More

    ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣ

    ನಾಗಮಂಗಲ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣಿಸುತ್ತಿದ್ದು, ರಾಸುಗಳನ್ನು ಕಳೆದುಕೊಂಡ ರೈತರು ನಿತ್ಯ ಪರಿತಪಿಸುವಂತಾಗಿದೆ.

    ಒಂದೂವರೆ ತಿಂಗಳಿನಿಂದ ತಾಲೂಕಿನಲ್ಲಿ ರಾಸುಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮಾರಣಾಂತಿಕ ರೋಗದಿಂದ ರಾಸುಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಸೊಳ್ಳೆ, ನೊಣ ಹಾಗೂ ಸೋಂಕಿತ ರಾಸುವಿನಿಂದ ಆರೋಗ್ಯವಂತ ರಾಸುವಿಗೂ ಈ ರೋಗ ಹರಡುತ್ತಿದೆ. ಒಂದೂವರೆ ತಿಂಗಳಿನಲ್ಲಿ ಒಂದೆರಡು ರಾಸುಗಳಲ್ಲಿ ಕಂಡುಬಂದ ಈ ರೋಗ ಈಗ ಇಡೀ ತಾಲೂಕನ್ನೇ ಆವರಿಸಿದೆ. ತಾಲೂಕಿನಲ್ಲಿ ಈವರೆಗೆ 9 ಜಾನುವಾರುಗಳು ಮೃತಪಟ್ಟಿವೆ.

    ತಾಲೂಕಿನ 5 ಹೋಬಳಿಗಳ ಪೈಕಿ ದೇವಲಾಪುರ ಹಾಗೂ ಹೊಣಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಚರ್ಮಗಂಟು ರೋಗ ಕಂಡುಬರುತ್ತಿದೆ. ಇದರಲ್ಲಿ ಪ್ರಮುಖವಾಗಿ ಬೋಗಾದಿ ಮತ್ತು ದೇವಲಾಪುರ ವ್ಯಾಪ್ತಿಯಲ್ಲಿ ಹೆಚ್ಚಿನ ರಾಸುಗಳಿಗೆ ಈ ರೋಗ ಕಂಡುಬಂದಿದೆ. ಬೆಳ್ಳೂರು ಮತ್ತು ಕದಬಹಳ್ಳಿ ಭಾಗದಲ್ಲಿ ಈ ರೋಗ ಅಷ್ಟಾಗಿ ಕಂಡು ಬಂದಿಲ್ಲವಾಗಿದ್ದು, ಈ ಎರಡೂ ಭಾಗಗಳನ್ನು ಹೊರತುಪಡಿಸಿ ಉಳಿದೆಡೆ ವ್ಯಾಪಕವಾಗಿ ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿದೆ.

    128 ಗ್ರಾಮಗಳಲ್ಲಿ ರೋಗ: ತಾಲೂಕಿನಲ್ಲಿ ಚರ್ಮಗಂಟು ರೋಗ 128 ಗ್ರಾಮಗಳಲ್ಲಿನ ರಾಸುಗಳಲ್ಲಿ ದೃಢಪಟ್ಟಿದೆ. 128 ಗ್ರಾಮಗಳಲ್ಲಿನ 455 ರಾಸುಗಳು ರೋಗದಿಂದ ಬಳಲುತ್ತಿದ್ದು, 9 ಜಾನುವಾರುಗಳು ಮೃತಪಟ್ಟಿವೆ. ಕೂಡಲೇ ಚಿಕಿತ್ಸೆ ಪಡೆದು ಕೆಲವು ಜಾನುವಾರುಗಳು ಗುಣಮುಖವಾಗಿವೆ.

    ಹೆಚ್ಚು ನಾಟಿ ದನಗಳೇ ಸಾವು: ನಾಟಿದನಗಳೇ ಈ ರೋಗಕ್ಕೆ ತುತ್ತಾಗುತ್ತಿದ್ದು, ಈವರೆಗೆ ತಾಲೂಕಿನಲ್ಲಿ ನಾಟಿ ದನಗಳೇ ಹೆಚ್ಚು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸೀಮೆ ಹಸುಗಳು ಇದರಿಂದ ಚೇತರಿಕೆ ಕಂಡುಕೊಳ್ಳುತ್ತಿದ್ದು ಒಂದು ವಾರ ತಡೆದುಕೊಳ್ಳುವ ಶಕ್ತಿ ಹೊಂದಿವೆ. ಆದರೆ ನಾಟಿ ದನಗಳು ಒಂದೆರಡು ದಿನಗಳಲ್ಲಿಯೇ ಮೃತಪಡುತ್ತಿವೆ.

    ಮೃತಪಟ್ಟರೆ ಪರಿಹಾರ: ರೋಗ ಕಂಡು ಬಂದು ಸರ್ಕಾರಿ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿಯೂ ರಾಸುಗಳು ಮೃತಪಟ್ಟರೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಕರುಗಳಿಗೆ 10 ಸಾವಿರ ರೂ., ಹಸುಗಳಿಗೆ 20 ಸಾವಿರ ರೂ. ಹಾಗೂ ಹೋರಿ(ಎತ್ತು)ಗಳಿಗೆ 30 ಸಾವಿರ ರೂ.ಗಳನ್ನು ಸರ್ಕಾರದಿಂದ ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ.

    25 ಸಾವಿರ ವ್ಯಾಕ್ಸಿನ್ ಪೂರೈಕೆ: ರೋಗವನ್ನು ತಡೆಗಟ್ಟಲು 25 ಸಾವಿರ ವ್ಯಾಕ್ಸಿನ್ ಪೂರೈಕೆ ಮಾಡಲಾಗಿದ್ದು, ಈ ಪೈಕಿ 17,750 ವ್ಯಾಕ್ಸಿನ್‌ಗಳನ್ನು ರಾಸುಗಳಿಗೆ ಹಾಕಲಾಗಿದೆ. ರೋಗ ಹೆಚ್ಚಾಗಿ ಕಂಡುಬರುತ್ತಿರುವ ಭಾಗಗಳಿಗೆ ಆದ್ಯತೆ ನೀಡಲಾಗುತ್ತಿದೆ.

    ವೈದ್ಯರು ಮತ್ತು ಸಿಬ್ಬಂದಿ ಕೊರತೆ: ಪಶು ಇಲಾಖೆಯಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಒಟ್ಟು 101 ಸಿಬ್ಬಂದಿ ಪೈಕಿ 26 ಜನ ಮಾತ್ರ ಕರ್ತವ್ಯ ನಿರ್ವಹಿಸಿದರೆ, 15 ಜನ ಪಶು ವೈದ್ಯರ ಪೈಕಿ 4 ಜನ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆಗಳು ಖಾಲಿಯಿದ್ದು, ತಾಲೂಕಿನಾದ್ಯಂತ 4 ಜನ ವೈದ್ಯರು ಸೇವೆ ಸಲ್ಲಿಸಲು ಹರಸಾಹಸಪಡುವಂತಾಗಿದೆ.

    ತಾಲೂಕಿನಾದ್ಯಂತ ಚರ್ಮಗಂಟು ರೋಗ ಒಂದು ತಿಂಗಳಿನಿಂದ ಕಂಡು ಬಂದಿದೆ. ಈಗ ಕಡೇಹಂತ ತಲುಪಿದ್ದು ಮುಂದಿನ 15 ದಿನಗಳಲ್ಲಿ ವೈರಸ್ ಕಡಿಮೆಯಾಗುವ ನಿರೀಕ್ಷೆಯಿದೆ. ಸಿಬ್ಬಂದಿ ಕೊರತೆ ನಡುವೆಯೂ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಹಗಲಿರುಳು ಎನ್ನದೆ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಈವರೆಗೂ 9 ಜಾನುವಾರುಗಳು ಮೃತಪಟ್ಟಿದ್ದು, ಪರಿಹಾರ ನೀಡಲು ಕ್ರಮವಹಿಸಲಾಗಿದೆ.
    > ಡಾ.ಕೆ.ಕುಮಾರ್ ಸಹಾಯಕ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ನಾಗಮಂಗಲ

    ಚರ್ಮಗಂಟು ರೋಗ ನಿಯಂತ್ರಿಸುವಂತೆ ಪಶುವೈದ್ಯರಿಗೆ ಸೂಚನೆ ನೀಡಲಾಗಿದೆ. ತಾಲೂಕಿಗೆ ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗುವುದು. ಸಿಬ್ಬಂದಿ ಹಾಗೂ ವೈದ್ಯರ ಕೊರತೆ ನೀಗಿಸುವಂತೆ ಸಚಿವರಿಗೆ ಪತ್ರ ಬರೆಯಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಪ್ರತಿ ಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ಹಾಗೂ ನೊಣಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ.
    > ಸುರೇಶ್‌ಗೌಡ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts