More

    ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ವಹಿವಾಟು ಆರಂಭ


    ಲಕ್ಷ್ಮೇಶ್ವರ: ಲಾಕ್​ಡೌನ್​ನಿಂದ ಸ್ಥಳೀಯ ಎಪಿಎಂಸಿಯಲ್ಲಿ ಸ್ಥಗಿತಗೊಳಿಸಿದ್ದ ವ್ಯಾಪಾರ-ವಹಿವಾಟನ್ನು ಬುಧವಾರ ತಾಲೂಕಾಡಳಿತ ಪರವಾನಗಿಯೊಂದಿಗೆ ಆರಂಭಿಸಿರುವ ವರ್ತಕರು ವ್ಯವಸ್ಥಿತವಾಗಿ ನಿರ್ವಹಿಸಿದರು. ಅಲ್ಲದೆ, ಕೃಷಿ ಉತ್ಪನ್ನ ಮಾರಾಟಕ್ಕೆ ಬಂದ ಎಲ್ಲ ರೈತರಿಗೆ ಉಪಾಹಾರ ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರರಾದರು.

    ಎಪಿಎಂಸಿ ಸೂಚನೆಯಂತೆ ರೈತರು ಬುಧವಾರ ಬೆಳಗ್ಗೆ 6ರಿಂದ 8.30ರೊಳಗೆ ತಮ್ಮ ಉತ್ಪನ್ನಗಳನ್ನು ವರ್ತಕರ ಅಂಗಡಿಗಳಲ್ಲಿ ಟೆಂಡರ್​ಗೆ ಇಟ್ಟಿದ್ದರು. 8.30ರಿಂದ 11.30ವರೆಗೆ ಟೆಂಡರ್ ಪ್ರಕ್ರಿಯೆ ನಡೆಯಿತು. ವರ್ತಕರ ಸಂಘದಿಂದ ರೈತರು, ಹಮಾಲರು, ಅಂಗಡಿಯವರು, ಎಪಿಎಂಸಿ ಸಿಬ್ಬಂದಿಗೆ ಪಲಾವ್ ಮಾಡಿಸಿ ಪೊಟ್ಟಣಗಳಲ್ಲಿ ಸಿದ್ಧಪಡಿಸಿ ಆಯಾ ದಲಾಲಿ ಅಂಗಡಿಗಳಿಗೆ ಪೂರೈಸಲಾಯಿತು. ಮಧ್ಯಾಹ್ನ 3ರೊಳಗೆ ಎಲ್ಲ ದಲಾಲಿ ಅಂಗಡಿಗಳಿಂದ ಎಲ್ಲ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದ ಹಣ ಪಡೆದು ಪಲಾವ್ ತಿಂದು ಖುಷಿಯಿಂದ ತಮ್ಮೂರಿಗೆ ತೆರಳಿದರು.

    ಎಪಿಎಂಸಿಯಲ್ಲಿನ ವ್ಯಾಪಾರ-ವಹಿವಾಟು ಪರಿಶೀಲಿಸಿದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ರೈತರು ವಾರದಲ್ಲಿ 6 ದಿನ ಉತ್ಪನ್ನಗಳನ್ನು ಮಾರಬಹುದು. ವರ್ತಕರು, ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

    ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ ಮಾತನಾಡಿ, ಸೋಮವಾರ, ಬುಧವಾರ, ಶುಕ್ರವಾರ ಶೇಂಗಾ, ಮಂಗಳವಾರ, ಗುರುವಾರ, ಶನಿವಾರ ಕಾಳುಕಡಿ ಮತ್ತಿತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಇಂದು 300 ರೈತರು ಆಗಮಿಸಿದ್ದು, 700 ಕ್ವಿಂಟಾಲ್ ಶೇಂಗಾ ಆವಕವಾಗಿತ್ತು. ಶೇಂಗಾ ದರ ಪ್ರತಿ ಕ್ವಿಂಟಾಲ್​ಗೆ 3229-6056 ರೂ. ಆಗಿದೆ ಎಂದು ತಿಳಿಸಿದರು.

    ಎಪಿಎಂಸಿ ಅಧ್ಯಕ್ಷ ಜಿ.ಆರ್. ಕೊಪ್ಪದ, ಕಾರ್ಯದರ್ಶಿ ಶಿವಲಿಂಗಪ್ಪ ಕಾಳಪ್ಪನವರ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪಿಎಸ್​ಐ ಶಿವಯೋಗಿ ಲೋಹಾರ, ವರ್ತಕರಾದ ಸಂಗಣ್ಣ ಹನುಮಸಾಗರ, ಮಹಾದೇವಪ್ಪ ರಗಟಿ, ಚಂಬಣ್ಣ ಬಾಳಿಕಾಯಿ, ಎಸ್.ವಿ. ಅಂಗಡಿ, ಎಸ್.ಕೆ. ಕಾಳಪ್ಪನವರ, ಗುರುಪಾದಯ್ಯ ಗಡ್ಡದೇವರಮಠ, ತೋಂಟೇಶ ಮಾನ್ವಿ, ವಿಜಯ ಬೂದಿಹಾಳ, ಬಸವರಾಜ ಮಹಾಂತಶೆಟ್ಟರ, ಈರಣ್ಣ ಅಕ್ಕೂರ, ಜಯಣ್ಣ ಕೊಂಚಿಗೇರಿ, ಇದ್ದರು.

    ಜನನಿಬಿಡ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ

    ಲಕ್ಷ್ಮೇಶ್ವರ: ಕರೊನಾ ಲಾಕ್​ಡೌನ್ 2.0 ಮೇ 3ರವರೆಗೆ ವಿಸ್ತರಣೆಯಾಗಿದೆ. ಅಲ್ಲಿವರೆಗೆ ಮಾರ್ಕೆಟ್, ಎಪಿಎಂಸಿ ಸೇರಿ ಜನರು ಸೇರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಾಲೂಕಾಡಳಿತ, ಪೊಲೀಸ್ ಇಲಾಖೆ, ಪುರಸಭೆಯವರು ಇನ್ನಷ್ಟು ಶ್ರಮ ವಹಿಸಬೇಕು. ಚೆಕ್​ಪೋಸ್ಟ್​ಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

    ಪಟ್ಟಣಕ್ಕೆ ಬುಧವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ಏ. 20ರ ನಂತರ ಸರ್ಕಾರದ ಹೊಸ ಮಾರ್ಗಸೂಚಿಗಳು ಅನ್ವಯವಾಗಲಿದ್ದು, ಜಿಲ್ಲೆಯಲ್ಲಿ ಒಂದಿಷ್ಟು ವಿನಾಯಿತಿ ಲಭಿಸಲಿದೆ. ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳು ಕರೊನಾ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿರುವ ಗೋನಾಳ ಹತ್ತಿರದ ಚೆಕ್​ಪೋಸ್ಟ್​ಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಜ ಅವರು ನಂತರ ಪುರಸಭೆ ಮುಂದೆ ಸಾಮಾಜಿಕ ಅಂತರದಲ್ಲಿ ತರಕಾರಿ ಹರಾಜು ಪ್ರಕ್ರಿಯೆ ನಡೆದಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

    ಮೊದಲು ತರಕಾರಿ, ದಿನಸಿ ಮಾರ್ಕೆಟ್ ಒಂದೇ ಸ್ಥಳದಲ್ಲಿ ನಡೆಯುತ್ತಿತ್ತು. ಅದರಿಂದ ಜನಜಂಗುಳಿ ಸೇರುವುದನ್ನು ತಪ್ಪಿಸಲು ರೈತರ ತರಕಾರಿಯನ್ನು ನೇರವಾಗಿ ವ್ಯಾಪಾರಸ್ಥರಿಗೆ ಹರಾಜು ಮಾಡಿ ತರಕಾರಿಯನ್ನು ಮನೆ -ಮನೆಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಳ್ಳಿಗಳಲ್ಲಿ ಇದೇ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ವಿವರಿಸಿದರು.

    ಗೋವಿನಜೋಳ ಕೇಳುವವರಿಲ್ಲದೇ ಹಾಳಾಗುತ್ತಿದೆ. ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದು ಶಿಗ್ಲಿ ಗ್ರಾಮದ ರೈತ ಮೋಹನ ಜನಿವಾರದ ಅವರು ಜಿಲ್ಲಾಧಿಕಾರಿಯಲ್ಲಿ ವಿನಂತಿಸಿದರು. ಅದಕ್ಕವರು ಸ್ಪಂದಿಸುವುದಾಗಿ ತಿಳಿಸಿದರು.

    ಉಪ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪಿಎಸ್​ಐ ಶಿವಯೋಗಿ ಲೋಹಾರ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಎಸ್.ಬಿ. ಪಾಟೀಲ, ಆನಂದ ಬದಿ, ಮಂಜುನಾಥ ಮುದಗಲ್, ಬಿ.ಎಸ್. ಬಳಗಾನೂರ, ಬಸವಣ್ಣೆಪ್ಪ ನಂದೆಣ್ಣವರ ಇದ್ದರು.

    ಗೊಬ್ಬರ, ಬೀಜ ಸಾಗಣೆಗೆ ಅನುಕೂಲ ಕಲ್ಪಿಸಿ

    ಲಕ್ಷ್ಮೇಶ್ವರ: ರಾಸಾಯನಿಕ ಗೊಬ್ಬರ, ಬೀಜ ಇತ್ಯಾದಿ ಸಾಗಣೆಗೆ ಇರುವ ತೊಂದರೆ ನಿವಾರಿಸುವಂತೆ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ಕೃಷಿ ಪರಿಕರ ಮಾರಾಟಗಾರರು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಬುಧವಾರ ಮನವಿ ನೀಡಿದರು.

    ರೈತರು ಈಗ ಹೊಲದಲ್ಲಿ ಬಿತ್ತನೆಗೆ ತೊಡಗುವುದರಿಂದ ಬೀಜ, ಗೊಬ್ಬರ ಪೂರೈಸುವುದು ಅವಶ್ಯವಾಗಿದೆ. ಆದರೆ, ರಾಜ್ಯದಲ್ಲಿ ಕರೊನಾ ಲಾಕಡೌನ್​ನಿಂದ ರಾಸಾಯನಿಕ ಗೊಬ್ಬರ, ಬೀಜ, ಕ್ರಿಮಿನಾಶಕಗಳನ್ನು ವಾಹನಗಳ ಮೂಲಕ ಜಿಲ್ಲೆ ಮತ್ತು ಅಂತರ ಜಿಲ್ಲೆಗಳಿಂದ ತರಿಸುವುದು, ಕಳುಹಿಸುವುದನ್ನು ಮಾಡಬೇಕು. ಆದರೆ, ಇವುಗಳ ಸಾಗಾಣಿಕೆಗೆ ಇರುವ ತೊಂದರೆ ನಿವಾರಿಸಿ ರೈತರ ಅವಶ್ಯಕತೆಗಳನ್ನು ಪೂರೈಸಲು ಅನುಕೂಲ ಮಾಡಿಕೊಡಬೇಕು. ಕೂಲಿ ಕಾರ್ವಿುಕರ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

    ಮನವಿ ಸ್ವೀಕರಿಸಿದ ತಹಸೀಲ್ದಾರ್, ಈ ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿ ಸಮಸ್ಯೆಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts