More

    ಮಳೆ ಹಾನಿಗೆ ಸಮರ್ಪಕ ಪರಿಹಾರಕ್ಕೆ ಆಗ್ರಹ

    ಅರಕಲಗೂಡು: ಅತಿವೃಷ್ಟಿಯಿಂದ ಮನೆ, ಬೆಳೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಯೋಗಾರಮೇಶ್ ಆಗ್ರಹಿಸಿದರು.

    ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಶುಕ್ರವಾರ ತಾಲೂಕು ಕಚೇರಿಗೆ ತೆರಳಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅತಿಯಾದ ಮಳೆಗೆ ಈ ಬಾರಿ ಅಪಾರ ರೈತರು ಬೆಳೆ ಕಳೆದುಕೊಂಡಿದ್ದಾರೆ. ವಾಸದ ಮನೆ ಗೋಡೆಗಳು ಕುಸಿದು ಜನರು ಬದುಕು ಬೀದಿಗೆ ಬಿದ್ದಿದೆ. ಅಧಿಕಾರಿಗಳು ಕೆಲವೇ ಸಂತ್ರಸ್ತರಿಗೆ ಮಾತ್ರ ಪರಿಹಾರ ಒದಗಿಸಿ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ಅನೇಕ ಸಂತ್ರಸ್ತರಿಗೆ ಪರಿಹಾರ ಸಿಗದೆ ತಾರತಮ್ಯ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅಪಾರ ಮೊತ್ತದ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಪರಿಹಾರ ವಿತರಣೆ ಮಾತ್ರ ಸಮರ್ಪಕವಾಗಿ ನಡೆದಿಲ್ಲ. ಇದರಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ. ಇದರಿಂದ ಜನರು ಅನವಶ್ಯಕವಾಗಿ ಸರ್ಕಾರವನ್ನು ದೂರುವಂತಾಗಿದೆ. ಅಧಿಕಾರಿಗಳು ಇನ್ನಾದರೂ ಸಂಕಷ್ಟಕ್ಕೊಳಗಾದ ಜನರನ್ನು ಗುರುತಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.


    ಅರಕಲಗೂಡು ನಗರ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕೇಶವೇಗೌಡ ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ರೈತರು ಖಾತೆ ಬದಲಾವಣೆ ಸೇರಿದಂತೆ ಕಂದಾಯ ಇಲಾಖೆಯಲ್ಲಿ ನಡೆಯುವ ಕೆಲಸಗಳಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ. ರೈತರನ್ನು ಕಚೇರಿಗೆ ಅಲೆಸಲಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.


    ವಕೀಲರಾದ ಬಿ.ಸಿ. ರಾಜೇಶ್, ಆರ್.ಕೆ. ಮಂಜುನಾಥ್ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್, ಮಾಜಿ ಅಧ್ಯಕ್ಷ ಮತ್ತರ ವಿಶ್ವನಾಥ್, ಮುಖಂಡರಾದ ಲೋಕೇಶ್, ಕಾಂತರಾಜ್, ಕ್ಲಾಸಿಕ್ ರವಿ, ಸಂತೋಷ್, ನಳಿನಿ ರಾಜೇಅರಸ್, ರಾಮಣ್ಣ, ಪುನೀತ್, ಖಂಡೇಶ್ವರ್, ಚಂದು, ಶಿವಲಿಂಗಶಾಸ್ತ್ರಿ, ವಕೀಲ ಎಂ.ಟಿ. ಸತ್ಯನಾರಾಯಣ ಇತರರಿದ್ದರು. ಶಿರಸ್ತೇದಾರ್ ಅಂಕೇಗೌಡ ಮತ್ತು ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts