More

    ರಾಗಿ ಖರೀದಿಗೆ ನೋಂದಣಿ ಶುರು : ಮೂರನೇ ಬಾರಿ ರೈತರಿಗೆ ಅವಕಾಶ, 31ರವರೆಗೆ ನೋಂದಣಿ ಪ್ರಕ್ರಿಯೆ

    ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
    ಕಳೆದ ಏಪ್ರಿಲ್​ನಲ್ಲಿ ಒಂದೇ ದಿನಕ್ಕೆ ಆನ್​ಲೈನ್​ ನೋಂದಣಿ ಮುಕ್ತಾಯವಾಗಿದ್ದರಿಂದ ರೈತರು ಮತ್ತೊಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಇದೀಗ ಮೂರನೇ ಬಾರಿ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ.
    ಸರ್ಕಾರ ಮೇ 1ರಿಂದ ನೋಂದಣಿಗೆ ಸೂಚಿಸಿಸಿದ್ದು, ಆನ್​ಲೈಲ್​ ನೋಂದಣಿ ಮೇ 10ರಿಂದ ಪ್ರಾರಂಭವಾಗಿದೆ. ರಾಜ್ಯದಲ್ಲಿ 2ನೇ ಅವಧಿ ಸೇರಿ ಮೂರನೇ ಹಂತದ ಮೊದಲ ದಿನಕ್ಕೆ 50,961ಮಂದಿ ನೋಂದಾಯಿಸಿದ್ದು, ಜಿಲ್ಲೆಯಲ್ಲಿ 3246 ಮಂದಿ ನೋಂದಾಯಿಸಿದ್ದಾರೆ.
    ಕಳೆದ ವರ್ಷ 6 ಲಕ್ಷ ಮೆಟ್ರಿಕ್​ ಟನ್​ ರಾಗಿ ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಜನವರಿಯಿಂದ ಮಾರ್ಚ್​ ಅಂತ್ಯದವರೆಗೆ ರೈತರು ಅನಾಯಾಸವಾಗಿ ಮಾರಾಟ ಮಾಡಿದ್ದರು. ಪ್ರತಿ ರೈತನಿಂದ 70 ಕ್ವಿಂಟಾಲ್​ವರೆಗೆ ಪಡೆದುಕೊಳ್ಳಲಾಗಿತ್ತು. ಆದರೆ ಈ ಬಾರಿ ಸಣ್ಣ ಮತ್ತು ಅತಿಸಣ್ಣ ರೈತರು 20 ಕ್ವಿಂಟಾಲ್​ ಮಾತ್ರ ಮಾರಬೇಕು. 2 ಎಕರೆಗಿಂತ ಹೆಚ್ಚಿಗೆ ಇದ್ದವರು, ಪಹಣಿಯಲ್ಲಿ ರಾಗಿ ಬೆಳೆ ನಮೂದಾಗದವರು ನೋಂದಣಿ ಮಾಡಿಸಲು ಅವಕಾಶ ನಿರಾಕರಿಸಲಾಗಿತ್ತು. ರಾಜ್ಯದಲ್ಲಿ 2 ಬಾರಿ ನೋಂದಣಿಗೆ ಅವಕಾಶ ನೀಡಿದರೂ ಸರ್ಕಾರ ನೀಡಿದ ಗುರಿ ತ್ವರಿತಗತಿಯಲ್ಲಿ ತಲುಪಿದ್ದರಿಂದ ರೈತರು ಕಂಗಾಲಾಗಿದ್ದರು. ಮತ್ತೊಮ್ಮೆಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು.
    ಈ ವರ್ಷ ಜನವರಿಯಲ್ಲಿ ರಾಜ್ಯಕ್ಕೆ 2.10 ಲಕ್ಷ ಮೆಟ್ರಿಕ್​ ಟನ್​ ರಾಗಿ ಖರೀದಿ ಗುರಿ ನಿಗದಿ ಮಾಡಿ ಅವಕಾಶ ನೀಡಿತ್ತು. ಅದರಂತೆ ಜ.1ರಿಂದ ನೋಂದಣಿ ಪ್ರಾರಂಭವಾಗಿ ಜ.26ಕ್ಕೆ ಸ್ಥಗಿತಗೊಂಡಿತ್ತು. ಜಿಲ್ಲೆಯಲ್ಲಿ ಸರ್ಕಾರದ ನಿಯೋಜಿತ ಏಜೆನ್ಸಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಫೆ.11ರಿಂದ ಖರೀದಿ ಕೇಂದ್ರಗಳನ್ನು ತೆರೆದು ನೋಂದಾಯಿಸಿದ್ದ 6816 ರೈತರಿಂದ ಕ್ವಿಂಟಾಲ್​ಗೆ 3377 ರೂ. ನೀಡಿ 95,300 ಕ್ವಿಂಟಾಲ್​ ರಾಗಿ ಖರೀದಿಸಿತ್ತು. ಆದರೆ ನೋಂದಣಿ ಮಾಡಿಸಲಾಗದವರು ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದರು. ಅದರಂತೆ ಸರ್ಕಾರ ಇದೇ ಏ. 25ರಿಂದ 1.4 ಮೆಟ್ರಿಕ್​ ಟನ್​ ಗುರಿನಿಗದಿಪಡಿಸಿ ಆನ್​ಲೈನ್​ ನೋಂದಣಿಗೆ ಅವಕಾಶ ನೀಡಿತ್ತು. ವಿಪರ್ಯಾಸವೆಂದರೆ ಒಂದೇ ದಿನ ಗುರಿ ತಲುಪಿದ್ದರಿಂದ ಆನ್​ಲೈನ್​ ನೋಂದಣಿ 28ಕ್ಕೆ ಬಂದ್​ ಆಗಿತ್ತು. ಈ ಅವಧಿಯಲ್ಲಿ 2395 ರೈತರು ಮಾತ್ರ 33,438ಕ್ವಿಂಟಾಲ್​ ರಾಗಿ ಮಾರಲು ನೋಂದಾಯಿಸಿಕೊಂಡಿದ್ದರು. ಇದರಿಂದ ಬೇಸತ್ತ ರೈತರು ಇನ್ನೊಮ್ಮೆ ನೋಂದಣಿಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದಿದ್ದರು.
    ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 2.0 ಲಕ್ಷ ಮೆಟ್ರಿಕ್​ ಟನ್​ ಖರೀದಿಗೆ ಮೇ ಪ್ರಾರಂಭದಲ್ಲಿ ಅನುಮತಿ ದೊರೆತಿದೆ. ರೈತರಿಂದ ಮಾಹಿತಿಯನ್ನು ರಿಜಿಸ್ಟರ್​ ಬುಕ್​ನಲ್ಲಿ ಮೊದಲೇ ದಾಖಲಿಸಿಕೊಂಡಿದ್ದ ಅಧಿಕಾರಿಗಳು ಆನ್​ಲೈನ್​ನಲ್ಲಿ ದಾಖಲೆಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ.

    ಎಚ್ಚರ ವಹಿಸಿದ ಸರ್ಕಾರ: ಳೆದ ಬಾರಿ ಒಂದೇ ದಿನಕ್ಕೆ ಆನ್​ಲೈನ್​ ನೋದಣಿ ಬಂದ್​ ಆಗಲು ರಾಜ್ಯದ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಖರೀದಿ ಏಜೆನ್ಸಿಗಳ ಕಚೇರಿಗಳಲ್ಲಿ ಅಧಿಕಾರಿಗಳು ಇಚ್ಛಾನುಸಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಇದರಿಂದ ಜಿಲ್ಲೆಯ ರೈತರು ನೋಂದಣಿಗೆ ಅವಕಾಶ ಸಿಗದೆ ಪರದಾಡುವಂತಾಗಿತ್ತು. ದಲ್ಲಾಳಿಗಳು ರೈತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎಂಬುದು ರೈತರ ಆರೋಪವಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಈ ಬಾರಿ ನೋಂದಣಿ ಪ್ರಕ್ರಿಯೆ ಮೇಲೆ ನಿಗಾ ವಹಿಸಿದ್ದು, ಮೂರನೇ ಅವಧಿಯ ಎರಡೂ ದಿನ ಯಾವುದೇ ಗೊಂದಲವಿಲ್ಲದೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

    ಮೇ 10ಕ್ಕೆ ನೋಂದಾಯಿಸಿದ ರೈತರೆಷ್ಟು?: ಏಪ್ರಿಲ್​ ಮತ್ತು ಮೇ ಮಾಹೆಗಳಲ್ಲಿ ತುಮಕೂರು-17,393, ಬೆಂಗಳೂರು ಗ್ರಾಮಾಂತರ- 8887, ರಾಮನಗರ- 7313, ಬಳ್ಳಾರಿ -4527, ದಾವಣಗೆರೆ- 4263, ಚಿತ್ರದುರ್ಗ -3799, ಕೋಲಾರ- 3246, ಬೆಂಗಳೂರು ನಗರ -1513, ರಾಯಚೂರು- 16 ಮಂದಿ ನೋಂದಾಯಿಸಿದ್ದಾರೆ. ರಾಜ್ಯದ 50961 ಮಂದಿ ರೈತರು 7,814,32 ಕ್ವಿಂಟಾಲ್​ ರಾಗಿ ಮಾರಾಟಕ್ಕೆ ಅನುಮತಿ ಪಡೆದಿದ್ದಾರೆ. ಜಿಲ್ಲೆಯಲ್ಲಿ 44,796 ಕ್ವಿಂಟಾಲ್​ ಮಾರಾಟಕ್ಕೆ ಅನುಮತಿ ಸಿಕ್ಕಿದೆ.

    ಕೇಂದ್ರ ಸರ್ಕಾರ ಸೂಚನೆಯಂತೆ ಕಳೆದ ಮೂರ್ನಾಲ್ಕು ದಿನಗಳಿಂದ ರೈತರಿಂದ ದಾಖಲೆ ಪಡೆದು ಜಿಲ್ಲೆಯ 6 ತಾಲೂಕುಗಳಲ್ಲೂ ನೋಂದಣಿ ನಡೆಯುತ್ತಿದೆ. ಮೇ 10ರಂದು ಬೆಳಗ್ಗೆ 8ರಿಂದ ಸಂಜೆ 6ಗಂಟೆ ತನಕ ರಿಜಿಸ್ಟರ್​ನಲ್ಲಿ ದಾಖಲಿಸಿಕೊಂಡಿದ್ದವರು ಮತ್ತು ಖರೀದಿ ಕೇಂದ್ರಗಳಿಗೆ ಬಂದ ರೈತರ ಮಾಹಿತಿಯನ್ನು ಆನ್​ಲೈನ್​ನಲ್ಲಿ ದಾಖಲಿಸಲಾಗಿದೆ. ಮೇ 31ರತನಕ ಸರ್ಕಾರ ನೋಂದಣಿಗೆ ಕಾಲಾವಕಾಶ ನೀಡಿದೆ. ಈ ಬಾರಿ 2.0ಲಕ್ಷ ಮೆಟ್ರಿಕ್​ಟನ್​ಗೆ ಅವಕಾಶ ನೀಡಿದ್ದು, ಗುರಿ ತಲುಪಿದ ನಂತರ ನೋಂದಣಿ ಸ್ಥಗಿತಗೊಳ್ಳಲಿದೆ. ರೈತರು ಅವಕಾಶ ಸದ್ಬಳಸಿಕೊಳ್ಳಬೇಕು.
    ಚೌಡೇಗೌಡ, ಜಿಲ್ಲಾ ವ್ಯವಸ್ಥಾಪಕ, ಕೆಎಫ್​ ಅಂಡ್​ ಸಿಎಸ್​ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts