More

    ಲಾಠಿ ಬಿಟ್ಟು ದಂಡ ಪ್ರಯೋಗ

    ಕಾರವಾರ: ಲಾಕ್​ಡೌನ್ ವ್ಯವಸ್ಥಿತ ಜಾರಿಗೆ ಜಿಲ್ಲೆಯ ಪೊಲೀಸರು ದಂಡ(ಲಾಠಿ)ಪ್ರಹಾರ ಬಿಟ್ಟು ದಂಡ(ಫೈನ್)ಪ್ರಯೋಗ ಆರಂಭಿಸಿದ್ದರಿಂದ ಮಾ.24ರಿಂದ ಇಲ್ಲಿಯವರೆಗೆ ಸರ್ಕಾರಕ್ಕೆ 3.60 ಲಕ್ಷ ರೂ. ಆದಾಯವಾಗಿದೆ.

    ಹೌದು, ನಿಯಮ ಮೀರಿ ಹೊರ ಬರುವವರ ಮೇಲೆ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಲಾಠಿ ಭಿಸುತ್ತಿದ್ದರು. ಉತ್ತರ ಕನ್ನಡದಲ್ಲಿ ಅಲ್ಲೊಂದು ಇಲ್ಲೊಂದು ಲಾಠಿ ಪ್ರಯೋಗ ಪ್ರಕರಣಗಳು ನಡೆದವು. ನಂತರ ಎರಡು, ಮೂರನೇ ದಿನದಿಂದ ಪೊಲೀಸರು ಜನರಿಂದ ದಂಡ ಆಕರಿಸಲು ಪ್ರಾರಂಭಿಸಿದರು. ಇದರಿಂದ ಜನರು ವಾಹನವೇರಿ ಹೊರ ಬರುವುದೂ ಕಡಿಮೆಯಾಗುವ ಜತೆಗೆ ಸರ್ಕಾರಕ್ಕೂ ಆದಾಯವಾಗಿದೆ.

    ಬೈಕ್ ಪಡೆದು ಹೊರ ಬಂದವರ ಮೇಲೆ ಹೆಲ್ಮೆಟ್ ಧರಿಸದೇ ಇರುವುದು, ಚಾಲನಾ ಪರವಾನಗಿ, ಇನ್ಶುರೆನ್ಸ್ ಹೀಗೆ ವಿವಿಧ ಕಾರಣಗಳಿಗೆ ಒಟ್ಟು 3060 ಐಎಂವಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಲಾಕ್​ಡೌನ್ ಉಲ್ಲಂಘನೆಗೆ ಸಂಬಂಧಿಸಿದಂತೆ 53 ಪ್ರಕರಣಗಳನ್ನು ದಾಖಲಿಸಲಾಗಿದೆ. 209 ವಾಹನಗಳನ್ನು ಇದುವರೆಗೆ ಸೀಜ್ ಮಾಡಿ ಇಟ್ಟುಕೊಳ್ಳಲಾಗಿದೆ ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

    ರಮಜಾನ್ ನಿಯಮ ಉಲ್ಲಂಘಿಸಿದರೆ ಕ್ರಮ: ರಮಜಾನ್ ಅವಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಈ ಸಂಬಂಧ ಗೃಹ ಸಚಿವರು ಜಿಲ್ಲೆಯ ಮುಸ್ಲಿಂ ಮುಖಂಡರ ಜತೆ ನೇರವಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿ ವಿನಂತಿ ಮಾಡಿಕೊಂಡಿದ್ದಾರೆ. ಇನ್ನು ನಾವೂ ಸಭೆ ನಡೆಸಿ ಎಲ್ಲ ಮುಖಂಡರಿಗೂ ವಿವರಿಸಿ ಹೇಳಲಾಗಿದೆ. ಎಲ್ಲರೂ ಅದಕ್ಕೆ ಒಪ್ಪಿಕೊಂಡಿದ್ದಾರೆ.

    ರಮಜಾನ್ ಉಪವಾಸದ ದಿನಗಳಲ್ಲಿ ಇಫ್ತಿಯಾರ್ ಕೂಟ ಮಾಡಬಾರದು. ಮಸೀದಿ ಸುತ್ತ ಅಂಗಡಿ ಹಾಕಬಾರು. ಒಟ್ಟಾರೆ ಯಾವುದೇ ಕಾರಣಕ್ಕೂ ಜನ ಸೇರಬಾರದು ಎಂದು ತಿಳಿಸಲಾಗಿದೆ. ನಿಯಮ ಮೀರಿದಲ್ಲಿ ಕ್ರಮ ವಹಿಸುವುದಾಗಿ ಎಸ್​ಪಿ ಶಿವಪ್ರಕಾಶ ಎಚ್ಚರಿಸಿದರು.

    ನಿವೃತ್ತ ಸೈನಿಕರಲ್ಲಿ ವಿನಂತಿ: ದೇಶದಲ್ಲಿ ಒಟ್ಟು 17 ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಕೇಂದ್ರ ಗೃಹ ಸಚಿವಾಲಯ ರಿಯಾಯಿತಿ ನೀಡಿದೆ. ಅದರಂತೆ ಮುಂದಿನ ದಿನದಲ್ಲಿ ಜನರ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1300 ಪೊಲೀಸರಿದ್ದಾರೆ. ಅವರ ಜತೆ ಹೆಚ್ಚುವರಿಯಾಗಿ 200 ಹೋಂಗಾರ್ಡ್​ಗಳನ್ನು ಕರ್ತವ್ಯಕ್ಕೆ ಪಡೆಯಲು ವಿನಂತಿಸಲಾಗಿದೆ. ಮುಂದಿನ ದಿನದಲ್ಲಿ ನಿವೃತ್ತ ಸೈನಿಕರನ್ನು ಗುರುತಿಸಿ ಅವರಿಂದಲೂ ಸೇವೆ ಪಡೆಯಲು ವಿನಂತಿಸಲಾಗುವುದು ಎಂದು ಎಸ್​ಪಿ ತಿಳಿಸಿದರು.

    ಇಷ್ಟು ದಿನದ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜನರಿಗಾಗಿಯೇ ನಾವೆಲ್ಲ ಕಾರ್ಯನಿರ್ವಹಿಸುತ್ತಿದ್ದು, ಜನರೂ ಅದನ್ನು ಅರ್ಥ ಮಾಡಿಕೊಂಡು ನಿಯಮವನ್ನು ಪಾಲಿಸಬೇಕು. ಪೊಲೀಸರ ಕಾರ್ಯಕ್ಕೆ ಸಹಕಾರ ನೀಡಬೇಕು.
    ಶಿವ ಪ್ರಕಾಶ ದೇವರಾಜು ಎಸ್​ಪಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts