More

    ಮಾರಿಕಾಂಬೆಗೆ ಶ್ರೇಷ್ಠ ಉಡಿ ಸೇವೆ

    ರಾಜೇಂದ್ರ ಶಿಂಗನಮನೆ ಶಿರಸಿ: ಇಷ್ಟಾರ್ಥ ಸಿದ್ಧಿ ಹಾಗೂ ಮುತ್ತೈದೆ ಭಾಗ್ಯಕ್ಕಾಗಿ ಪ್ರಾರ್ಥಿಸಿ ಮಾರಿಕಾಂಬಾ ದೇವಿಗೆ ಲಕ್ಷೋಪಲಕ್ಷ ಉಡಿ ಸಮರ್ಪಣೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಮಾರಿ ಜಾತ್ರೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಉಡಿ ಕಟ್ಟುವ ಕಾರ್ಯ ಭರದಿಂದ ಸಾಗಿದೆ.

    ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ದೇವಿಗೆ ಲಕ್ಷಾಂತರ ಉಡಿ ಸಮರ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಮಾಡಲು ದೇವಾಲಯದ ಆಡಳಿತ ಮಂಡಳಿ ಪೂರ್ವಭಾವಿಯಾಗಿ ಸಿದ್ಧ ಉಡಿಯನ್ನು ಸಿದ್ಧಪಡಿಸಿಡುತ್ತದೆ. ಜಾತ್ರಾ ಗದ್ದುಗೆ ಬಳಿ ಸಿದ್ಧ ಪಡಿಸಿಟ್ಟ ಉಡಿಯನ್ನು ಭಕ್ತರ ಬೇಡಿಕೆಗನುಸಾರ ನೀಡಲಾಗುತ್ತದೆ. ಇದರಿಂದ ಒಂದೊಮ್ಮೆ ಭಕ್ತರು ಮನೆಯಿಂದ ಉಡಿ ತರಲು ಮರೆತರೂ ಹರಕೆ ತೀರಿಸಲು ಈ ಉಡಿ ಸಹಾಯವಾಗುತ್ತವೆ.

    ನಿರಂತರ ಉಡಿ ಕಟ್ಟುವ ಕಾರ್ಯ: 9 ದಿನಗಳ ಜಾತ್ರೆಯಲ್ಲಿ 7 ದಿನಗಳ ಕಾಲ ದೇವಿಗೆ ವಿವಿಧ ಸೇವೆಗಳು ನಿರಂತರವಾಗಿ ನಡೆಯುತ್ತವೆ. ಪ್ರತಿ ಜಾತ್ರೆಗೆ ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಉಡಿ ದೇವಿಯ ಪಾದಕ್ಕೆ ಸಮರ್ಪಣೆ ಆಗುತ್ತವೆ. ದೇವಾಲಯದಿಂದ ಕನಿಷ್ಠ 4-5 ಲಕ್ಷ ಉಡಿಯನ್ನು ಸಿದ್ಧಪಡಿಸಲಾಗುತ್ತದೆ. ಉಳಿದಂತೆ ಅಂಗಡಿಕಾರರಿಂದ ಖರೀದಿಸುವವರು, ಮನೆಯಿಂದ ಉಡಿ ತರುವವರು ಕೂಡ ಲಕ್ಷಾಂತರ ಭಕ್ತರು ಉಡಿ ಸಲ್ಲಿಸುತ್ತಾರೆ. ಕಳೆದ 5 ದಿನಗಳಿಂದ ಉಡಿ ಕಟ್ಟುವ ಕಾರ್ಯ ದೇವಾಲಯದಲ್ಲಿ ನಿರಂತರವಾಗಿ ನಡೆದಿದೆ. ತಲಾ 10 ಜನ ಮಹಿಳಾ ಸಿಬ್ಬಂದಿ 3ರಿಂದ 4 ತಂಡ ಹಗಲು-ರಾತ್ರಿಯೆನ್ನದೆ ಬಳೆ, ಅರಿಶಿಣ, ಕುಂಕುಮ, ಕರಿಮಣಿ, ಅಕ್ಕಿ, ಕಾಯಿ, ಖಣ ಜೋಡಿಸಿ ರವಕೆಯ ಬಟ್ಟೆಯಲ್ಲಿ ಉಡಿ ಕಟ್ಟುತ್ತಿದ್ದಾರೆ. ಪ್ರತಿ ತಂಡ ನಿತ್ಯ 500ಕ್ಕೂ ಹೆಚ್ಚು ಉಡಿ ಕಟ್ಟುತ್ತದೆ. ಪ್ರತಿ ಉಡಿಗೆ ದೇವಾಲಯದ ವತಿಯಿಂದ 40 ರೂ. ದರ ನಿಗದಿ ಮಾಡಲಾಗಿದೆ. ಜಾತ್ರೋತ್ಸವದ ವೇಳೆಯೂ ಈ ಉಡಿ ಕಟ್ಟುವ ಕಾರ್ಯ ನಿರಂತರವಾಗಿ ದೇವಿಯ ಗದ್ದೆಗೆ ಬಳಿ ನಡೆಯುತ್ತಿರುತ್ತದೆ.

    ದರ ನಿಗದಿ: ದೇವಾಲಯದಿಂದ ಸಿದ್ಧಪಡಿಸುವ ಪ್ರತಿ ಉಡಿಗೆ 40 ರೂ. ದರ ನಿಗದಿ ಮಾಡಲಾಗಿದೆ. ಜಾತ್ರೆ ಪೂರ್ಣಗೊಳ್ಳುವವರೆಗೆ ಅಂದಾಜು 2 ಕೋಟಿ ರೂ. ಆದಾಯ ದೇವಾಲಯಕ್ಕೆ ಸಂದಾಯ ಆಗುತ್ತದೆ. ಉಳಿದಂತೆ ಅಂಗಡಿಕಾರರು ಉಡಿಯೊಂದಕ್ಕೆ ಕನಿಷ್ಠ 70 ರೂ. ದರ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಜಾತ್ರೆಯ ಅಂಗವಾಗಿ ಎಲ್ಲ ಮೂಲಗಳಿಂದ 8ರಿಂದ 10 ಲಕ್ಷ ಉಡಿ ಸಮರ್ಪಣೆಯಾಗಲಿದ್ದು, ಇದರಲ್ಲಿ 5ರಿಂದ 6 ಲಕ್ಷ ಉಡಿ ಅಂಗಡಿಕಾರರಿಂದ ಮಾರಾಟ ಆಗುತ್ತದೆ. ಒಟ್ಟಾರೆ ಅಂಗಡಿಕಾರರಿಗೆ ಉಡಿ ಮಾರಾಟದಿಂದಲೇ 5 ಕೋಟಿ ರೂ. ಗೂ ಹೆಚ್ಚು ಆದಾಯ ಕೈಸೇರುತ್ತದೆ.

    ಹರಾಜಿನಿಂದ 2.45 ಕೋ. ರೂ. ಆದಾಯ: ಮಾರಿಕಾಂಬಾ ದೇವಿ ಜಾತ್ರಾ ಅಂಗಡಿಗಳ ಹರಾಜು ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದ್ದು, ಕಳೆದ ಬಾರಿಗಿಂತ 60 ಲಕ್ಷ ರೂ. ಹೆಚ್ಚುವರಿ ಆದಾಯ ದೇವಾಲಯಕ್ಕೆ ಲಭಿಸಿದೆ. ಕಳೆದ ಮೂರು ದಿನಗಳಿಂದ ಹಂಗಾಮಿ ಅಂಗಡಿಗಳ ಹರಾಜು ಪ್ರಕ್ರಿಯೆ ಬಿರುಸಿನಿಂದ ನಡೆದಿದ್ದು, ದೇವಾಲಯಕ್ಕೆ 223 ಅಂಗಡಿಗಳಿಂದ ಬರೊಬ್ಬರಿ 2.45 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಜಾತ್ರೆಯಲ್ಲಿ 238 ಅಂಗಡಿಗಳಿಂದ 1.84 ಕೋಟಿ ರೂ. ಆದಾಯವಾಗಿತ್ತು. ಈ ಬಾರಿ ಅಂಗಡಿಗಳ ಸಂಖ್ಯೆಯಲ್ಲಿ ಇಳಿತವಾದರೂ ಹರಾಜಿನ ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ. ಇಡೀ ಹರಾಜು ಪ್ರಕ್ರಿಯೆಯಲ್ಲಿ ಮನೋರಂಜನಾ ಕೇಂದ್ರವಾದ ಕೋಣನಬಿಡ್ಕಿಯ 2 ಬೃಹತ್ ಪ್ಲಾಟ್​ಗಳು ಬರೊಬ್ಬರಿ 63 ಲಕ್ಷ ರೂ.ಗೆ ಹರಾಜಾಗಿದ್ದು, ದೇವಾಲಯದ ಆದಾಯ ಹೆಚ್ಚಲು ಕಾರಣವಾಗಿದೆ.

    ನಗರಸಭೆಗೂ ಆದಾಯ: ನಗರಸಭೆ ಹರಾಜು ಪ್ರಕ್ರಿಯೆಯಲ್ಲಿ 60 ಅಂಗಡಿಗಳು 10 ಲಕ್ಷ ರೂ.ಗೆ ಹರಾಜಾದವು. ಭಾನುವಾರವೂ ಹರಾಜು ಪ್ರಕ್ರಿಯೆ ನಡೆಯಲಿದ್ದು, 50ಕ್ಕೂ ಹೆಚ್ಚು ಅಂಗಡಿಗಳ ಹರಾಜು ನಡೆಯಲಿದೆ.

    ಅನ್ನಪ್ರಸಾದಕ್ಕೆ ದೇಣಿಗೆ: ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಅನ್ನಪ್ರಸಾದದ ವ್ಯವಸ್ಥೆಯ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕ್​ನ ಹುಲೇಕಲ್ ರಸ್ತೆ ಶಾಖೆಯ ಸಿಬ್ಬಂದಿ ಸಂಗ್ರಹಿಸಿದ 43,710 ರೂ.ಗಳನ್ನು ಕಾರವಾರದ ಕ್ಷೇತ್ರೀಯ ಉಪ ಪ್ರಬಂಧಕರಾದ ಆನಂದ ಗಂಗೂರ, ಶಾಖಾ ಮುಖ್ಯ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳೊಂದಿಗೆ ದೇವಾಲಯಕ್ಕೆ ಆಗಮಿಸಿ ಧರ್ಮದರ್ಶಿ ಲಕ್ಷ್ಮಣ ಮುಕುಂದ ಕಾನಡೆ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು.

    ರೌಡಿ ಶೀಟರ್​ಗಳ ಪರೇಡ್: ಸರಗಳ್ಳತನ, ಮನೆ ಕಳ್ಳತನ, ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರು ಹಾಗೂ ರೌಡಿ ಶೀಟರ್​ಗಳನ್ನು ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆ ಠಾಣೆಗೆ ಕರೆಸಿ ಪರೇಡ್ ನಡೆಸಲಾಯಿತು. ಜಾತ್ರಾ ಸಮಯದಲ್ಲಿ ಯಾವುದೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದರೆ, ಗಲಭೆ ಎಬ್ಬಿಸಿ ಶಾಂತಿ ಕದಡುವ ಕೃತ್ಯಕ್ಕೆ ಕೈಹಾಕಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಅವರು ಖಡಕ್ ಎಚ್ಚರಿಕೆ ನೀಡಿದರು.

    ಭಕ್ತರು ಬೇಡಿಕೊಂಡ ಕೋರಿಕೆ ಈಡೇರಿದಾಗ ಹಾಗೂ ಮುತ್ತೈದೆ ಭಾಗ್ಯ ಬೇಡಿಕೊಂಡ ಮಹಿಳೆಯರು ದೇವಿಗೆ ಶ್ರದ್ಧೆ, ಭಕ್ತಿಯಿಂದ ಉಡಿ ಸಮರ್ಪಿಸುತ್ತಾರೆ. ದೇವಿಯಿಂದ ಚೈತನ್ಯ ಸಿಗಲಿ ಹಾಗೂ ನನ್ನ ಆಧ್ಯಾತ್ಮಿಕ ಉನ್ನತಿಯಾಗಲಿ ಎಂದು ಶರಣಾಗತ ಭಾವದಿಂದ ಪ್ರಾರ್ಥನೆ ಮಾಡಿ ದೇವಿಗೆ ಉಡಿ ಸಲ್ಲಿಸುತ್ತಾರೆ. | ಶಶಿಕಲಾ ಚಂದ್ರಾಪಟ್ಟಣ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ

    ಭಕ್ತರ ಧಾರ್ವಿುಕ ಭಾವನೆಗೆ ಸಹಕಾರಿ ಯಾಗುವಂತೆ ದೇವಾಲಯದ ವತಿಯಿಂದ ಉಡಿಯನ್ನು ಸಿದ್ಧಪಡಿಸಿ ಭಕ್ತರಿಗೆ ನೀಡಲಾಗುವುದು. ಮಾರಿಕಾಂಬೆಗೆ ಉಡಿ ಸೇವೆ ಶ್ರೇಷ್ಠವಾದ ಸೇವೆಯಾಗಿದ್ದು, ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬ ಮಹಿಳೆಯೂ ಉಡಿ ಸಮರ್ಪಿಸುವ ಸಂಪ್ರದಾಯ ಹೊಂದಿದ್ದು, ಸಾಕಷ್ಟು ಸಂಖ್ಯೆಯ ಉಡಿ ಸಲ್ಲಿಕೆ ಆಗುತ್ತದೆ. | ಡಾ.ವೆಂಕಟೇಶ ನಾಯ್ಕ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts