More

    ಶ್ರೀ ರಾಮನವಮಿ ಸಂಭ್ರಮಕ್ಕೆ ದೇಗುಲಗಳು ಸಜ್ಜು

    ಬೆಂಗಳೂರು: ನಗರದಾದ್ಯಂತ ಬುಧವಾರ (ಏ. 17) ಶ್ರೀರಾಮನವಮಿಯ ಸಂಭ್ರಮ ಮನೆ ಮಾಡಿದ್ದು, ದೇವಾಲಯಗಳು ತಳಿರುತೋರಣಗಳಿಂದ ಸಿಂಗಾರಗೊಂಡಿವೆ. ವಿಶೇಷವಾಗಿ ದೇವರಿಗೆ ಅಭಿಷೇಕ, ಅಲಂಕಾರ, ಪೂಜೆ ಹಾಗೂ ಹೋಮಗಳು ಜರುಗಲಿವೆ.

    ದೇವಾಲಯಗಳು ಹಾಗೂ ಬಡಾವಣೆಗಳಲ್ಲಿ ರಾಮನವಮಿ ಪ್ರಯುಕ್ತ ಭಜನೆ, ನೃತ್ಯ, ನಾಟಕ ಸಂಗೀತೋತ್ಸವ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಡೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಎಲ್ಲೆಲ್ಲಿ ಸಂಭ್ರಮ? ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಜಯನಗರದ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿ, ಹನುಮಂತನಗರದ ಶ್ರೀ ರಾಮಾಂಜನೇಯ ಗುಡ್ಡ, ರಾಗಿಗುಡ್ಡ ಆಂಜನೇಯ, ಮಹಾಲಕ್ಷ್ಮೀ ಬಡಾವಣೆಯ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ, ರಾಜಾಜಿನಗರದ ಶ್ರೀರಾಮ ಮಂದಿರ, ಮಿಂಟೋ ಆಂಜನೇಯ, ವಿಜಯನಗರದ ಮಾರುತಿ ಮಂದಿರ, ಮಾರುಕಟ್ಟೆ ಬಳಿಯ ಕೋಟೆ ಆಂಜನೇಯ, ಸುಂಕದಕಟ್ಟೆಯ ಬೋಡುಬಂಡೆ ಆಂಜನೇಯ ಸ್ವಾಮಿ ದೇವಾಲಯ ಸೇರಿ ನಗರದ ರಾಮಾಂಜನೇಯ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂಜೆ, ರಾಮತಾರಕ ಹೋಮ ಹಮ್ಮಿಕೊಳ್ಳಲಾಗಿದೆ.

    ರಾಜಾಜಿನಗರದಲ್ಲಿ ಉತ್ಸವ: ಶ್ರೀರಾಮ ಸೇವಾ ಮಂಡಳಿಯಿಂದ ರಾಮನವಮಿ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಿದ್ದು, ಬುಧವಾರ ಅಯೋಧ್ಯೆ ಮಾದರಿಯಲ್ಲಿ 68ನೇ ರಾಮೋತ್ಸವ ಮತ್ತು ಬೃಹತ್ ಬ್ರಹ್ಮರಥೋತ್ಸವ ಜರುಗಲಿದೆ. ಇಂದು ಸುವರ್ಣ ವಜ್ರಾಂಗಿ ಕವಚ ಅಲಂಕಾರ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.
    ಬಿಸಿಲಲ್ಲೂ ಭರ್ಜರಿ ವ್ಯಾಪಾರ: ರಾಮನವಮಿ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಮಾರುಕಟ್ಟೆಗಳಲ್ಲಿ ಒಂದೆಡೆ ಬಿಸಿಲ ಝಳ, ಮತ್ತೊಂದೆಡೆ ದುಬಾರಿ ಬೆಲೆಯ ನಡುವೆಯೂ ಜನರು ಹೂಹಣ್ಣು ಖರೀದಿಯಲ್ಲಿ ತೊಡಗಿದ್ದರು. ಈ ಹಬ್ಬದಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡುವುದರಿಂದ ಕರಬೂಜ, ನಿಂಬೆಹಣ್ಣು, ಕೋಸಂಬರಿ, ಕ್ಯಾರೆಟ್, ಸೌತೆಕಾಯಿ, ಕೊತ್ತಂಬರಿ ಸೊಪ್ಪಿಗೆ ಬೇಡಿಕೆ ಹೆಚ್ಚಿತ್ತು.

    ಕೆ.ಆರ್. ಮಾರುಕಟ್ಟೆಯಲ್ಲಿ ಹೂಹಣ್ಣುಗಳ ದರ (ಕೆ.ಜಿ.ಗಳಲ್ಲಿ)
    ಕನಕಾಂಬರ 600 ರೂ.
    ಮಲ್ಲಿಗೆ 300-400 ರೂ.
    ಸೇವಂತಿಗೆ 250-300 ರೂ.
    ಸುಗಂಧರಾಜ 180 ರೂ.
    ಗುಲಾಬಿ 160 ರೂ.
    ಚೆಂಡುಹೂ 50 ರೂ.
    ಏಲಕ್ಕಿ ಬಾಳೆ 60 ರೂ.
    ಪಚ್ಚಬಾಳೆ 40 ರೂ.
    ಕರಬೂಜ 60-70 ರೂ.
    ನಿಂಬೆಹಣ್ಣು ಗಾತ್ರಕ್ಕೆ ಅನುಗುಣವಾಗಿ ಒಂದಕ್ಕೆ 8-10 ರೂ.
    ಸೌತೆಕಾಯಿ ಒಂದಕ್ಕೆ 15-20 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts