More

    ಮೇ ೭ರಂದು ತಪ್ಪದೆ ಮತ ಚಲಾಯಿಸಿ

    ಕಲಬುರಗಿ: ಲೋಕಸಭಾ ಕ್ಷೇತ್ರಕ್ಕೆ ಮೇ ೭ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.

    ನೆಹರು ಗಂಜ್‌ನ ನಗರೇಶ್ವರ ಶಾಲೆ ಮೈದಾನದಲ್ಲಿ ಭಾರತ ಚುನಾವಣೆ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಕಲಬುರಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಡಿ ಲೋಕಸಭಾ ಚುನಾವಣೆ ಸೈಕಲ್ ಜಾಥಾ ನಮ್ಮ ನಡೆ ಮತಗಟ್ಟೆ ಕಡೆ ಘೋಷವಾಕ್ಯದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಮತ್ತು ಮೂಲಭೂತ ಕರ್ತವ್ಯ. ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದೆ. ನಗರ, ಗ್ರಾಮೀಣ, ಗುಡ್ಡ-ಗಾಡು ಪ್ರದೇಶ, ನರೇಗಾ ಕಾಮಗಾರಿ ಸ್ಥಳಗಳಲ್ಲಿ ಮತದಾರರನ್ನು ಸೆಳೆಯಲು ಸಾಕಷ್ಟು ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

    ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಮಾತನಾಡಿ, ಮೇ ೭ರಂದು ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು. ಅಂದು ರಜೆ ಇರುವುದರಿಂದ ತಪ್ಪದೆ ಹಕ್ಕು ಚಲಾಯಿಸಬೇಕು ಎಂದು ಕೋರಿದರು.

    ಪ್ರೊಬೇಷನರಿ ಐಎಎಸ್ ಗಜಾನನ ಬಾಳೆ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ನೋಡಿದರೆ ಬಹಳ ಕಡಿಮೆ. ಈಗಿನ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗಬೇಕು ಎಂದರು.

    ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್‌ಸಿಂಗ್ ಮೀನಾ ಅವರು ಭಾರತ ಚುನಾವಣೆ ಆಯೋಗದ ಸ್ವೀಪ್ ಧ್ವಜಾರೋಹಣ ನೆರವೇರಿಸಿ ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಚುನಾವಣೆ ಜಾಗೃತಿ ಮೂಡಿಸುವ ನಾ ಭಾರತ ಎಂಬ ದೃಶ್ಯ ಗೀತೆಯನ್ನು ವಿಡಿಯೋ ಮೂಲಕ ಪ್ರದರ್ಶಿಸಲಾಯಿತು. ಪಾಲಿಕೆ ಉಪಾಯುಕ್ತ ಮಾಧವ ಗಿತ್ತೆ, ಸೈಕ್ಲಿಂಗ್ ಜಾಥಾ ಅಧ್ಯಕ್ಷ ಶರಣಕುಮಾರ ಶೆಟಗಾರ ಮಾತನಾಡಿದರು.

    ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಶಂಕರ್, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಡೆಕ್ಕಾ ಕಿಶೋರಬಾಬು, ಜಿಪಂ ಉಪ ಕಾರ್ಯದರ್ಶಿ ಅಬ್ದುಲ್ ಅಜೀಮ್, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ತಾಪಂ ಇಒ ಮಹ್ಮದ್ ಸೈಯದ್ ಪಟೇಲ್ ಇತರರು ಪಾಲ್ಗೊಂಡಿದ್ದರು.

    ಇದಕ್ಕೂ ಮೊದಲು ಮತದಾರರಲ್ಲಿ ಜಾಗೃತಿ ಮೂಡಿಸಲು ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ಅಂಗವಾಗಿ ಬೆಳಗ್ಗೆ ಜಗತ್ ವೃತ್ತದಿಂದ ಶುರುವಾದ ಸೈಕಲ್ ರ‍್ಯಾಲಿ ನೆಹರು ಗಂಜ್‌ನ ನಗರೇಶ್ವರ ಸ್ಕೂಲ್‌ವರೆಗೆ ಸಾಗಿತು.

    ಚುನಾವಣಾಧಿಕಾರಿಗಳು ಮತದಾರರ ಸ್ಲಿಪ್ ಹಿಂಭಾಗದಲ್ಲಿ ಮತಗಟ್ಟೆ ವಿಳಾಸದ ಕ್ಯೂಆರ್ ಕೋಡ್ ಮುದ್ರಿಸುವ ವ್ಯವಸ್ಥೆ ಮಾಡಿದ್ದಾರೆ. ಕ್ಯೂಆರ್ ಕೋಡರ್ ಸ್ಕ್ಯಾನ್ ಮಾಡಿದ ಕೂಡಲೆ ಮತಗಟ್ಟೆ ವಿಳಾಸ ಕಾಣಿಸಿಕೊಳ್ಳುತ್ತದೆ. ಆಯಾ ಮತಗಟ್ಟೆಗೆ ಹೋಗಿ ಮತ ಚಲಾಯಿಸಬಹುದು.
    | ಭುವನೇಶ ಪಾಟೀಲ್ ಆಯುಕ್ತ, ಮಹಾನಗರ

    ಪಾಲಿಕೆಮತಗಟ್ಟೆಗಳಲ್ಲಿ ಚುನಾವಣಾ ಧ್ವಜಾರೋಹಣ: ಜಿಲ್ಲಾಡಳಿತ, ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ಅಂಗವಾಗಿ ಭಾನುವಾರ ಜಿಲ್ಲೆಯ ಎಲ್ಲ ೨,೩೭೮ ಮತಗಟ್ಟೆಗಳಲ್ಲಿ ಚುನಾವಣಾ ಧ್ವಜಾರೋಹಣ ನೆರವೇರಿಸಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್‌ಸಿಂಗ್ ಮೀನಾ ತಿಳಿಸಿದ್ದಾರೆ. ಜಿಲ್ಲೆಯ ಒಂಬತ್ತು ವಿಧಾನಸಭೆ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಲಭ್ಯ ಕುರಿತು ಖಚಿತಪಡಿಸಿಕೊಂಡು ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.

    ಕಾರ್ಯಕ್ರಮ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ ಮತದಾರರಿಗೆ ಮತಗಟ್ಟೆ ವಿಳಾಸ ತಿಳಿಸುವುದು ಮತ್ತು ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದಕ್ಕೆ ಪ್ರೇರೇಪಿಸುವುದು ಮುಖ್ಯ ಉದ್ದೇಶ. ಈ ಧ್ವಜ ಮತದಾನ ನಡೆಯುವರೆಗೂ ಮತಗಟ್ಟೆಯಲ್ಲಿ ಹಾರಾಡಲಿದೆ. ಮತಗಟ್ಟೆ ಗುರುತಾಗಿ ಬಿಂಬಿತವಾಗಲಿದೆ ಎಂದರು.

    ಶಹಾಬಾದ್‌ನಲ್ಲಿ ಎತ್ತಿನ ಬಂಡಿ ರ‍್ಯಾಲಿ
    ಲೋಕಸಭಾ ಚುನಾವಣೆ ನಿಮಿತ್ತ ಸ್ವೀಪ್ ಚಟುವಟಿಕೆ ಅಡಿ ಭಾನುವಾರ ಬೆಳಗ್ಗೆ ನಗರಸಭೆ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿ ಹಾಗೂ ಪಾದಯಾತ್ರೆ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ಸ್ವೀಪ್ ಸಮಿತಿ, ಶಹಾಬಾದ್ ನಗರಸಭೆ, ತಾಲೂಕು ಸ್ವೀಪ್ ಸಮಿತಿ ಸಹಯೋಗದಡಿ ಬ್ಯಾನರ್ ಹಿಡಿದು ಪಾದಯಾತ್ರೆ, ಬೈಕ್ ರ‍್ಯಾಲಿ ಮೂಲಕ, ಧ್ವನಿವರ್ಧಕದಿಂದ ಮತದಾರರಿಗೆ ಮತದಾನದ ಮಹತ್ವ ತಿಳಿಹೇಳಲಾಯಿತು. ನಗರಸಭೆಯಿಂದ ಶುರುವಾದ ಜಾಗೃತಿ ಎತ್ತಿನ ಬಂಡಿ ರ‍್ಯಾಲಿ, ಮಜೀದ್ ಚೌಕ್, ಮುಖ್ಯ ರಸ್ತೆ, ಶ್ರೀರಾಮ ವೃತ್ತ, ಲಾಲ್ ಬಹದ್ದೂರ್ ಶಾಸ್ತಿç ವೃತ್ತ, ಬಸವೇಶ್ವರ ವೃತ್ತ, ಹಳೇ ಶಹಾಬಾದ್ ಬಡಾವಣೆವರೆಗೆ ನಡೆಯಿತು. ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರಿ, ನಗರಸಭೆ ಪೌರಾಯುಕ್ತ ಡಾ.ಕೆ. ಗುರುಲಿಂಗಪ್ಪ, ತಾಪಂ ಇಒ ಮಲ್ಲಿನಾಥ ರಾವೂರ, ಸಿಡಿಪಿಒ ಡಾ.ವಿಜಯಲಕ್ಷ್ಮೀ ಹೇರೂರ, ನಗರಸಭೆ ವ್ಯವಸ್ಥಾಪಕ ಶರಣಗೌಡ ಪಾಟೀಲ್, ಸಮೂಹ ಸಮುದಾಯ ಅಧಿಕಾರಿ ರಘುನಾಥ ನರಸಾಳೆ, ಜೆಇ ಸಿದ್ದಪ್ಪ ಸೋಂಪುರೆ, ರಬ್ಬಾನಿ, ಎಸ್‌ಐ ಶಿವಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts