬೆಂಗಳೂರಿಗೆ ಬೇಡಿಕೆ ಹೆಚ್ಚು

    ಹುಬ್ಬಳ್ಳಿ- ಬೆಂಗಳೂರು ವಿಮಾನ ಸೇವೆಗೆ ಹೆಚ್ಚು ಬೇಡಿಕೆ ಇದೆ. ನಿತ್ಯ ಮೂರ್ನಾಲ್ಕು ವಿಮಾನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಭಾಗಶಃ ಸೀಟುಗಳು ಭರ್ತಿಯಾಗಿರುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts