More

    ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ

    ಲಕ್ಷ್ಮೇಶ್ವರ: ಯೂರಿಯಾ ಗೊಬ್ಬರ ದೊರೆಯುತ್ತದೆ ಎಂದು ನೂರಾರು ರೈತರು ಗುರುವಾರ ಎಪಿಎಂಸಿ ಆವರಣದಲ್ಲಿ ಜಮಾಯಿಸಿದ್ದರು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಗೊಬ್ಬರ ಬಾರದಿದ್ದರಿಂದ ಆಕ್ರೋಶಗೊಂಡ ರೈತರು ತಹಸೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಗೊಬ್ಬರಕ್ಕಾಗಿ ರೈತರು ನಿತ್ಯ ಅಲೆದಾಡುವಂತಾಗಿದೆ. ಗೊಬ್ಬರ ಬಂದರೂ ತಾಸುಗಟ್ಟಲೆ ಸರತಿಯಲ್ಲಿ ನಿಂತು 2 ಚೀಲವಷ್ಟೇ ಖರೀದಿಸಬೇಕಾಗಿದೆ. ಅದು ಯಾವುದಕ್ಕೂ ಸಾಲದಾಗಿದೆ. ಸಮರ್ಪಕವಾಗಿ ಗೊಬ್ಬರ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ರೈತರಿಗೆ ಸಮಾಧಾನಪಡಿಸಿ, ರೈತರ ಬೇಡಿಕೆಗೆ ತಕ್ಕಂತೆ ಎರಡು ದಿನಗಳಲ್ಲಿ ಮತ್ತಷ್ಟು ಯೂರಿಯಾ ಬರಲಿದೆ. ಅಂಗಡಿಯವರು ಯೂರಿಯಾ ಗೊಬ್ಬರ ದಾಸ್ತಾನು ಮಾಡಿಕೊಂಡಿದ್ದಾರೆ ಎಂಬ ಆರೋಪ ಸುಳ್ಳು. ಇನ್ನು ಮುಂದೆ ಆಯಾ ಗೊಬ್ಬರ ಅಂಗಡಿಗಳಲ್ಲಿಯೇ ರೈತರಿಂದ ದಾಖಲೆ ಪಡೆದು ವಿತರಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಅಲ್ಲಿಂದ ತೆರಳಿದರು.

    ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ ರೈತರ ಅಹವಾಲು ಆಲಿಸಿದರು. ಶೇಖಣ್ಣ ಕಾಳೆ, ಯಲ್ಲಪ್ಪ ಬೇವಿನಮರದ, ನಂದೀಶ ಕಗ್ಗಲಗೌಡ್ರ, ಬಸವರಾಜ ಗೋಂಧಿ, ಬಸವರಾಜ ಯಂಗಾಡಿ, ಶಿವಪ್ಪ ನಾಗಣ್ಣವರ, ಗಂಗಣ್ಣ ಗುಂಜಳ, ಪರಮೇಶಪ್ಪ ಡಂಬಳ, ಮೈಲಾರಪ್ಪ ಪಶುಪತಿಹಾಳ, ಮಾಂತೇಶ ಲಮಾಣಿ, ಉಮೇಶ ಮಾಗಡಿ, ನಿಂಗಪ್ಪ ಹೊಳೆಣ್ಣವರ, ಪರಸಪ್ಪ ಗುಡಗೇರಿ, ಮಂಜುನಾಥ ಹೆಬಸೂರು ಇತರರಿದ್ದರು.

    ಪರವಾನಗಿ ಅಮಾನತು

    ಗದಗ: ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಯೂರಿಯಾ ರಸಗೊಬ್ಬರ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಅಂತೂರ ಬೆಂತೂರ ಗ್ರಾಮದ ಶ್ರೀ ಆಗ್ರೋ ಕೇಂದ್ರ ಮಾರಾಟ ಮಳಿಗೆಗೆ ಗುರುವಾರ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರಸಗೊಬ್ಬರಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದಾಗ ಹೆಚ್ಚಿನ ದರಕ್ಕೆ ಯೂರಿಯಾ ಮಾರಾಟ ಮಾಡಿರುವುದು ದೃಢಪಟ್ಟಿದೆ. ಅಂಗಡಿಯವರು ರಸ ಗೊಬ್ಬರ ನಿಯಂತ್ರಣ ಆಜ್ಞೆ 1985 ರ ನಿಯಮ 3 (3) ಉಲ್ಲಂಘನೆ ಮಾಡಿ ರುವುದು ಕಂಡು ಬಂದಿದ್ದು, ಮಾರಾಟ ಪರವಾನಗಿಯನ್ನು ಮುಂದಿನ ಆದೇಶ ದವರೆಗೆ ಅಮಾನತಿನಲ್ಲಿರಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ( ಜಾರಿದಳ) ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts