More

    ಮತದಾರರ ಕಷ್ಟಗಳಿಗೆ ಸದಾ ಸ್ಪಂದಿಸುವೆ

    ಚನ್ನರಾಯಪಟ್ಟಣ: ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲಾಗಿದ್ದರೂ ಕ್ಷೇತ್ರದ ಜನರ ಕಷ್ಟಗಳಿಗೆ ಸದಾ ಸ್ಪಂದಿಸುವೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ಹೇಳಿದರು.

    ಪಟ್ಟಣದ ಗೂರಮಾರನಹಳ್ಳಿ ಬಡಾವಣೆಯ ಗಿರೀಶ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಅವಲೋಕನ ಸಭೆಯಲ್ಲಿ ಮಾತನಾಡಿದರು. ಇದು ನನ್ನ ಸೋಲಲ್ಲ, ಕಾರ್ಯಕರ್ತರ ಗೆಲುವು, ರಾಜ್ಯದಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸದ್ಯ ಜೆಡಿಎಸ್‌ನವರ ಕಪಿಮುಷ್ಟಿಯಲ್ಲಿ ನಾವಿಲ್ಲ. ಜನರ ನಡುವೆ ಇದ್ದು, ನೋವಿಗೆ ಸ್ಪಂದಿಸುತ್ತೇನೆ ಎಂದರು.

    ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ, ಪಂಚಾಯಿತಿ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡುತ್ತೇನೆ. ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಕೊಡಿಸುವ ನಮ್ಮ ಪಕ್ಷದ ಯೋಜನೆಗೆ ಶ್ರಮಿಸುವೆ. ತಾಲೂಕಿನಲ್ಲಿ ಕಮಿಷನ್ ದಂಧೆಯನ್ನು ಎಲ್ಲರೂ ಸೇರಿ ನಿಲ್ಲಿಸೋಣ. ಇನ್ಮುಂದೆ ತಾಲೂಕಿನಲ್ಲಿ ಅರ್ಜಿ ಹಾಕಿದವನಿಗೆ ಸವಲತ್ತು ಸಿಗಬೇಕು. ಒಂದೇ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಹರಿದು ಹೋಗಲು ಬಿಡುವುದಿಲ್ಲ. ಸಹಕಾರ ಇಲಾಖೆಯಡಿ ಎಲ್ಲರಿಗೂ ಸಮನಾಗಿ ಸಾಲ ನೀಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

    ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಜೆಡಿಎಸ್‌ನವರ ತಂತ್ರ, ಪಂಚತಂತ್ರವೆಲ್ಲವೂ ಬಾಗಿಲು ಮುಚ್ಚಿವೆ. ಹೊಳೆನರಸೀಪುರದ ನಾಯಕರಿಂದಾಗಿ 30ವರ್ಷದಿಂದ ಜಿಲ್ಲೆಗೆ ಹಿಡಿದ ಗ್ರಹಣ ಕಳೆದಿದೆ. ಸ್ವತಂತ್ರ ಸರ್ಕಾರ ನಮ್ಮದಾಗಿದೆ. ಗೋಪಾಲಸ್ವಾಮಿ ಅವರ ಸೋಲು ನಿಜವಾದ ಸೋಲಲ್ಲ. ಎಲ್ಲರೂ ಸೋತು ಗೆದ್ದವರೇ. ಜನ, ಕಾರ್ಯಕರ್ತರು ಸದಾ ಎಚ್ಚರವಾಗಿರಬೇಕು. ಅನ್ಯಾಯ ಕಂಡರೆ ತಡೆಯುವ ಶಕ್ತಿ ನಮ್ಮೆಲ್ಲದಾಗಿರಬೇಕು ಎಂದರು.

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಶಂಕರ್ ಮಾತನಾಡಿ, ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ವಿಚಲಿತರಾಗುವುದು ಬೇಡ. ನಮ್ಮದೇ ಸರ್ಕಾರವಿದೆ. ಭರವಸೆಯಿಂದ ಇರೋಣ ಎಂದರು.

    ಕಾಂಗ್ರೆಸ್ ಕಾರ್ಯಕರ್ತರಾದ ಪಿ.ಎ.ನಾಗರಾಜು ಮತ್ತು ರವೀಶ್ ಮಾತನಾಡಿ, ನಮ್ಮ ಅಭ್ಯರ್ಥಿ ಸೋಲಿಗೆ ಕಾರಣರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಗೋಪಾಲಸ್ವಾಮಿಯವರೇ ನಮ್ಮ ನಾಯಕರು ಎಂದು ಒಪ್ಪಿಕೊಂಡ ಮೇಲೆ ಉಳಿದವರ ಪ್ರಸ್ತಾಪ ಸಲ್ಲ ಎಂದು ಕಾರ್ಯಕರ್ತರನ್ನು ಹಿರಿಯ ಮುಖಂಡರು ಸಮಾಧಾನಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts