More

    ಬೇಡಿಕೆ ಕುಸಿದು ದ್ರಾಕ್ಷಿ ಬೆಳೆಗಾರರಿಗೆ ನಷ್ಟ, ಲಾಕ್‌ಡೌನ್‌ನಿಂದ ಕಟಾವಿಗೆ ತೊಂದರೆ, ಸೂಕ್ತ ನಷ್ಟ ಭರಿಸಲು ರೈತರ ಮನವಿ

    ವಿಜಯಪುರ: ಕರೊನಾ ಲಾಕ್‌ಡೌನ್‌ನಿಂದಾಗಿ ದ್ರಾಕ್ಷಿಗೆ ಬೆಲೆ ಇಲ್ಲವಾಗಿದೆ. ಬೆಳೆ ತೋಟದಲ್ಲೇ ಕೊಳೆಯುವಂತಾಗಿದೆ. ಆದ್ದರಿಂದ, ಸರ್ಕಾರ ನೆರವು ನೀಡಬೇಕು ಎಂದು ದ್ರಾಕ್ಷಿ ಬೆಳೆಗಾರರು ಮನವಿ ಮಾಡಿಕೊಂಡಿದ್ದಾರೆ.

    ಎರಡು ಎಕರೆಯಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆದಿದ್ದೆ. ಕಳೆದ ಬಾರಿ ಇಳುವರಿ ಉತ್ತಮವಾಗಿತ್ತು. ಆದರೆ ಬೆಲೆ ಇಲ್ಲದೆ, ಕಟಾವು ಮಾಡುವವರೂ ಇಲ್ಲದಾಗಿ ಎಲ್ಲ ಹಾಳಾಗಿತ್ತು. ಮಾಡಿದ ಸಾಲ ಕೂಡ ತೀರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಸಹುಡ್ಯ ಗ್ರಾಮದ ರೈತ ಮಹಿಳೆ ಆಂಜಿನಮ್ಮ ಅಲವತ್ತುಕೊಂಡರು.

    ಸಾಲ ಮರುಪಾವತಿಗಾದರೂ ಅನುಕೂಲವಾಗುವ ರೀತಿ ಒಂದು ಹೆಕ್ಟೇರ್‌ಗೆ ಕನಿಷ್ಠ 1 ಲಕ್ಷ ರೂ. ಪರಿಹಾರಧನ ಕೊಡಬೇಕು ಎಂದು ಮನವಿ ಮಾಡಿದರು.

    ಪ್ರತಿ ಬಾರಿಯೂ ವ್ಯಾಪಾರಸ್ಥರ ಬಳಿ ಅಂಗಲಾಚಿ ಬೆಳೆ ಕಟಾವು ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ನಿಗದಿತ ಸಮಯಕ್ಕೆ ಹಣ ಕೊಡುವುದಿಲ್ಲ. ಚೀಟಿಯಲ್ಲಿ ಲೆಕ್ಕ ಬರೆದುಕೊಟ್ಟು ಹೋಗುತ್ತಾರೆ. ಅವರು ಕೊಟ್ಟಷ್ಟು ನಾವು ಪಡೆದುಕೊಳ್ಳಬೇಕು. ಇದರಿಂದ ಬೆಳೆಗೆ ಬಂಡವಾಳ ಹಾಕಲು ಪ್ರತಿವರ್ಷ ಸಾಲ ಮಾಡುವುದು ಅನಿವಾರ್ಯವಾಗುತ್ತಿದೆ ಎಂದು ರೈತ ಬಿ.ಕೆ. ನಾರಾಯಣಸ್ವಾಮಿ ಬೇಸರಿಸಿದರು.

    ಮಳೆಯ ಆತಂಕ: ಮುಂಗಾರು ಮಳೆ ಆರಂಭವಾಗುವ ಹಂತದಲ್ಲಿದೆ. ಮಳೆಯಾದರೆ, ನಾನಾ ಬಗೆಯ ರೋಗ ತಗುಲುವುದರಿಂದ, ದ್ರಾಕ್ಷಿ ಬೆಳೆ ಮತ್ತಷ್ಟು ಹಾನಿಯಾಗುತ್ತದೆ. ಆದ್ದರಿಂದ, ಸರ್ಕಾರ ಸಮರ್ಪಕವಾದ ಪರಿಹಾರಧನ ನಿಗದಿಪಡಿಸಿ, ಎಲ್ಲರಿಗೂ ಪರಿಹಾರ ಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

    ಬೆಂಗಳೂರು ಬ್ಲೂ ದ್ರಾಕ್ಷಿ ಹೆಚ್ಚಾಗಿ ವೈನ್ ತಯಾರಿಸಲು ಹಾಗೂ ಕೇರಳ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಕರೊನಾ ಕಾರಣ ಡಿಸ್ಟಿಲರಿಗಳು ಮುಚ್ಚಿದ್ದು, ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯ ಸರ್ಕಾರ, ಬೆಳೆ ಪರಿಶೀಲನೆ ನಂತರ ಸಲು ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ 4000 ರೂ. ಪರಿಹಾರ ನೀಡಲು ತಿಳಿಸಿದೆ.
    ಆದರ್ಶ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts