More

    ಗಾಯದ ಮೇಲೆ ಬರೆ ಎಳೆದ ನೆರೆ!

    ರಾಜು ಹೊಸಮನಿ ನರಗುಂದ
    ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆನಾಶವಾಗಿದೆ. ಕರೊನಾ ಲಾಕ್​ಡೌನ್​ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ರೈತ ಸಮೂಹಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
    ತಾಲೂಕಿನಲ್ಲಿ ಒಟ್ಟು 50,400 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದೆ. 2500 ಹೆಕ್ಟೇರ್​ನಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳ ಪೈಕಿ 280 ಹೆಕ್ಟೇರ್ ಉಳ್ಳಾಗಡ್ಡಿ, 20 ಹೆಕ್ಟೇರ್ ಮೆಣಸಿಣಕಾಯಿ, 20 ಹೆಕ್ಟೇರ್ ಟೊಮ್ಯಾಟೊ ಸೇರಿದಂತೆ ಒಟ್ಟು 425 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತರಕಾರಿ ಬೆಳೆಗಳು ಜಲಾವೃತಗೊಂಡು ಅಂದಾಜು 4 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸಂಜೀವ ಚವ್ಹಾಣ ತಿಳಿಸಿದ್ದಾರೆ.
    15,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹೆಸರು ಬೆಳೆಯಲ್ಲಿ 7755 ಹೆಕ್ಟೇರ್ ಹೆಸರು ಸಂಪೂರ್ಣ ಹಾನಿಯಾಗಿದೆ. ಗೋವಿನಜೋಳ, ಹತ್ತಿ, ಕಬ್ಬು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳಿಗೆ ಪ್ರವಾಹದಿಂದ ಹಾನಿಯಾಗಿದ್ದು, ಅಂದಾಜು 8 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಮೈತ್ರಿ ವಿನೋದ ತಿಳಿಸಿದ್ದಾರೆ.
    ಯಾವುದಕ್ಕೆ ಎಷ್ಟು ಪರಿಹಾರ?: ಮಳೆಯಾಶ್ರಿತ ಬೆಳೆಗಳಿಗೆ 6,800 ರೂಪಾಯಿ, ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್​ಗೆ 13,500 ರೂ. ಪರಿಹಾರವನ್ನು ಪ್ರಕೃತಿ ವಿಕೋಪ ನಿಧಿಯಿಂದ ನೀಡಬೇಕು. ಆದರೆ, ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಅಚ್ಚುಕಟ್ಟು ಪ್ರದೇಶದ ಅನೇಕ ರೈತರ ಜಮೀನುಗಳಲ್ಲಿ ರಾವಿ ಮಣ್ಣು (ಮರಳು ಮಿಶ್ರಿತ ಮಣ್ಣು) ಆವರಿಸಿಕೊಂಡಿದೆ. ಇಂತಹ ರೈತರಿಗೆ ಬೆಳೆಹಾನಿ ಜತೆಗೆ ಹೆಚ್ಚುವರಿಯಾಗಿ ಜಮೀನನ್ನು ಸರಿಪಡಿಸಿಕೊಳ್ಳಲು ಪ್ರತಿ ಹೆಕ್ಟೇರ್​ಗೆ 12,200 ರೂಪಾಯಿ ಪರಿಹಾರ ನೀಡಲಾಗುತ್ತದೆ.
    ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ: ಎನ್​ಡಿಆರ್​ಎಫ್ ನಿಯಮದ ಪ್ರಕಾರ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್​ಗೆ 18,000 ರೂಪಾಯಿ, ತರಕಾರಿ ಬೆಳೆಗಳನ್ನು ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್​ಗೆ 13,500 ರೂ., ಮಳೆಯಾಶ್ರಿತ ಬೆಳೆಗಳಿಗೆ 6,800 ರೂಪಾಯಿ ಪರಿಹಾರ ನೀಡಲು ಅವಕಾಶವಿದೆ. ಆದರೆ, ಕಳೆದ ಬಾರಿ ಪ್ರವಾಹದಿಂದ ಹಾನಿಯಾಗಿದ್ದ ಬಹುತೇಕ ರೈತರಿಗೆ ಸರ್ಕಾರದಿಂದ ಇನ್ನೂ ಪರಿಹಾರ ದೊರೆತಿಲ್ಲ. ಸರ್ಕಾರದ ಮಾರ್ಗಸೂಚಿಯನ್ವಯ ಶೀಘ್ರ ಪರಿಹಾರ ನೀಡಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ.

    ಬೆಣ್ಣೆಹಳ್ಳದ ರೌದ್ರಾವತಾರಕ್ಕೆ ಸುರಕೋಡ, ಹದಲಿ, ಬನಹಟ್ಟಿ, ಮೂಗನೂರ, ಕುರ್ಲಗೇರಿ ಭಾಗದ ಬಹುತೇಕ ರೈತರ ಜಮೀನಿನಲ್ಲಿ ಬೆಳೆದಿದ್ದ ಹೆಸರು, ಹತ್ತಿ, ಗೋವಿನಜೋಳ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ನಮ್ಮ ಬದುಕು ದುಸ್ತರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು.
    | ಶಿವಾನಂದ ಮಾಯಣ್ಣವರ, ಸುರಕೋಡ ಗ್ರಾಮದ ರೈತ

    ನಿರಂತರ ಮಳೆಗೆ ತಾಲೂಕಿನಾದ್ಯಂತ 50ಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದಿವೆ. ಮಲಪ್ರಭೆ, ಬೆಣ್ಣೆ ಹಳ್ಳದ ಪ್ರವಾಹದಿಂದ ಸಾಕಷ್ಟು ಬೆಳೆಗಳು ಜಲಾವೃತಗೊಂಡಿವೆ. ಬೆಳೆಗಳ ಅಂದಾಜು ವರದಿ ಪ್ರಕಾರ ಕೋಟ್ಯಂತರ ರೂಪಾಯಿ ಹಾನಿ ಉಂಟಾಗಿದೆ. ಪ್ರವಾಹದ ಬಳಿಕ ನಿಖರ ಮಾಹಿತಿ ದೊರೆಯಲಿದೆ. ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ.
    | ಎ.ಡಿ. ಅಮರವದಗಿ, ತಹಸೀಲ್ದಾರ್, ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts