More

    ರಾಜ್ಯಾದ್ಯಂತ ವಿಜಯೋತ್ಸವ ಆಚರಿಸುವಂತಾಗಲಿ

    ಕಾರವಾರ: ಪ್ರಭಾವಿ ಬ್ರಿಟಿಷ್ ಧ್ವಜವನ್ನು ಸೋದೆ ಸದಾಶಿವರಾಯರು ವಿಶ್ವದಲ್ಲೇ ಮೊದಲ ಬಾರಿಗೆ ಇದೇ ದಿನದಂದು ಇಳಿಸಿ, ಅವರನ್ನು ಓಡಿಸಿ ಸಾಹಸ ಮೆರೆದಿದ್ದರು. ಇಂದು ಇಡೀ ಜಿಲ್ಲೆ, ರಾಜ್ಯದಲ್ಲೇ ವಿಜಯೋತ್ಸವ ಆಚರಣೆಯಾಗುವಂತಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಆಶಿಸಿದರು.

    ಬಿಜೆಪಿಯಿಂದ ಕಡವಾಡ ನಂದವಾಳದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 1957ರಲ್ಲಿ ನಡೆದ ಸಿಪಾಯಿ ದಂಗೆಯೇ ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ನಂಬಲಾಗಿದೆ. ಆದರೆ, ಅದಕ್ಕೂ ಪೂರ್ವದಲ್ಲಿಯೇ 1725ರಲ್ಲಿ ಆಗಿನ ಈ ಭಾಗದ ಪಾಳೆಗಾರ ಸೋದೆ ಸದಾಶಿವರಾಯರು ನಂದವಾಳದಲ್ಲಿ ಬ್ರಿಟಿಷರು ಕಟ್ಟಿದ್ದ ಕಾರ್ಖಾನೆಯನ್ನು ಮುಚ್ಚಿಸಿದರು. ಅವರ ಧ್ವಜವನ್ನು ಇಳಿಸಿದ್ದರು. ಆ ಘಟನೆಗೆ ಸಾಕ್ಷಿ ಎಂಬಂತೆ ಸಾಕಷ್ಟು ಪುರಾವೆಗಳಿವೆ. ಬ್ರಿಟಿಷ್ ಧ್ವಜ ಇಳಿಸಿದ ಫೆ. 26 ದಿನವನ್ನು ಬಿಜೆಪಿ ಕಳೆದ ಐದು ವರ್ಷಗಳಿಂದ ನಂದವಾಳದಲ್ಲಿ ಭಗವಾ ಧ್ವಜ ಹಾರಿಸಿ ವಿಜಯ ದಿವಸವಾಗಿ ಆಚರಿಸುತ್ತಿದೆ. ಆದರೆ, ಇದು ಬಿಜೆಪಿಗೆ ಮಾತ್ರ ಸೀಮಿತ ಸಂಭ್ರಮವಲ್ಲ. ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಪಕ್ಷೇತರವಾದ ಸಮಿತಿ ರಚಿಸಿ ಪ್ರತಿ ವರ್ಷ ಕಾರ್ಯಕ್ರಮ ನಡೆಯುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ನಾಯಕ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್. ಹೆಗಡೆ, ಗೋವಿಂದ ನಾಯ್ಕ, ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಅಂಕೋಲಾ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಕಡವಾಡ ಗ್ರಾಪಂ ಅಧ್ಯಕ್ಷೆ ಪ್ರಿಯಾ ಗೌಡ, ಉಪಾಧ್ಯಕ್ಷ ಆನಂದು ನಾಯ್ಕ, ಕಾರವಾರ ಎಪಿಎಂಸಿ ಅಧ್ಯಕ್ಷ ಸಾಯಿನಾಥ ನಾಯ್ಕ, ಪಕ್ಷದ ಪದಾಧಿಕಾರಿಗಳಾದ ಸುಧಾಕರ ನಾಯ್ಕ, ರವೀಂದ್ರ ಪವಾರ್, ನಾಗೇಶ ಕುರ್ಡೆಕರ್, ರಾಜೇಂದ್ರ ನಾಯ್ಕ, ಸುನೀಲ ನಾಯ್ಕ, ಪ್ರಶಾಂತ ನಾಯಕ, ಬಿ.ಎನ್. ಸೂರ್ಯಪ್ರಕಾಶ, ಉದಯ ಬಶೆಟ್ಟಿ ವೇದಿಕೆಯಲ್ಲಿದ್ದರು.

    ಸಂಗೀತ ಕಲಾವಿದ ಕೃಷ್ಣಾನಂದ ಜಿ., ಶಿಲ್ಪಿ ನಂದಾ ಆಚಾರಿ, ರಕ್ತದಾನಿ ಶಿವಾನಂದ ಶಾನಬಾಗ, ವಿಠೋಬ ವಿಶ್ವನಾಥ ನಾಯ್ಕ, ಮಾಧವ ನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದೀಪ್ತಿ ಅರ್ಗೆಕರ್ ಪ್ರಾರ್ಥಿಸಿದರು. ಸುಭಾಷ ಗುನಗಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ ನಡೆಯಿತು.

    ಪಠ್ಯದಲ್ಲಿ ಸೇರ್ಪಡೆಯಾಗಲಿ: ಸೋದೆ ಸದಾಶಿವ ನಾಯಕ ಅವರ ಇತಿಹಾಸ ರಾಜ್ಯದ ಪಠ್ಯದಲ್ಲಿ ಅಳವಡಿಕೆಯಾಗಬೇಕು. ನಂದವಾಳದಲ್ಲಿ ಅವರ ಪುತ್ಥಳಿ ಹಾಗೂ ಮ್ಯೂಸಿಯಂ ನಿರ್ವಣವಾಗಬೇಕು. ಈ ನಿಟ್ಟಿನಲ್ಲಿ ಶಾಸಕಿ ರೂಪಾಲಿ ನಾಯ್ಕ ಕಾರ್ಯನಿರ್ವಹಿಸಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts