More

    ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಿ

    ಚನ್ನರಾಯಪಟ್ಟಣ: ಶಾಲಾ ಗ್ರಂಥಾಲಯ, ಮನೆಗಳಲ್ಲಿ ಸಾಹಿತ್ಯದ ಪುಸ್ತಕಗಳು ಮಕ್ಕಳಿಗೆ ದೊರೆಯುವಂತಾದರೆ ಅವರ ಅಂತರಾಳದಲ್ಲಿ ಸಾಹಿತ್ಯ ಇಳಿಯಲು ನೆರವಾಗುತ್ತದೆ ಎಂದು ಲೇಖಕಿ ಡಾ.ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.


    ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ ಶಾಖೆ ಹಾಗೂ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ 119ನೇ ಜಯಂತ್ಯುತ್ಸವ ಅಂಗವಾಗಿ ಅಯೋಜಿಸಿದ್ದ ಕುವೆಂಪು ನುಡಿತೋರಣ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಶಿಕ್ಷಣ ಕಲಿಕೆಯ ಹಂತದಲ್ಲಿ ಮಕ್ಕಳಲ್ಲಿ ಹುಟ್ಟುವ ಸಾಹಿತ್ಯವನ್ನು ಬಹುದಿನಗಳವರೆಗೆ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ. ಇಂತಹ ಸಾಹಿತ್ಯಗೋಷ್ಠಿಗಳಿಂದ ಮಕ್ಕಳು ಒಳ್ಳೆಯ ಆಸಕ್ತಿ ರೂಪಿಸಿಕೊಂಡು ಸುಂದರ ಹೂಗಳಾಗಿ ಅರಳಲು ಸಾಧ್ಯ ಎಂದರು.


    ದೇಶದ ಅರ್ಥಿಕ ವ್ಯವಸ್ಥೆಯನ್ನು ಸಾರಾಯಿ, ಹೆಂಡ ಮಾರಾಟದಿಂದ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಜನರನ್ನು ಕುಡಿಯಲು ಪ್ರಚೋದನೆಗೊಳಪಡಿಸುವ ಅರ್ಥಿಕತೆ ನಮಗೆ ಬೇಕಾ ಎಂಬುದನ್ನು ನಾವೇ ಪ್ರಶ್ನೆ ಹಾಕಿಕೊಳ್ಳಬೇಕು. ಇಂದಿನ ಮಕ್ಕಳಲ್ಲಿ ಮುಗ್ಧತೆ ಕಣ್ಮರೆಯಾಗುತ್ತಿದೆ. ಎಚ್ಚರ ತಪ್ಪಿದರೆ ಮುಂದಿನ ಪೀಳಿಗೆ ಡ್ರಗ್ಸ್‌ಗೆ ಮಾರು ಹೋಗುವ ದಿನಗಳು ದೂರವಿಲ್ಲ. ಸರ್ಕಾರಗಳು ಸಮಾಜಕ್ಕೆ ಏನು ನೀಡಬೇಕು, ನೀಡಬಾರದು ಎಂಬುದನ್ನು ಮೊದಲು ಅರಿಯಬೇಕು ಎಂದು ಹೇಳಿದರು.


    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ಬು ಹೊಲೆಯಾರ್ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಅವರನ್ನು ಮೊದಲು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬೇಕು. ಕುವೆಂಪು ಅವರು ಪ್ರಕೃತಿಯನ್ನು ಹೆಚ್ಚು ಪ್ರೀತಿಸುತ್ತಿದ್ದವರು. ಹಸಿರನ್ನೇ ಉಂಡು, ಹೊದ್ದವರು. ಅವರ ಪ್ರಕೃತಿ ಪ್ರೀತಿಯನ್ನು ಮಕ್ಕಳು ಹೊಂದಬೇಕ ಎಂದು ಸಲಹೆ ನೀಡಿದರು.


    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತು ರೂಪಿಸುವ ಕಾರ್ಯಕ್ರಮಗಳಿಗೆ ಆದಿಚುಂಚನಗಿರಿ ಮಠ ಬೆನ್ನುಲುಬಾಗಿ ನಿಂತಿದೆ. ಎಲ್ಲರ ಬದುಕಿಗೆ ಶಕ್ತಿ ತುಂಬಿದವರು ಕುವೆಂಪು. ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಕುವೆಂಪು ಮೊದಲಿಗರು. ಮಕ್ಕಳು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.


    ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖೆಯ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಮಕ್ಕಳು ಕುವೆಂಪು ಅವರ ಸಾಧನೆ, ಆದರ್ಶಗಳನ್ನು ತಿಳಿದು ಸಮಾಜ, ಸಂಸ್ಕೃತಿ, ಪ್ರಕೃತಿಗೆ ಕೊಡುಗೆ ನೀಡಬೇಕು. ನಾವು ಸರಿಯಾದರೆ ಸಮಾಜ ಸರಿಹೋಗುತ್ತದೆ ಎಂದು ನುಡಿದರು.
    ಸಾಹಿತಿಗಳಾದ ಸ್ಫೂರ್ತಿ, ರಕ್ಷಿತಾ, ನಂದೀಶ್, ನಿಹಾರಿಕಾ, ಡಿ.ಡಿ.ಹರ್ಷಿತಾ, ಮೌಲ್ಯಾ, ಗಹನ ಡಿ.ಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್.ಅಶೋಕ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ, ಮಸಾಪ ಪದಾಧಿಕಾರಿಗಳಾದ ಮಹದೇವ್, ಜಗದೀಶ್, ಡಾ.ಭಾರತೀ ನಾಗೇಶ್, ಸೋಮಶೇಖರ್, ಸಿ.ಎಸ್.ಮನೋಹರ್, ಸಚಿನ್, ಆರ್.ಲತಾ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮಲ್ಲಿಗೆ ಸುಧೀರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts