More

    ಲೆಕ್ಕಕ್ಕಿಲ್ಲದಂತಾದ ಮಾರ್ಗಸೂಚಿ

    ಹಿರೇಬಾಗೇವಾಡಿ: ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಕೋವಿಡ್ ನಿಯಂತ್ರಣ ನಿಯಮ ಗಾಳಿಗೆ ತೂರಿ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಹಾಗೂ ಔಷದಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅದರೆ, ಯಾವ ಅಂಗಡಿಯ ಮುಂದೆಯೂ ಜನರು ಅಂತರ ಕಾಯ್ದುಕೊಳ್ಳುವಂತೆ ಮಾರ್ಕ್ ಮಾಡಲಾಗಿಲ್ಲ. ಅದನ್ನು ಗಮನಿಸಿ ವ್ಯಾಪಾರಸ್ಥರಿಗೆ ಹಾಗೂ ಜನರಿಗೆ ಜಾಗೃತಿ ಮೂಡಿಸಬೇಕಾದ ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

    ಗ್ರಾಮದಲ್ಲಿ ಪ್ರತಿ ಮಂಗಳವಾರ ನಡೆಸಲಾಗುವ ಸಂತೆಯನ್ನು ಎರಡು ವಾರಗಳ ಕಾಲ ರದ್ದುಪಡಿಸಿದ್ದರೂ ಕೂಡ ಈ ವಾರವೂ ಸಂತೆ ಸೇರಿತ್ತು. ಜನದಟ್ಟಣೆ ಸೇರುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆ ಅರಿತ ಸ್ಥಳೀಯ ಪೊಲೀಸರು ಸಂತೆ ಮೊಟಕುಗೊಳಸಿ ವ್ಯಾಪಾರಸ್ಥರು ಹಾಗೂ ಗ್ರಾಹಕರನ್ನು ವಾಪಸ್ ಕಳಿಸಿದ್ದಾರೆ. ಒಂದು ವಾರದಲ್ಲಿ ಹಿರೇಬಾಗೇವಾಡಿ ಸುತ್ತಮುತ್ತಲಿನ ಗ್ರಾಮ ಗಳಲ್ಲಿ 10ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಗಳು ಕಂಡುಬಂದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಲ್ಲಿ ಹೆಸರಿಗೆ ಮಾತ್ರ ಜನತಾ ಕರ್ಫ್ಯೂ ಜಾರಿಯಲ್ಲಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಇಷ್ಟೆಲ್ಲ ಅಧಿಕಾರಿಗಳ
    ಮುಂದೆಯೇ ನಡೆಯುತ್ತಿದ್ದರೂ ಅವರು ಯಾರ ಮುಲಾಜಿಗೆ ಕಾಯುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಈ ಬಗ್ಗೆ ಬೆಳಗಾವಿ ತಹಸೀಲ್ದಾರ್ ಶೈಲೇಶ ಪರಮಾನಂದ ಅವರನ್ನು ಸಂಪರ್ಕಿಸಿದಾಗ, ನಿಯಮ ಉಲ್ಲಂಘನೆ ನಮ್ಮ ಗಮನಕ್ಕೆ ಬಂದಿಲ್ಲ, ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ.

    ಇನ್ನಾದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಎಚ್ಚೆತ್ತು ಜನರು ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ
    ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts