More

    ಮೀನಿನ ಬಾಕ್ಸ್‌ನಲ್ಲಿ ಗಾಂಜಾ ಸಾಗಣೆ, ಮೂವರ ಬಂಧನ, 11 ಕೆಜಿ ಗಾಂಜಾ ವಶ, ಒಂದು ಬೈಕ್ ವಶ

    ನೆಲಮಂಗಲ: ಮೀನು ಸಾಗಿಸುವ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿರುವ ಮಾದನಾಯಕನಹಳ್ಳಿ ಪೊಲೀಸರು 11 ಕೆಜಿ ಗಾಂಜಾ ಹಾಗೂ 1 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

    ಒಡಿಶಾದ ಖೋರಾಪುಟ್ ಜಿಲ್ಲೆಯ ಜಯಪುರ ಗ್ರಾಮದ ನಿವಾಸಿ ದಿವಾಕರ್ ದಳಪತಿ (27), ಬೆಂಗಳೂರಿನ ಮಾಗಡಿ ರಸ್ತೆಯ ಇಂದಿರಾನಗರದ ಸುದರ್ಶನ್ (22), ಕಬ್ಬನ್‌ಪೇಟೆಯ ವಿಶ್ವನಾಥ್ (31) ಬಂಧಿತರು.

    ದಿವಾಕರ್ ದಳಪತಿ ಮಾಜಿ ಯೋಧನ ಪುತ್ರ. ಈತ ಬೆಂಗಳೂರಿನಲ್ಲಿ ಡ್ರೈವರ್ ಆಗಿದ್ದಾಗ ವಿಶ್ವನಾಥನ ಪರಿಚಯವಾಗಿತ್ತು. ದಿವಾಕರನ ಸಹಕಾರ ಪಡೆದು ಒಡಿಶಾದಿಂದ ಮೀನಿನ ಬಾಕ್ಸ್‌ಗಳಲ್ಲಿ ಗಾಂಜಾ ತರಿಸಿಕೊಳ್ಳುತ್ತಿದ್ದ. ಸ್ನೇಹಿತ ಸುದರ್ಶನ್ ಸಹಾಯದಿಂದ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ರೂಂ ಬಾಡಿಗೆ ಪಡೆದು, ಮಾರಾಟ ಮಾಡುತ್ತಿದ್ದ. ಎರಡು ವರ್ಷಗಳಿಂದ ಈ ದಂಧೆ ನಿರಾಂತಕವಾಗಿ ನಡೆಯುತ್ತಿತ್ತು.

    ವಿಶ್ವನಾಥ್ ಮತ್ತು ಸುದರ್ಶನ್ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಬಂಧಿಸಲು ಸಂಚು ರೂಪಿಸಿದ ಸಿಪಿಐ ಬಿ.ಎಸ್. ಮಂಜುನಾಥ್, ಅಭಿಷೇಕ್ ಎಂಬಾತನನ್ನು ಜು.2ರಂದು ಸುದರ್ಶನ್ ಬಳಿ ಕಳುಹಿಸಿ, ಗಾಂಜಾ ಖರೀದಿಸುವಂತೆ ಸೂಚಿಸಿದ್ದರು. ಅದರಂತೆ ಹೋದ ಅಭಿಷೇಕ್‌ಗೆ ಗಾಂಜಾ ಕೊಡುವುದಾಗಿ ಸುದರ್ಶನ್ ಒಪ್ಪಿಕೊಂಡಿದ್ದ.
    ಶನಿವಾರ (ಜು.3) ಬೆಳಗ್ಗೆ 11ಕ್ಕೆ ಅಭಿಷೇಕ್‌ಗೆ ಗಾಂಜಾ ಕೊಡಲು ಸುದರ್ಶನ್ ಬರುತ್ತಿರುವಂತೆ ಆತನನ್ನು ಸುತ್ತುವರಿದ ಸಿಪಿಐ ಮಂಜುನಾಥ್ ಮತ್ತು ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು. ಆತನ ನೆರವಿನೊಂದಿಗೆ ವಿಶ್ವನಾಥ್ ಮತ್ತು ದಿವಾಕರ್ ಅವರನ್ನು ಬಂಧಿಸಿದರು.

    ಒಡಿಶಾದ ಬೆಟ್ಟದಲ್ಲಿ ಗಾಂಜಾ ಬೆಳೆ: ಒಡಿಶಾದ ಮಲ್ಲಕನಗಿರಿಯಿಂದ ವಾರಕ್ಕೊಮ್ಮೆ 10ರಿಂದ 15 ಕೆಜಿ ತರಿಸಲಾಗುತ್ತಿತ್ತು. ಅದನ್ನು ಪಡೆದುಕೊಳ್ಳುತ್ತಿದ್ದ ವಿಶ್ವನಾಥ್, ಸುದರ್ಶನ್ ಮೂಲಕ ಮಾರಾಟ ಮಾಡಿಸುತ್ತಿದ್ದ. ಇದು ಬಹುದೊಡ್ಡ ಜಾಲ ಇರುವ ಶಂಕೆ ಇದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್: ಬೆಂಗಳೂರಿನ ಕೆಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡಿದ್ದ ಸುದರ್ಶನ್ ಮತ್ತು ವಿಶ್ವನಾಥ್ ಗಾಂಜಾ ಮಾರುತ್ತಿದ್ದರು. ಮೊದಲಿಗೆ ಕಡಿಮೆ ಬೆಲೆಗೆ ಕೊಡುತ್ತಿದ್ದ ಅವರು, ಮತ್ತೊಮ್ಮೆ ಬಂದಾಗ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಗಾಂಜಾ ಖರೀದಿಸಿದ್ದ ವಿದ್ಯಾರ್ಥಿಗಳು ಹೊಸ ಗ್ರಾಹಕರನ್ನು ಕರೆತಂದಾಗ, ಕಡಿಮೆ ಬೆಲೆಗೆ ಕೊಡುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts