More

    ರಾಜಕೀಯ ಸೃಷ್ಟಿಸಿದ ಹಾಹಾಕಾರ: ಕೊಂಡೇನಹಳ್ಳಿಯಲ್ಲಿ ಪೂರೈಕೆಯಾಗದ ಕುಡಿಯುವ ನೀರು

    ಚಿಕ್ಕಬಳ್ಳಾಪುರ: ತಾಲೂಕಿನ ಕೊಂಡೇನಹಳ್ಳಿಯಲ್ಲಿ ಸಮರ್ಪಕವಾಗಿ ನೀರು ಲಭ್ಯವಿದ್ದರೂ ರಾಜಕೀಯ ದುರುದ್ದೇಶದಲ್ಲಿ ಅಭಾವ ಸೃಷ್ಟಿಸುತ್ತಿರುವುದರಿಂದ ಜನ ಪರದಾಡುವಂತಾಗಿದೆ. ಜಿಲ್ಲಾ ಕೇಂದ್ರದಿಂದ ಗ್ರಾಮವು 12 ಕಿ.ಮೀ ದೂರವಿದ್ದು, 150ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಕೆಲವೆಡೆ ಹಣ ಕೊಟ್ಟವರಿಗೆ ನೀರು ಪೂರೈಸಲು ಆದ್ಯತೆ ನೀಡಿ, ಇತರ ಮನೆಗಳನ್ನು ಕಡೆಗಣಿಸಲಾಗುತ್ತಿದೆ. ಇದರಿಂದಾಗಿ ಎಸ್ಸಿ ಕಾಲನಿಯ 50 ಮನೆಗಳು ನೀರಿಗಾಗಿ ಪರದಾಡುವಂತಾಗಿದೆ.

    ಗ್ರಾಮದಲ್ಲಿ ಎರಡು ಕೊಳವೆ ಬಾವಿ ಕೊರೆಸಲಾಗಿದೆ. ಮತ್ತೊಂದು ಬಾವಿಯಲ್ಲಿ ಅಲ್ಪಸ್ವಲ್ಪ ನೀರು ಲಭ್ಯವಿದ್ದರೂ ಪಂಪುಮೋಟಾರ್ ಅಳವಡಿಸಬೇಕಾಗಿದೆ. ಇದರ ನಡುವೆ ಸಮರ್ಪಕ ನೀರು ಪೂರೈಕೆಗೆ 1 ಖಾಸಗಿ ಕೊಳವೆ ಬಾವಿಯನ್ನು ತಿಂಗಳ ಒಪ್ಪಂದದಲ್ಲಿ ಬಾಡಿಗೆ ಪಡೆಯಲಾಗಿದೆ. ಹೀಗೆ ನೀರಿನ ಸೌಕರ್ಯವಿದ್ದರೂ ಸ್ಥಳೀಯ ಸದಸ್ಯರು ಮತ್ತು ನೀರುಗಂಟಿಯ ರಾಜಕೀಯ ದುರುದ್ದೇಶದಿಂದ ಹಾಹಾಕಾರದ ಸಮಸ್ಯೆ ಸೃಷ್ಟಿಸಿದೆ. ಇಲ್ಲಿನ ಗ್ರಾಪಂಗೆ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧ್ಯಕ್ಷರು, ಪಿಡಿಒ ಎಚ್ಚರಿಕೆಗೂ ನೀರುಗಂಟಿ ಜಗ್ಗುತ್ತಿಲ್ಲ. ಇದಕ್ಕೆ ಸದಸ್ಯರ ಕುಮ್ಮಕ್ಕು ಕಾರಣ ಎನ್ನಲಾಗಿದೆ. ಎಸ್ಸಿ ಕಾಲನಿ ಸೇರಿ ಗ್ರಾಮದ ಅನೇಕ ಮನೆಗಳ ಜನರು ನಾಲ್ಕು ದಿನಗಳಿಗೊಮ್ಮೆ 600 ರೂಪಾಯಿ ನೀಡಿ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಇನ್ನು ಬಡವರು ಬೇರೆಡೆ ತೆರಳಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಸಮರ್ಪಕ ನೀರು ಪೂರೈಕೆಗೆ ಒವರ್‌ಹೆಡ್ ಟ್ಯಾಂಕ್ ನಿರ್ಮಿಸಿ, ಮನೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಇಲ್ಲಿ ನೀರಿಗೇನೂ ಕೊರತೆ ಇಲ್ಲ. ಆದರೆ, ತೋಟಗಳಿಗೆ ಪೂರೈಸಲಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ನೀರಿನ ಘಟಕಕ್ಕೂ ಅಭಾವ: ಗ್ರಾಮದ ಜನರ ಹಿತದೃಷ್ಟಿಯಿಂದ ಸಚಿವ ಡಾ ಕೆ.ಸುಧಾಕರ್ ಅಮೃತಗಂಗೆ ಯೋಜನೆಯಡಿ ವೈಯಕ್ತಿಕವಾಗಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿ ಕೊಟ್ಟಿದ್ದಾರೆ. ಇದು ಉತ್ತಮವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಡಶೀಗೇನಹಳ್ಳಿ, ತಿಮ್ಮನಹಳ್ಳಿ ಸೇರಿ ಸಮೀಪದ ಗ್ರಾಮಗಳಿಂದ ಜನರು ಶುದ್ಧವಾದ ನೀರಿಗಾಗಿ ಆಗಮಿಸುತ್ತಾರೆ. ಆದರೆ, ಇದಕ್ಕೂ ದುರುದ್ದೇಶದಿಂದಲೇ ನೀರಿನ ಅಭಾವ ಸೃಷ್ಟಿಸಲಾಗುತ್ತಿದೆ. ಈಗಲಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಕೊಂಡೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದೆ. ಎರಡು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಒಂದು ಬಾವಿ ಬಾಡಿಗೆಗೆ ಪಡೆಯಲಾಗಿದೆ. ನೀರಿನ ಅಭಾವದ ಬಗ್ಗೆ ದೂರು ಬಂದಿಲ್ಲ. ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ವೈ.ಎನ್.ಪವಿತ್ರಾ, ಗ್ರಾಪಂ ಅಧ್ಯಕ್ಷೆ, ಕೊಂಡೇನಹಳ್ಳಿ
    ===========
    ಗ್ರಾಮದಲ್ಲಿ ಸಮರ್ಪಕ ನೀರಿನ ಲಭ್ಯತೆಯಿದ್ದರೂ ಕೆಲವರು ದುರುದ್ದೇಶದಿಂದ ನೀರಿನ ಅಭಾವ ಸೃಷ್ಟಿಸುತ್ತಿದ್ದಾರೆ. ರಾತ್ರಿ ವೇಳೆ ತೋಟಗಳಿಗೆ ಪೂರೈಕೆಯಾಗುತ್ತಿದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು.
    ಹೇಮಣ್ಣ, ಸ್ಥಳೀಯ ನಿವಾಸಿ, ಕೊಂಡೇನಹಳ್ಳಿ

    =========
    ಐದು ದಿನಕ್ಕೊಮ್ಮೆ ಅಲ್ಪ ಪ್ರಮಾಣದಲ್ಲಿ ನೀರು ಪೂರೈಸಲಾಗುತ್ತಿದೆ. ಸಮರ್ಪಕ ನೀರು ಸರಬರಾಜು ಇಲ್ಲದ ಕಾರಣ ಗ್ರಾಮದ ಜನ ಅಲೆಯುವಂತಾಗಿದೆ. ಗ್ರಾಪಂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಾರೆ. ಆದರೆ, ಕೆಲವರ ದುರುದ್ದೇಶದ ವರ್ತನೆಯಿಂದ ಸಮಸ್ಯೆ ಸೃಷ್ಟಿಯಾಗಿದೆ.
    ಸೊಣ್ಣೇಗೌಡ, ಸ್ಥಳೀಯ ನಿವಾಸಿ, ಕೊಂಡೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts