More

    ರೈತರ ಮಕ್ಕಳಿಗಾಗಿಯೇ ವಸತಿ ನಿಲಯ-ಶಾಸಕ ಬಾಲಚಂದ್ರ ಜಾರಕಿಹೊಳಿ

    ಗೋಕಾಕ : ಕಹಾಮ ಹಾಗೂ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ಬೆಳಗಾವಿಯಲ್ಲಿ ರೈತರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯವನ್ನು ನಿರ್ಮಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕಹಾಮ ನಿರ್ದೇಶಕ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
    ಪಟ್ಟಣದ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ಜರುಗಿದ ವಿವಿಧ ಫಲಾನುಭವಿಗಳಿಗೆ 6.40 ಲಕ್ಷ ರೂ.ಗಳ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕೇವಲ ರೈತರ ಮಕ್ಕಳಿಗಾಗಿಯೇ ವಸತಿ ನಿಲಯವನ್ನು ಸ್ಥಾಪಿಸಲಾಗಿದೆ ಎಂದರು.
    ಇತ್ತೀಚೆಗೆ ಜಿಲ್ಲಾ ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಅವರನ್ನು ಭೇಟಿ ಮಾಡಿ ಪ್ರಸ್ತುತ ಒಕ್ಕೂಟದ ಬಗ್ಗೆ ಚರ್ಚೆ ನಡೆಸಿದೆವು. ಈಗಾಗಲೇ ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರತಿನಿತ್ಯ ಸುಮಾರು 1.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.
    ಇದರಿಂದ ನಮ್ಮ ಒಕ್ಕೂಟಕ್ಕೆ ಲಾಭಾಂಶ ಕಡಿಮೆಯಾಗುತ್ತಿದೆ. ಕನಿಷ್ಠ ಪಕ್ಷ ಪ್ರತಿನಿತ್ಯ 3 ಲಕ್ಷ ಲೀಟರ್‌ವರೆಗೆ ಒಕ್ಕೂಟಕ್ಕೆ ಹಾಲು ಸಂಗ್ರಹವಾದರೆ ಹೆಚ್ಚಿನ ಲಾಭಾಂಶದ ಜೊತೆಗೆ ಹೈನುಗಾರರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
    ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ ಈಗಾಗಲೇ 46 ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳು ಸಿಗಲಿವೆ. ಮುಂದಿನ ದಿನಗಳಲ್ಲಿ ಇನ್ನೂ 46 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದ ಅವರು, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಶ್ರೇಯೋಭಿವೃದ್ಧಿಗೆ ಅಧ್ಯಕ್ಷ ವಿವೇಕರಾವ್ ಪಾಟೀಲ ಅವರೊಂದಿಗೆ ಕೈ ಜೋಡಿಸಿ ಬಲವರ್ಧನೆ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
    ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ವೆಂಕಟಾಪೂರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ರೂ, ಕಲ್ಯಾಣ ಸಂಘದಿಂದ ಮುನ್ಯಾಳ ಸ್ವಾಮಿ ತೋಟ, ಬಗರನಾಳ, ಶಿಂಧಿಕುರಬೇಟ, ಖಾನಾಪೂರ, ವೆಂಕಟಾಪುರ, ಮನ್ನಿಕೇರಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಒಟ್ಟು 1.40 ಲಕ್ಷ ರೂ.ಗಳ ಚೆಕ್‌ಗಳನ್ನು ವಿತರಿಸಿದರು.
    ರಾಸು ವಿಮೆ ಯೋಜನೆಯಲ್ಲಿ ಚಿಗಡೊಳ್ಳಿ ಲಕ್ಷ್ಮೀ ಬಾಳಪ್ಪ ಮರೆಪ್ಪಗೋಳ, ರಾಜಾಪೂರದ ಮಂಜುನಾಥ ಸದಾಶಿವ ಕಳ್ಳಿಮನಿ, ಮರಡಿಶಿವಾಪುರದ ದುಂಡಪ್ಪ ಮಲ್ಲಿಕಾರ್ಜುನ ಕೊಳವಿ, ಬೆಟಗೇರಿಯ ಸುನಂದಾ ಮಹಾದೇವ ಹೊರಟ್ಟಿ, ಈರಪ್ಪ ಸತ್ತೆಪ್ಪ ದೇಯನ್ನವರ ಹಾಗೂ ತಂಗೆವ್ವ ಬಸಪ್ಪ ಮಾಳೇದ ಅವರಿಗೆ ತಲಾ 50 ಸಾವಿರ ರೂ.ಗಳ ಚೆಕ್‌ಗಳನ್ನು ಶಾಸಕರು ವಿತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ, ಮುತ್ತೆಪ್ಪ ಖಾನಪ್ಪಗೋಳ, ವಿಸ್ತರಣಾಧಿಕಾರಿಗಳಾದ ರವಿ ತಳವಾರ, ಬಿ.ಕೆ. ಜಾಧವ, ಬೀರೇಶ ಖಿಲಾರಿ, ವಿಠ್ಠಲ ಲೋಕುರಿ, ಸಚೀನ ಪಡದಲ್ಲಿ, ಡಾ. ವೀರಣ್ಣಾ ಕೌಜಲಗಿ, ಡಾ. ಸಚೀನ ಬಿರಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    Related articles

    Share article

    Latest articles