More

    ಮಧ್ಯಂತರ ಪರಿಹಾರದಿಂದ ನೌಕರರಿಗೆ ಲಾಭ

    ಶಿವಮೊಗ್ಗ: ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ಘೋಷಿಸಿದೆ. ಅತಿ ಶೀಘ್ರದಲ್ಲೇ 7ನೇ ವೇತನ ಆಯೋಗದ ಶಿಫಾರಸು ಜಾರಿಯಾಗಲಿದೆ. ರಾಜ್ಯದ ಎಲ್ಲ ಅನುದಾನಿತ ಶಾಲಾ, ಕಾಲೇಜುಗಳಲ್ಲಿ ನಿವೃತ್ತಿ ಅಥವಾ ನಿಧನದಿಂದ ಖಾಲಿಯಾದ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷ ಡಾ. ಆರ್.ಎಂ.ಕುಬೇರಪ್ಪ ಹೇಳಿದರು.

    ಆರನೇ ವೇತನ ಆಯೋಗದ ಎಲ್ಲ ಶಿಫಾರಸುಗಳನ್ನು ಯಥಾವತ್ತಾಗಿ ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿದ್ದಾರೆ. ಇದರಿಂದ ಸರ್ಕಾರಿ ನೌಕರರಿಗೆ ಕನಿಷ್ಠ 10 ಸಾವಿರದಿಂದ 20 ಸಾವಿರ ರೂ.ವರೆಗೆ ಲಾಭವಾಗಿದೆ. ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಹುದ್ದೆಗಳನ್ನು ಸೃಷ್ಟಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿ 25 ವರ್ಷಗಳಿಂದ ಖಾಲಿಯಿದ್ದ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದ್ದರಿಂದ ಪಿಎಚ್.ಡಿ ಪಡೆದವರಿಗೆ ಉದ್ಯೋಗ ಲಭಿಸಿದೆ. ಕಾಂಗ್ರೆಸ್ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಯಂತೆ ನಿರುದ್ಯೋಗ ಪದವೀಧರರಿಗೆ ಮಾಸಿಕ ಮೂರು ಸಾವಿರ ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತಿದೆ ಎಂದರು.
    ಅತಿಥಿ ಉಪನ್ಯಾಸಕರು ಮಾಡಿದ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಮಾಸಿಕ ವೇತನ ಕನಿಷ್ಠ 38 ಸಾವಿರದಿಂದ 48 ಸಾವಿರ ರೂ.ವರೆಗೆ ಹೆಚ್ಚಿಸಿದ್ದಾರೆ. ಆರೋಗ್ಯ ವಿಮೆ, ನಿವೃತ್ತಿ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ರೂ. ಇಡುಗಂಟು ನೀಡುವಂತೆ ಆದೇಶಿಸಿದ್ದಾರೆ ಎಂದು ಹೇಳಿದರು.
    ರಾಜ್ಯದ ಅನುದಾನರಹಿತ ಶಾಲಾ ಕಾಲೇಜುಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಅನುದಾನಕ್ಕೆ ಒಳಪಡಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಶಿಕ್ಷಕರು ಮತ್ತು ಪದವೀಧರರಿಗೆ ಸರ್ಕಾರ ಹಲವು ಸೌಲಭ್ಯ ನೀಡಿರುವುದರಿಂದ ಹಾಗೂ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಭರವಸೆ ನೀಡಿರುವುದರಿಂದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದರು.
    ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ಬಾಲಾಜಿ, ನವೀನ್, ವಿನಯ್ ತಾಂದ್ಲೆ, ಮೋಹನ್, ಗಿರೀಶ್, ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts