More

    ಯೋಜನೆ ಸದುಪಯೋಗಕ್ಕೆ ಇಒ ಸಲಹೆ

    ಶಿರಹಟ್ಟಿ: ಸರ್ಕಾರದ ಎಸ್​ಇಪಿ, ಟಿಎಸ್​ಪಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಸಲು ಇಚ್ಚಾಶಕ್ತಿ ತೋರಬೇಕು ಎಂದು ತಾಪಂ ಇಒ. ಡಾ. ಎನ್.ಎಚ್. ಓಲೇಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಪಂ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿಯ ತಾಪಂ ಸಭಾ ಭವನದಲ್ಲಿ ಶಿರಹಟ್ಟಿ ತಾಲೂಕು ಮಟ್ಟದ ಎಸ್​ಇಪಿ, ಟಿಎಸ್​ಪಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲಿನ ಚರ್ಚೆ ವೇಳೆ ಮಾತನಾಡಿದ ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಜಿಪಂ ಸದಸ್ಯೆ ದೇವಕ್ಕ ಲಮಾಣಿ ಅವರು, ‘ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ 3-4 ತಿಂಗಳಿಂದ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ. ಆದರೆ, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸಮರ್ಪಕವಾಗಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವ ದೂರುಗಳು ಪಾಲಕರಿಂದ ಕೇಳಿ ಬರುತ್ತಿವೆ. ಈ ಬಗ್ಗೆ ಗಮನ ಹರಿಸಬೇಕಾದ ಮೇಲ್ವಿಚಾರಕಿಯರು ಹಳ್ಳಿಗಳತ್ತ ಸುಳಿಯದೇ ಮನೆಗಳಲ್ಲಿ ಕುಳಿತು ವರದಿ ತಯಾರಿಸಿ ಅಧಿಕಾರಿಗೆ ಒಪ್ಪಿಸುತ್ತಾರೆ. ಹೀಗಾದರೆ ಈ ಅವ್ಯವಸ್ಥೆ ಬಗ್ಗೆ ಕೇಳುವವರ್ಯಾರು’ ಎಂದರು.

    ಸಿಡಿಪಿಒ ಮೃತ್ಯುಂಜಯ ಪ್ರತಿಕ್ರಿಯಿಸಿ, ‘ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಅವರ ಮನೆ ಬಾಗಲಿಗೆ ಹೋಗಿ ಸರ್ಕಾರದ ಸೌಲಭ್ಯ ಒದಗಿಸಬೇಕು ಎಂದು ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ’ ಎಂದರು.

    ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶುಲ್ಕ ವಸೂಲಿ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೂ ವ್ಯಾಪಾರಿಕರಣಕ್ಕೆ ನಿಂತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕರಪತ್ರ ಮುದ್ರಿಸಿ ಶಾಲೆಗಳಲ್ಲಿ ತರಬೇತಿ ಪ್ರವೇಶಕ್ಕೆ ಆಹ್ವಾನ ನೀಡುವ ಮೂಲಕ ಶಾಲೆಗಳ ನಿರ್ವಹಣೆ ನೆಪದಲ್ಲಿ ಪಾಲಕರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎನ್ನುವ ಸಂಗತಿ ಕೇಳಿ ಬಂದಿದೆ. ಇದು ತಮ್ಮ ಗಮನಕ್ಕೆ ಬಂದಿಲ್ಲವೇ? ಎಂದು ತಾಪಂ.ಇಒ ಡಾ. ಗುರಿಕಾರ ಬಿಇಒ ಆರ್.ಎಸ್. ಬುರಡಿ ಅವರನ್ನು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಬಿಇಒ, ‘ಈ ಕುರಿತು ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಹೀಗಾಗಿ ಗೊಂದಲ ಸೃಷ್ಟಿಯಾದ ಕಾರಣ ಕೆಲ ಮಕ್ಕಳ ಪಾಲಕರು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕೆ ಮುಂದಾಗುತ್ತಿದ್ದಾರೆ. ಆದಾಗ್ಯೂ ಅಂಥ ಚಟುವಟಿಕೆ ನಡೆಯದಂತೆ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾವಹಿಸಲಾಗುತ್ತದೆ’ ಎಂದರು.

    ಅಧಿಕಾರಿ ವರ್ತನೆಗೆ ಬೇಸರ: ತಾಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಯಾವುದೇ ಸಭೆಗೆ ಜಿಪಂ. ಸಹಾಯಕ ಇಂಜಿನಿಯರ್ ನಾಗರತ್ನ ಅವರು ಬರದೇ ತಮ್ಮ ಕಚೇರಿ ಸಹಾಯಕರನ್ನು ಕಳಿಸುವುದು ರೂಢಿಸಿಕೊಂಡಿದ್ದಾರೆ. ಸಹಾಯಕರಿಗೆ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ಗೊತ್ತಿರದೇ ಸಭೆಯಲ್ಲಿ ಮೂಕವಿಸ್ಮಿತರಾಗಿ ನಿಂತು ಸದಸ್ಯರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಅಧಿಕಾರಿಗಳು ಹೀಗೆ ಗೈರಾದರೆ ಯಾರಿಗೆ ಕೇಳಬೇಕು.ಅವರಿಗೆ ಕರ್ತವ್ಯ ಪ್ರಜ್ಞೆ ಇಲ್ಲವೇ ಎಂದು ಇಒ ಬೇಸರ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ತಾಪಂ ಅಧ್ಯಕ್ಷ ಈಶ್ವರಪ್ಪ ಲಮಾಣಿ, ಉಪಾಧ್ಯಕ್ಷೆ ಶಂಕಿನದಾಸರ ಅವರು, ಸಭೆಗೆ ಗೈರಾದವರಿಗೆ ನೋಟಿಸ್ ಜಾರಿ ಮಾಡುವುದರ ಜತೆಗೆ ಮೇಲಧಿಕಾರಿಗಳ ಗಮನಕ್ಕೆ ತರಲು ಸೂಚನೆ ನೀಡಿದರು.

    ಎಸ್​ಇಪಿ, ಟಿಎಸ್​ಪಿ ಯೋಜನೆ ಅನುಷ್ಠಾನ ಸಮರ್ಪಕವಾಗಿ ನಡೆಯುವುದರ ಜತೆಗೆ ಆಯಾ ಜನಾಂಗದ ಸೌಲಭ್ಯಕ್ಕೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾದ ಅನುದಾನ ಸದ್ಬಳಕೆಯಾಗಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಬಿ. ಹರ್ತಿ ಸೂಚಿಸಿದರು. ತಾಪಂ.ಅಧ್ಯಕ್ಷ ಈಶ್ವರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.

    ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ಹಾಗೂ ಅನಧಿಕೃತವಾಗಿ ದಾಸ್ತಾನು ಮಾಡುವವರ ಮೇಲೆ ನಿಗಾವಹಿಸಿ ರಸಗೊಬ್ಬರ ಹಂಚಿಕೆ ಸಂದರ್ಭದಲ್ಲಿ ನೂಕು ನೂಗ್ಗಲುಗಳಿಗೆ ಆಸ್ಪದೇ ನೀಡದಂತೆ ಕ್ರಮ ವಹಿಸಬೇಕು. ಕೃತಕ ಅಭಾವ ಹಾಗೂ ಅನಧಿಕೃತ ದಾಸ್ತಾನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

    | ಎಂ.ಸುಂದರೇಶ ಬಾಬು ಡಿ.ಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts