More

    ಮನೆ ಹಾನಿ ಪರಿಹಾರದಲ್ಲೂ ಗೋಲ್ಮಾಲ್

    ಪರಶುರಾಮ ಕೆರಿ ಹಾವೇರಿ

    ನೆರೆ ಹಾನಿಯಿಂದಾದ ಬೆಳೆ ಹಾನಿ ಪರಿಹಾರ ವಿತರಣೆ ಗೋಲ್ಮಾಲ್ ಹಾನಿಗೀಡಾದ ಮನೆಗಳ ಆಯ್ಕೆಯಲ್ಲಿಯೂ ರಾಜಾರೋಷವಾಗಿ ನಡೆದಿರುವುದು ಬೆಳಕಿಗೆ ಬಂದಿದೆ.

    ಮನೆ ಹಾನಿಗೊಳಗಾದ ಫಲಾನುಭವಿಗಳನ್ನು ಜಂಟಿ ಸಮೀಕ್ಷಾ ತಂಡವು ಪರಿಶೀಲಿಸಿ ಆಯ್ಕೆ ಮಾಡಿ ಆರ್​ಜಿಎಚ್​ಸಿಎಲ್ ತಂತ್ರಾಂಶದಲ್ಲಿ ಅಳವಡಿಸುವುದು ನಿಯಮ. ಆದರೆ, ಫಲಾನುಭವಿಗಳು ತಹಸೀಲ್ದಾರ್ ಕಚೇರಿಯಿಂದಲೂ ಆಯ್ಕೆಯಾಗಿದ್ದಾರೆ. ಸಿ ಕ್ಯಾಟಗರಿಗೆ ಸೇರಿದ್ದ ಮನೆಗಳನ್ನು ಬಿ ಕೆಟಗರಿಗೆ ಸೇರ್ಪಡೆಗೊಳಿಸಿರುವ ಪ್ರಕರಣಗಳು ಕೆಲ ಗ್ರಾಪಂಗಳಲ್ಲಿ ಕಂಡುಬಂದಿದೆ.

    ಶಿಗ್ಗಾಂವಿ ತಾಲೂಕು ಹುನಗುಂದ ಗ್ರಾಪಂ ವ್ಯಾಪ್ತಿಯ ಮುಗಳಿಕಟ್ಟಿ ಗ್ರಾಮದ ನಾಗಪ್ಪ ಶಿವಪ್ಪ ಬಿಂಗಾಪುರ ಎಂಬ ಫಲಾನುಭವಿಯನ್ನು ಜಂಟಿ ಸಮೀಕ್ಷಾ ತಂಡವು ಆಯ್ಕೆ ಮಾಡದೆ, ತಹಸೀಲ್ದಾರ್ ಕಚೇರಿಯಿಂದಲೇ ಬಿ ಗ್ರೇಡ್​ಗೆ ಆಯ್ಕೆ ಮಾಡಲಾಗಿದೆ. ಅಲ್ಲಿನ ಪಿಡಿಒ ಜಿಪಿಎಸ್ ರೈತನ ಹೊಲಕ್ಕೆ ಹೋದರೆ ಫಲಾನುಭವಿ ಬೇರೆ ಜಾಗದಲ್ಲಿ ಜಿಪಿಎಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ, ಪಿಡಿಒ ಜಿಪಿಎಸ್ ಮಾಡಲು ಒಪ್ಪದೇ ತಾಪಂ ಇಒಗೆ ಈ ಕುರಿತು ಲಿಖಿತ ಮಾಹಿತಿ ನೀಡಿದ್ದಾರೆ.

    ಶಿಗ್ಗಾಂವಿ ತಾಲೂಕು ಬಾಡ ಗ್ರಾಪಂ ವ್ಯಾಪ್ತಿಯಲ್ಲಿ ಬಿ ವರ್ಗದಲ್ಲಿ ಒಟ್ಟು 35 ಮನೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 11 ಮನೆಗಳು ಸಿ ವರ್ಗಕ್ಕೆ ಸೇರಿದವುಗಳಾಗಿವೆ. ಆದರೆ, ತಹಸೀಲ್ದಾರರು ಜಂಟಿ ಸಮೀಕ್ಷೆ ನಡೆಸಿದ ದಿನದಂದೇ ಆರ್​ಜಿಎಚ್​ಸಿಎಲ್ ತಂತ್ರಾಂಶದಲ್ಲಿ ಅಳವಡಿಸಲು ಆದೇಶಿಸಿದ್ದರಿಂದ ನಜರಚೂಕಿನಿಂದ ಬಿ ವರ್ಗಕ್ಕೆ ಸೇರಿಸಲಾಗಿದೆ. ಅವುಗಳಿಗೆ ಮನೆ ನಿರ್ವಣದ ಆದೇಶ ಪತ್ರಗಳನ್ನು ನೀಡದೇ ತಡೆ ಹಿಡಿಯುವಂತೆ ಕೋರಿ ಅಲ್ಲಿನ ಪಿಡಿಒಗೆ ಗ್ರಾಮಲೆಕ್ಕಾಧಿಕಾರಿ ರಾಕೇಶ ಎನ್ನುವವರು ವಾಟ್ಸ್​ಆಪ್​ನಲ್ಲಿ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪಿಡಿಒ ರಾಮಕೃಷ್ಣ ಗುಡಗೇರಿ, ವಾಟ್ಸ್​ಆಪ್​ನಲ್ಲಿಯೇ ಮರು ಸಂದೇಶ ಕಳಿಸಿ ಈಗಾಗಲೇ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿದೆ ಎಂದು ಉತ್ತರ ಕಳಿಸಿದ್ದಾರೆ. ಅನರ್ಹ ಫಲಾನುಭವಿಗಳ ಆಯ್ಕೆಯ ತನಿಖೆ ನಡೆದರೆ ನಾವ್ಯಾರೂ ಸಿಕ್ಕಿಹಾಕಿಕೊಳ್ಳಬಾರದು ಎಂಬ ಉದ್ದೇಶವನ್ನು ಕಂದಾಯ ಇಲಾಖೆಯ ನೌಕರರು ಹೊಂದಿರುವುದು ಇಲ್ಲಿ ಕಂಡುಬರುತ್ತಿದೆ.

    ಬಾಡ ಹಾಗೂ ನಾರಾಯಣಪುರ ಗ್ರಾಪಂ ವ್ಯಾಪ್ತಿಯೊಂದರಲ್ಲೇ 18 ಫಲಾನುಭವಿಗಳು ಸಿ ವರ್ಗದಿಂದ 5 ಲಕ್ಷ ರೂ.ಗಳ ಪರಿಹಾರದ ಬಿ ವರ್ಗಕ್ಕೆ ಸೇರ್ಪಡೆಗೊಂಡಿವೆ. ಅಂದರೆ ಅಂದಾಜು 90 ಲಕ್ಷ ರೂ.ಗಳನ್ನು ಅಕ್ರಮವಾಗಿ ಲೂಟಿ ಹೊಡೆಯಲು ಕಂದಾಯ ಇಲಾಖೆ ಅಧಿಕಾರಿಗಳು ಯತ್ನಿಸಿರುವುದು ಸಾಬೀತಾಗುತ್ತಿದೆ. ಸಿ ವರ್ಗಕ್ಕೆ ಸೇರಬೇಕಿದ್ದ ಈ ಫಲಾನುಭವಿಗಳಿಗೆ ಈಗಾಗಲೇ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್​ನಿಂದ 1 ಲಕ್ಷ ರೂ.ಗಳ ಪರಿಹಾರವೂ ಮಂಜೂರಾಗಿದೆ. ಇನ್ನೇನು ಮನೆ ಕಟ್ಟಿಕೊಳ್ಳಲು ಆರಂಭಿಸಿದಂತೆ ಇನ್ನುಳಿದ ಹಣವೂ ಹಂತಹಂತವಾಗಿ ಸಂದಾಯವಾಗಲಿದೆ.

    ಜಂಟಿ ಸಮೀಕ್ಷೆಯಲ್ಲಿ ಸಿ, ಡಾಟಾ ಎಂಟ್ರಿಯಲ್ಲಿ ಬಿ: ಬಾಡ ಗ್ರಾಪಂ ವ್ಯಾಪ್ತಿಯಲ್ಲಿ ಬಿ ವರ್ಗದಲ್ಲಿ ನಮೂದಾಗಿರುವ 35 ಮನೆಗಳಲ್ಲಿ 11 ಮನೆಗಳನ್ನು ಪಿಡಿಒ, ಗ್ರಾಮಲೆಕ್ಕಾಧಿಕಾರಿ ಹಾಗೂ ಇಂಜಿನಿಯರ್ ನೇತೃತ್ವದ ಜಂಟಿ ಸಮೀಕ್ಷಾ ತಂಡವು ಸಿ ವರ್ಗದಲ್ಲಿ ನಮೂದಿಸಿತ್ತು. ಅವುಗಳನ್ನು ಡಾಟಾ ಎಂಟ್ರಿ ಸಮಯದಲ್ಲಿ ಬಿ ವರ್ಗಕ್ಕೆ ನಮೂದಿಸಲಾಗಿದೆ. ಈ ತಪ್ಪನ್ನು ಸರಿಪಡಿಸಿಕೊಳ್ಳುವ ಅವಕಾಶ ಕಂದಾಯ ಇಲಾಖೆ ಅಧಿಕಾರಿಗಳಿದ್ದರೂ ಅದನ್ನು ಈವರೆಗೂ ಮಾಡಿಲ್ಲ. ಕೇವಲ

    ವಾಟ್ಸ್​ಆಪ್​ನಲ್ಲಿ ದಾಖಲೆಗಾಗಿ ಮನವಿಯನ್ನು ಸಲ್ಲಿಸಿ ಗ್ರಾಮ ಲೆಕ್ಕಾಧಿಕಾರಿ ಸುಮ್ಮನಾಗಿದ್ದಾರೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಬಾಡ ಪಿಡಿಒ ರಾಮಕೃಷ್ಣ ಗುಡಗೇರಿ, ‘ಜಂಟಿ ಸಮೀಕ್ಷೆಯಲ್ಲಿ ಸಿ ಎಂದು ನಮೂದಿಸಿದ್ದರೂ ಅವು ಹೇಗೆ ಬಿ ಆದವೋ ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು. ಇನ್ನು ಗ್ರಾಮ ಲೆಕ್ಕಾಧಿಕಾರಿ ರಾಕೇಶ ಅವರನ್ನು ಸಂರ್ಪಸಿದರೆ ಅವರು ಕರೆಯನ್ನೇ ಸ್ವೀಕರಿಸಲಿಲ್ಲ.

    ಪ್ರಭಾವಿಗಳಿಗೆ ಮಣೆ: ಮನೆ ಹಾನಿ ಪರಿಹಾರ ವಿತರಣೆಯಲ್ಲಿ ಸರ್ಕಾರದ ಕಾಯ್ದೆಗಿಂತ ಪ್ರಭಾವಿಗಳಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಒಂದೇ ಮನೆಯ ಹೆಸರಿನಲ್ಲಿ ನಾಲ್ಕೈದು ಜನರಿಗೆ ಪರಿಹಾರ ನೀಡಲಾಗಿದೆ. ಜಂಟಿ ಸಮೀಕ್ಷಾ ತಂಡದೊಂದಿಗೆ ಆಯಾ ಗ್ರಾಮದ ಕೆಲ ಪ್ರಭಾವಿ ರಾಜಕಾರಣಿಗಳು, ಗ್ರಾಪಂ ಸದಸ್ಯರು ಸೇರಿ ಒಬ್ಬ ಫಲಾನುಭವಿ ಆಯ್ಕೆಗೆ 1 ಲಕ್ಷ ರೂ.ಗಳವರೆಗೆ ಹಣ ಪಡೆದು ಸಿಕ್ಕಸಿಕ್ಕವರನ್ನು ಆಯ್ಕೆಗೊಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವಗಿಹಳ್ಳಿ ತಿಳಿಸಿದ್ದಾರೆ.

    ಶಿಗ್ಗಾಂವಿ ತಾಲೂಕಿನಲ್ಲಿ ಹುನಗುಂದ ಹಾಗೂ ಬಾಡ ಪಿಡಿಒ ಅವರಿಗೆ ಬೇರೆ ಜಾಗದಲ್ಲಿ ಜಿಪಿಎಸ್ ಮಾಡುವಂತೆ ಒತ್ತಡ ಬಂದ ಕೂಡಲೆ ನನ್ನ ಗಮನಕ್ಕೆ ತಂದಿದ್ದರು. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ಸರ್ಕಾರದ ನಿಯಮದಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಅತಿಯಾದ ಒತ್ತಡ ಬಂದರೆ ಲಿಖಿತ ದಾಖಲೆಗಳನ್ನು ಕಾಯ್ದುಕೊಳ್ಳುವಂತೆಯೂ ಸೂಚಿಸಿದ್ದೇನೆ.
    | ಪ್ರಶಾಂತ ತುರಕಾಣಿ ತಾಪಂ ಇಒ ಶಿಗ್ಗಾಂವಿ

    ಪ್ರಶ್ನಿಸಿದವರ ಮೇಲೆ ಹಲ್ಲೆ: ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿಯೂ ಸಾಕಷ್ಟು ಅಕ್ರಮ ನಡೆದಿದ್ದು, ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ ನಡೆಸಲಾಗಿದೆ. ಇಂತಹ ಪ್ರಕರಣಗಳು ಅನೇಕ ಗ್ರಾಮಗಳಲ್ಲಿಯೂ ನಡೆದಿವೆ. ಹೀಗಾಗಿ ಯಾರೂ ಅಕ್ರಮವನ್ನು ಪ್ರಶ್ನಿಸಲು ಮುಂದಾಗುತ್ತಿಲ್ಲ ಎನ್ನಲಾಗಿದೆ.
    ಮನೆ ನಿರ್ಲಕ್ಷಿಸಿದರೆ ನೋಟಿಸ್
    ಹಾವೇರಿ:
    ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲ ಮನೆಗಳ ಪುನರ್ ನಿರ್ಮಾಣ ಕಾರ್ಯವನ್ನು ವಾರದೊಳಗಾಗಿ ಆರಂಭಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ಕುಮಾರ್ ಮೀನಾ ಎಚ್ಚರಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ಸಂಜೆ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪುನರ್​ವಸತಿ, ಪರಿಹಾರ ಕಾರ್ಯ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರ ಮಾತನಾಡಿದರು. ನೆರೆಯಿಂದ ಮನೆ ಕಳೆದುಕೊಂಡು ಐದಾರು ತಿಂಗಳಾಗಿದೆ. ಒಂದು ಮನೆಯೂ ಪೂರ್ಣಗೊಂಡಿಲ್ಲ. ಈಗಾಗಲೇ ತಳಪಾಯ ಹಾಕಲು ಮೊದಲ ಕಂತಾಗಿ ಒಂದು ಲಕ್ಷ ರೂ. ಪಾವತಿಸಲಾಗಿದೆ. ತಳಪಾಯ ಹಾಕಿ ಫೋಟೋ ಅಪ್​ಲೋಡ್ ಮಾಡಿದರೆ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಶಿಸ್ತುಕ್ರಮ ಅನಿವಾರ್ಯ ಎಂದರು.

    ಮೊದಲ ಕಂತಿನ ಹಣವನ್ನು ಪಾವತಿಸಿದರೂ ಮನೆ ನಿರ್ವಣಕ್ಕೆ ಮುಂದಾಗಿಲ್ಲ ಎಂದರೆ ಸಮೀಕ್ಷೆಯಲ್ಲಿಯೇ ದೋಷವಿದೆಯೇ ಎಂದು ಸಂಶಯ ವ್ಯಕ್ತಪಡಿಸಿದ ಅವರು, ಪರಿಹಾರ ಪಡೆದು ಮನೆ ನಿರ್ವಣಕ್ಕೆ ಮುಂದಾಗದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಿ, ಅಗತ್ಯವಿದ್ದವರಿಗೆ ಮನೆ ನಿರ್ವಿುಸಿಕೊಡಿ. ಮನೆ ಹಾನಿಯಾದ ನಿವೇಶನದ ಬದಲು ಬೇರೆಡೆ ನಿರ್ಮಾಣ ಮಾಡಲು ಬೇಡಿಕೆ ಸಲ್ಲಿಸಿದರೆ ಕಾನೂನು ಬದ್ಧವಾದ ನಿವೇಶನವಿದ್ದರೆ ಜಿಲ್ಲಾಧಿಕಾರಿಗಳೇ ಅನುಮತಿ ನೀಡುತ್ತಾರೆ ಎಂದರು.

    ಶುದ್ಧ ನೀರಿನ ಘಟಕಗಳ ನಿರ್ವಹಣೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಘಟಕಗಳ ಸಮರ್ಪಕ ನಿರ್ವಹಣೆ ಕುರಿತು ಎಲ್ಲ ತಾಪಂ ಇಒಗಳು ಕನಿಷ್ಠ ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು. ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ಎಲ್ಲರಿಗೂ ಅವಕಾಶ ಕಲ್ಪಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ ಹಾಗೂ ಹೆಚ್ಚು ಫಲಿತಾಂಶ ಪಡೆಯುವ ಉಮೇದಿನಲ್ಲಿ ಮಕ್ಕಳಿಗೆ ನಕಲು ಮಾಡಿಸಬೇಡಿ. ಗುಣಮಟ್ಟದ ಪಾಠಮಾಡಿ. ಪರೀಕ್ಷೆ ಎದುರಿಸುವ ಕುರಿತಂತೆ ಮಾರ್ಗದರ್ಶನ ನಡೆಸಿ, ನಕಲು ರಹಿತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ ಎಂದರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜಿಪಂ ಸಿಇಒ ರಮೇಶ ದೇಸಾಯಿ, ಅತಿವೃಷ್ಟಿ, ನೆರೆ ಪರಿಹಾರ, ಮನೆ ಪುನರ್ ನಿರ್ವಣ, ಬೆಳೆವಿಮೆ, ಉದ್ಯೋಗ ಖಾತ್ರಿ ಹಾಗೂ ಕುಡಿಯುವ ನೀರಿನ ಪೂರೈಕೆ ಸೇರಿ ವಿವಿಧ ಕಾರ್ಯಕ್ರಮಗಳ ಪ್ರಗತಿ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್​ಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts