More

    ಮನೆ, ದೇಗುಲ ಪ್ರವೇಶಕ್ಕೆ ಭೇದಭಾವ ಅನಗತ್ಯ

    ಕೋಲಾರ: ಒಂದು ಶಾಲೆ, ಒಂದು ಆಸ್ಪತ್ರೆಯನ್ನು ಒಪ್ಪಿಕೊಂಡಿರುವ ನಾವು ಗ್ರಾಮೀಣ ಭಾಗದ ಮನೆ, ದೇವಾಲಯ ಪ್ರವೇಶದಲ್ಲಿ ಭೇದಭಾವ ಮಾಡವ ಅಗತ್ಯವಿಲ್ಲ. ಎಲ್ಲರಿಗೂ ದೇವಾಲಯ ಪ್ರವೇಶ, ಮನೆಪ್ರವೇಶ ಸಾಧ್ಯವಾದರೆ ಅದರಿಂದ ಸಮಾಜದಲ್ಲಿ ಸದ್ಭಾವನೆ ಬೆಳೆಯುತ್ತದೆ ಎಂದು ಶಾಸಕ ಡಾ.ಕೊತ್ತೂರು ಮಂಜುನಾಥ್ ಅಭಿಪ್ರಾಯಪಟ್ಟರು.
    ತಾಲೂಕಿನ ಬೆಟ್ಟಬೆಣಜೇನಹಳ್ಳಿ ಗೇಟ್ ಸಮೀಪದ ಹನುಮಂತನಗರದಲ್ಲಿ ಯುವರಾಜ್ ಮನೆಯಲ್ಲಿ ಏರ್ಪಡಿಸಿದ್ದ ಸಹಭೋಜನ ಮತ್ತು ಗ್ರಾಮರತ್ನ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯ ಆಚರಣೆಗಳನ್ನು ಹೋಗಲಾಡಿಸಲು ಹೆಚ್ಚೆಚ್ಚು ಅರಿವಿನ ಕಾರ್ಯಕ್ರಮಗಳು ನಡೆಯಬೇಕು. ಬದಲಾವಣೆಗೆ ತೆರೆದುಕೊಂಡವರು ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ. ಪ್ರೀತಿಯಿಂದ ಸಾಮಾಜಿಕ ಬದಲಾವಣೆ ತರುವ ಕೆಲಸವಾಗಬೇಕು ಎಂದರು.
    ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಹಳ್ಳಿಗಳಲ್ಲಿ ದಲಿತರಿಗೆ ಸವರ್ಣಿಯರ ಮನೆ ಪ್ರವೇಶ, ದೇವಾಲಯ ಪ್ರವೇಶ ಕಾರ್ಯಕ್ರಮ ನಡೆಸಲು ತುಂಬಾ ಧೈರ್ಯ ಬೇಕು. ಸಂಪ್ರದಾಯವಾದಿಗಳ ವಿರೋಧ ಲೆಕ್ಕಿಸದೆ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿರುವ ಅರಿವು ಭಾರತ ಸಮಿತಿಯ ಕೆಲಸಕ್ಕೆ ಎಲ್ಲರು ಕೈಜೋಡಿಸಬೇಕು. ನಿರಂತರ ಕಾರ್ಯಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಬದಲಾವಣೆ ಕಾಣುತ್ತಿದೆ. ರಾಜಕಾರಣಿಗಳು ಕೂಡ ತಮ್ಮ ಮಿತಿಗಳಲ್ಲಿ ಈ ಕೆಲಸಗಳನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು.
    ಮಾಜಿ ಸಚಿವ ನಿಸಾರ್ ಅಹಮದ್ ಮಾತನಾಡಿ, ನಗರಗಳಲ್ಲಿ ಇಲ್ಲದ ಕೆಲವು ಮೂಢನಂಬಿಕೆಗಳು ಹಳ್ಳಿಗಳಲ್ಲಿ ಉಳಿದಿದ್ದು, ಅವುಗಳನ್ನು ಜಾಗೃತಿ ಮೂಡಿಸುವ ಮೂಲಕ ತಿದ್ದುವ ಕೆಲಸ ಮಾಡಬೇಕು ಎಂದು ತಿಳಿಸಿದರು.
    ಮುಖಂಡ ಟಿ.ವಿಜಯಕುಮಾರ್ ಮಾತನಾಡು, ಯಾವುದೇ ಒತ್ತಡವಿಲ್ಲದೆ ಗೃಪ್ರವೇಶಕ್ಕೆ ಒಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
    ದಲಿತ ಮುಖಂಡ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಯುವ ಜನರು ಪ್ರತಿ ಹಳ್ಳಿಯಲ್ಲೂ ಸಹಭೋಜನಕ್ಕೆ ಮುಂದಾದರೆ ಅಸ್ಪೃಶ್ಯತೆ ಮುಕ್ತ ಜಿಲ್ಲೆಯಾಗುತ್ತದೆ ಎಂದರು. ರೈತಸಂಘದ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿಪ್ಪಪ್ಪ ಮಾತನಾಡಿ, ಬದಲಾವಣೆಯ ಕೆಲಸಗಳಲ್ಲಿ ರೈತಸಂಘ ಜತೆಗಿರುತ್ತದೆ ಎಂದು ಹೇಳಿದರು.
    ಅರಿವು ಭಾರತದ ಮುಖಂಡ ಡಾ.ಶಿವಪ್ಪ ಅರಿವು ಮಾತನಾಡಿ, ಪ್ರತಿ ಹೋಬಳಿಯಲ್ಲೂ ಮನೆ, ದೇವಾಲಯ ಪ್ರವೇಶ, ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ವಿವರಿಸಿದರು. ಗ್ರಾಮದ ಮುಖಂಡ ಯುವರಾಜ್‌ಗೆ ಗ್ರಾಮರತ್ನ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಾನಪದ ಗಾಯಕ ಡಿ.ಆರ್.ರಾಜಪ್ಪ, ಈ ನೆಲ ಈ ಜಲ ವೆಂಕಟಾಚಲಪತಿ, ಶೆಟ್ಟಿಗಾನಹಳ್ಳಿ ಅಂಬರೀಷ್, ವಾರಧಿ ಮಂಜುನಾಥರೆಡ್ಡಿ, ಡಾ.ಸಿ.ಎ.ರಮೇಶ್, ಪ್ರೊ.ರವೀಂದ್ರ, ಡಾ.ಎ.ಬಿ.ರಮೇಶ್, ಡಾ. ರವೀಂದ್ರನಾಥ್, ಗಣೇಶ್, ಟೈಗರ್ ವೆಂಕಟೇಶ್, ನಾಗನಾಳ ರಮೇಶ್, ಪುನಿತ್, ಶಿವಚರಣ್, ಚಿಕ್ಕನಹಳ್ಳಿ ನಾರಾಯಣಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts