More

    ಯುವ ವಕೀಲರಿಗೆ ಬೇಕು ವೃತ್ತಿ ಕೌಶಲ  -ಅರವಿಂದ್ ಕಾಮತ್ ಹೇಳಿಕೆ -ಉಪನ್ಯಾಸ ಕಾರ್ಯಕ್ರಮ 

    ದಾವಣಗೆರೆ: ದಿನಕ್ಕೊಂದು ಹೊಸ ಕಾಯ್ದೆ ಬರುತ್ತಿರುವುದರಿಂದ ಯುವ ವಕೀಲರು ನಿತ್ಯವೂ ಹೊಸ ಕಲಿಕೆಯಲ್ಲಿ ತೊಡಗಬೇಕು. ವಕಾಲತ್ತಿನ ಕೌಶಲಗಳನ್ನೂ ವೃದ್ಧಿಸಿಕೊಳ್ಳಬೇಕು ಎಂದು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಕೆ.ಅರವಿಂದ್ ಕಾಮತ್ ಹೇಳಿದರು.
    ವಕೀಲರ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ, ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯದಾನದ ಪ್ರಕ್ರಿಯೆಯಲ್ಲಿ ನ್ಯಾಯವಾದಿಗಳ ವೃತ್ತಿ ಕೌಶಲಗಳು ಕುರಿತು ಉಪನ್ಯಾಸ ನೀಡಿದರು.
    ವಕೀಲಿ ವೃತ್ತಿ ಗಂಭೀರವಾದುದು. ಇಂದು ಕೃತಕ ಬುದ್ದಿಮತ್ತೆ ಪರಿಣಾಮಕಾರಿಯಾಗಿರುವ ಸಂದರ್ಭದಲ್ಲಿ ಯುವ ವಕೀಲರಲ್ಲಿ ಹೆಚ್ಚಿನ ಕೌಶಲಗಳು ಬೇಕು. ಕ್ರೀಡೆಗಳಲ್ಲಿ ತೋರುವಷ್ಟೇ ದೃಢವಿಶ್ವಾಸ ಇರಬೇಕು. ಕೇಸ್‌ನ ಕರಡು ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಖುಷಿಯಿಂದಲೇ ವೃತ್ತಿ ನಿರ್ವಹಿಸಬೇಕು. ಸಮಯ ಪರಿಪಾಲನೆಯಲ್ಲಿ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
    ಯಾವುದೇ ಕೇಸ್ ನಿಭಾಯಿಸುವ ಪೂರ್ವದಲ್ಲಿ ವಕೀಲರಲ್ಲಿ ತರಾತುರಿ ನಿರ್ಧಾರ ಬೇಡ. ವಸ್ತುಸ್ಥಿತಿ ಅರಿತು ಸಿವಿಲ್, ಕ್ರಿಮಿನಲ್, ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಬೇಕೆ ಎಂಬುದರ ಬಗ್ಗೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ತಿಳಿಸಿದರು.
    ವಕೀಲಿ ವೃತ್ತಿಗೆ ಸರಿಸಾಟಿ ಮತ್ತೊಂದಿಲ್ಲ. ಜನರಿಗೆ ನ್ಯಾಯ ಹಾಗೂ ಪರಿಹಾರ ಕೊಡಿಸುವಲ್ಲಿ ತೊಡಗುವ ಕಾರಣಕ್ಕೆ ನಿತ್ಯವೂ ತೃಪ್ತಿ ಸಿಗಲಿದೆ. ಅಲ್ಲದೆ ಇದೇ ಕಾರಣಕ್ಕೆ ಸಮಾಜದ ಗೌರವವೂ ಪ್ರಾಪ್ತಿಯಾಗಲಿದೆ. ಹಾಗಾಗಿ ಇದು ಉಳಿದವುಗಿಂತಲೂ ಪವಿತ್ರವಾದ ವೃತ್ತಿಯಾಗಿದೆ ಎಂದರು.
    ರಾಜ್ಯದ ಎಲ್ಲ ಜಿಲ್ಲೆಯಲ್ಲೂ ನಾನಾ ವಿಷಯಗಳಲ್ಲೂ ವಕಾಲತ್ತು ಮಾಡುವ ಪ್ರತಿಭಾವಂತ ನ್ಯಾಯವಾದಿಗಳಿದ್ದಾರೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಕೌಶಲದ ಕೊರತೆಯೂ ಕೆಲವರಲ್ಲಿದೆ. ಭಾರತದ ಸಂವಿಧಾನ, ಭಾರತೀಯ ನ್ಯಾಯ ಸಂಹಿತೆ ಕೂಡ ಇಂಗ್ಲಿಷ್‌ನಲ್ಲಿದೆ. ವಕೀಲರಿಗೆ ವೃತ್ತಿ ಕೌಶಲದ ಭಾಗವಾಗಿ ಇಂಗ್ಲಿಷ್ ಜ್ಞಾನ ಬೇಕು ಎಂದು ಹೇಳಿದರು.
    ಬೆಂಗಳೂರಲ್ಲಿ 14 ಸಾವಿರ ಎಕರೆ ಹಾಗೂ ರಾಜ್ಯದಲ್ಲಿ 39 ಸಾವಿರ ಎಕರೆಯಷ್ಟು ರಕ್ಷಣಾ ಇಲಾಖೆಯ ಜಾಗದ ಸಿವಿಲ್ ವ್ಯಾಜ್ಯ, ಜನನ ಮತ್ತು ಮರಣ ನೋಂದಣಿ, ಕಪ್ಪು ಹಣ ಮೊದಲಾದ ವಿಚಾರಗಳ ಕುರಿತಂತೆ ಕೇಸ್‌ಗಳು ನಡೆಯುತ್ತಿವೆ ಎಂದು ವಿವರಿಸಿದ ಅವರು, ಹೆಚ್ಚುತ್ತಿರುವ ಕಾಯ್ದೆ, ಕೇಸ್‌ಗಳ ಹಿನ್ನಲೆಯಲ್ಲಿ ವಕೀಲರು ಬೌದ್ಧಿಕವಾಗಿ ಬೆಳೆಯಬೇಕಿದೆ. ನಿತ್ಯವೂ ಜ್ಞಾನವನ್ನು ಉನ್ನತೀಕರಿಸಬೇಕಿದೆ ಎಂದರು.
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ ಆರೋಪಿಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸುವಾಗ ಏಕರೂಪದ ಬರಹಗಳನ್ನೇ ಕಾಣುತ್ತಿದ್ದೇವೆ. ಜಾಮೀನು ನೀಡಲು ವಕೀಲರು ಸಮರ್ಥ ವಾದ ಮಾಡಬೇಕಿದೆ ಎಂದು ಎಂದು ಆಶಿಸಿದರು.
    ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ವಿ.ವಿಜಯಾನಂದ ಮಾತನಾಡಿ ವಿಚಾರಣಾ ನ್ಯಾಯಾಲಯಗಳ ಹಂತದಲ್ಲಿನ ವಕೀಲಿಗಾರಿಕೆಯೇ ಪ್ರಮುಖವಾಗಿದೆ ಎಂದರು.
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್ಕುಮಾರ್ ಇದ್ದರು. ಜ್ಯೋತಿ ಪ್ರಾರ್ಥನೆ ನಡೆಸಿಕೊಟ್ಟರು. ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts