More

  ಚಾರ್ಮಾಡಿ ಘಾ ಹೆದ್ದಾರಿಯಲ್ಲಿ ಅರಣ, ಪೊಲೀಸ್ ಗಸ್ತು

  ಮೂಡಿಗೆರೆ: ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕಾಡಾನೆ ಬೀಡುಬಿಟ್ಟಿರುವುದರಿಂದ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಗಸ್ತು ಆರಂಭಿಸಿದ್ದಾರೆ.

  ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಕಾಡಾನೆ ಬೀಡುಬಿಟ್ಟಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದರಿಂದ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಾರ್ಮಾಡಿ ಘಾಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
  ಕೆಲ ದಿನದಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಬೀಡುಬಿಟ್ಟಿದೆ. 1ನೇ ತಿರುವಿನಿಂದ 9ನೇ ತಿರುವಿನವರೆಗೆ ರಸ್ತೆಯಲ್ಲಿ ಅತ್ತಿತ್ತ ತಿರುಗಾಡುತ್ತಿದ್ದರಿಂದ ವಾಹನ ಸವಾರರು ಭಯಗೊಂಡಿದ್ದರು. ಕಾಡಾನೆ ಕಾಣಿಸಿಕೊಂಡಾಗ ಭಯದಲ್ಲಿ ಚಾಲಕರು ವಾಹನಗಳನ್ನು ತರಾತುರಿಯಲ್ಲಿ ಹಿಂದಿರುಗಿಸಿ ಬಂದ ದಾರಿಯಲ್ಲೇ ವಾಪಸಾಗುತ್ತಿದ್ದರು. ಕೆಲ ವಾಹನಗಳ ಚಾಲಕರು ಗಾಬರಿಯಿಂದ ತಿರುಗಿಸಿದಾಗ ವಾಹನ ಚರಂಡಿಗೆ ಉರುಳಿದ್ದವು. ಹೀಗಾಗಿ 15 ದಿನದಿಂದ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದೆ. ಬಹುತೇಕ ವಾಹನಗಳು ಸಕಲೇಶಪುರ ಮಾರ್ಗವಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಸಾಗುತ್ತಿವೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಇರುವ ಕುರಿತು ಇತರ ವಾಹನ ಚಾಲಕರಿಂದ ಮಾಹಿತಿ ಸಿಕ್ಕೊಡನೆ ರಸ್ತೆಯುದ್ದಕ್ಕೂ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದ ಘಾಟ್ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಕಾಡಾನೆ ಇರುವಲ್ಲಿಗೆ ಅರಣ್ಯಾಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಹೋಗಿರಲಿಲ್ಲ. ಈ ಕುರಿತು ಮಾಹಿತಿ ಪಡೆದ ತಕ್ಷಣ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಭೇಟಿ ನೀಡಿದ ವಿಜಯವಾಣಿ ವರದಿಗಾರ ಕಾಡಾನೆ ರಸ್ತೆಯಲ್ಲಿರುವುದನ್ನು ಖುದ್ದು ನೋಡಿ ಚಿಕ್ಕಮಗಳೂರು ಡಿಸಿಎಫ್ ರಮೇಶ್ ಬಾಬು, ಬೆಳ್ತಂಗಡಿ ಸಿಪಿಐ ವಸಂತ ಆಚಾರಿ, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್‌ಕುಮಾರ್ ಅವರಿಗೆ ಮಾಹಿತಿ ನೀಡಿ ಸುದ್ದಿ ಪ್ರಕಟಿಸಲಾಗಿತ್ತು.
  ಚಿಕ್ಕಮಗಳೂರು ಡಿಸಿಎಫ್ ರಮೇಶ್ ಬಾಬು ಅವರು ಮಂಗಳೂರಿನ ಡಿಸಿಎಫ್ ಆಂಟನಿ ಮರಿಯಪ್ಪ ಅವರೊಂದಿಗೆ ಚರ್ಚಿಸಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜತೆ ಚರ್ಚೆ ನಡೆಸಿದ್ದರು. ಇಬ್ಬರೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಘಾಟ್ ಪ್ರದೇಶಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ತಂಡ ಗಸ್ತು ತಿರುಗಿ ಸಲಗವನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಂಡಿದ್ದರು. ಮೇ 15ರಂದು ಗಸ್ತು ತಂಡ ಬಾಂಜಾರುಮಲೆ ಅರಣ್ಯಕ್ಕೆ ಓಡಿಸಿದ್ದಾರೆ. ಇದರಿಂದ ಘಾಟ್ ರಸ್ತೆಯಲ್ಲಿ ಸಾಗುವ ವಾಹನ ಸವಾರರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
  ಮೂಡಿಗೆರೆಯಲ್ಲಿರುವ ಅರಣ್ಯ ಇಲಾಖೆಯ ಕಾಡಾನೆ ಟಾಸ್ಕ್ ಫೋರ್ಸ್ ಸಹ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಗಸ್ತು ತಿರುಗಲಿದೆ.
  ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಮತ್ತು ಘಾಟ್ ತಿರುವು ಆರಂಭವಾಗುವ ರಸ್ತೆ ಬದಿ ಕಾಡಾನೆಯಿರುವ ಎಚ್ಚರಿಕೆ ಫಲಕ ಘಾಟಿಯ 9ನೇ ತಿರುವಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದೆ. ರಾತ್ರಿ ಗಸ್ತಿನಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ವಾಹನ, ಸ್ವರಕ್ಷಣೆಗೆ ಬಂದೂಕು, ಪಟಾಕಿ ಸಹಿತ ಎಲ್ಲ ಸೌಕರ್ಯಗಳನ್ನು ಇಲಾಖೆಯಿಂದ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts