More

    ಬೇಡಿಕೆ ಈಡೇರಿಕೆಗೆ ಮಾಲೀಕರ ಪಟ್ಟು

    ಹಾವೇರಿ: ಕರೊನಾ ಲಾಕ್​ಡೌನ್ ಘೊಷಣೆಯಾದ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಂಡಿರುವ ಚಿತ್ರಮಂದಿರಗಳನ್ನು ತೆರೆಯಲು ಷರತ್ತು ಬದ್ಧ ಅನುಮತಿಯನ್ನು ಸರ್ಕಾರ ನೀಡಿದ್ದರೂ, ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

    ರಾಜ್ಯದ ಹಲವೆಡೆ ಚಿತ್ರಮಂದಿರ ಆರಂಭಿಸಲು ಸಿದ್ಧತೆ ನಡೆದಿದ್ದರೂ ಜಿಲ್ಲೆಯಲ್ಲಿ ಮಾತ್ರ ಇನ್ನೂ ಕೆಲ ದಿನಗಳವರೆಗೆ ಚಿತ್ರಪ್ರದರ್ಶನಗೊಳ್ಳುವುದು ಅನುಮಾನವಾಗಿದೆ.

    ಕರೊನಾ ಲಾಕ್​ಡೌನ್​ನಿಂದ ಕಳೆದ 7ತಿಂಗಳಿನಿಂದ ಅನೇಕ ರೀತಿಯಲ್ಲಿ ಚಿತ್ರಮಂದಿರಗಳ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಇನ್ನು ನಷ್ಟ ಅನುಭವಿಸುತ್ತಲೇ ಇದ್ದಾರೆ. ಆದರೆ ಸರ್ಕಾರ ಅವರಿಗೆ ಯಾವುದೇ ನೆರವಿನ ಹಸ್ತವನ್ನು ಈವರೆಗೂ ಚಾಚಿಲ್ಲ. ಬದಲಾಗಿ ಕರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮಾರ್ಗಸೂಚಿಗಳ ಷರತ್ತು ವಿಧಿಸಿ ಸರ್ಕಾರ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಕರೊನಾ ನಿಯಂತ್ರಣ ಮಾರ್ಗಸೂಚಿಯಂತೆ ಚಿತ್ರಮಂದಿರಗಳನ್ನು ನಡೆಸಲು ಸಾಧ್ಯವಿರದಂತಹ ಸ್ಥಿತಿಯಲ್ಲಿ ಚಿತ್ರಮಂದಿರಗಳ ಮಾಲೀಕರಿದ್ದಾರೆ. ಥೇಟರ್​ನಲ್ಲಿಯ ಗೇಟ್ಕೀಪರ್ ಸೇರಿ ವಿವಿಧ ಕೆಲಸಗಾರರು ಪಿಪಿಇ ಕಿಟ್ ಧರಿಸಬೇಕು. ಚಿತ್ರ ವೀಕ್ಷಣೆಗೆ ಆಗಮಿಸುವವರ ದೂರವಾಣಿ ಸಂಖ್ಯೆ ಪಡೆಯಬೇಕು. ಕಡ್ಡಾಯವಾಗಿ ಆರೋಗ್ಯ ತಪಾಸಣೆ, ಸ್ಯಾನಿಟೈಸೇಶನ್ ಮಾಡುವುದು ಹೊರೆಯ ಕೆಲಸವಾಗಿದೆ. ಸದ್ಯ ರಾಜ್ಯದಲ್ಲಿ ಕರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರದೇ ಇರುವುದರಿಂದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದಿಲ್ಲ. ಹೀಗಾಗಿ ಚಿತ್ರಮಂದಿರ ತೆರೆದರೂ ನಷ್ಟ ಅನುಭವಿಸಬೇಕಾಗುತ್ತದೆಯೇ ಹೊರತು ಲಾಭವಂತೂ ಇಲ್ಲ ಎನ್ನುವುದು ಮಾಲೀಕರ ಅಭಿಪ್ರಾಯವಾಗಿದೆ.

    ದೊಡ್ಡ ನಟರ ಚಿತ್ರಗಳಿಲ್ಲ: ಅ. 15ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ದೊರೆತಿದ್ದರೂ ಸದ್ಯ ಸ್ಟಾರ್ ನಟರ ಹಾಗೂ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬರುತ್ತಿಲ್ಲ. ಒಂದೋ, ಎರಡು ಚಿತ್ರಗಳು ಮಾತ್ರ ತೆರೆ ಕಾಣುತ್ತಿವೆ. ಅವುಗಳನ್ನು ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಆಗುವುದಿಲ್ಲ. ಒಂದು ಚಿತ್ರಮಂದಿರ ಆರಂಭಗೊಂಡರೇ ಇನ್ನೊಂದು ಚಿತ್ರಮಂದಿರ ಹಳೆಯ ಚಿತ್ರ ಪ್ರದರ್ಶನ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ಪ್ರೇಕ್ಷಕರು ಬರುವುದಿಲ್ಲ. ಇನ್ನು ತೆಲುಗು, ಹಿಂದಿ ಚಿತ್ರಗಳು ಸದ್ಯ ತೆರೆ ಕಾಣುತ್ತಿಲ್ಲ. ಸ್ಟಾರ್ ನಟರ ಚಿತ್ರಗಳು ಬಂದಾಗ ಮಾತ್ರ ಚಿತ್ರಮಂದಿರಗಳು ಹೌಸ್​ಫುಲ್ ಪ್ರದರ್ಶನ ಕಾಣುವುದೇ ಅಪರೂಪ ಅಂತಹುದರಲ್ಲಿ ಯಾವುದೋ ಒಂದು ಸಿನಿಮಾವನ್ನು ನಾವು ಪಡೆದು ಪ್ರದರ್ಶನಕ್ಕೆ ಮುಂದಾದರೆ ನಷ್ಟ ಹೆಚ್ಚಾಗುತ್ತದೆ. ಹೀಗಾಗಿ ಇನ್ನು ಕೆಲ ದಿನಗಳವರೆಗೆ ಚಿತ್ರಮಂದಿರ ತೆರೆಯುವುದು ಸಾಧ್ಯವಿಲ್ಲ ಎನ್ನುತ್ತಾರೆ ಪ್ರದರ್ಶಕರು.

    ಜಿಲ್ಲೆಯಲ್ಲಿ ಯಾವುದೇ ಚಿತ್ರಮಂದಿರವನ್ನು ನಾವು ಸದ್ಯ ಆರಂಭಿಸುತ್ತಿಲ್ಲ. ಚಿತ್ರಮಂದಿರಗಳ ಲೈಸನ್ಸ್ ಫೀ ಏರಿಕೆಯಾಗಿದೆ. ಪಿಪಿಇ ಕಿಟ್ ಸೇರಿ ಕೆಲ ಮುಂಜಾಗ್ರತಾ ಕ್ರಮಗಳಿಗೆ ಸರ್ಕಾರವೂ ನೆರವು ಕಲ್ಪಿಸಬೇಕು. ಸದ್ಯ ದೊಡ್ಡ ಚಿತ್ರಗಳಿಲ್ಲ. ಒಂದು, ಎರಡು ಚಿತ್ರ ಬಿಡುಗಡೆಯಾದರೆ ಎಲ್ಲೆಡೆ ಪ್ರದರ್ಶನ ಮಾಡಲು ಆಗೋಲ್ಲ. ಹಳೆಯ ಚಿತ್ರ ಹಾಕಿದರೆ ಖರ್ಚು ನಿಭಾಯಿಸಲು ಸಾಧ್ಯವಿಲ್ಲ. ಸಿಬ್ಬಂದಿ ಪಿಪಿಇ ಕಿಟ್ ಹಾಕಿಕೊಂಡು ಹತ್ತಾರು ತಾಸು ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರ ನಮಗೂ ನೆರವು ಘೊಷಿಸಬೇಕು. ತೆರಿಗೆ ಕಡಿತ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರದೊಂದಿಗೆ ಇನ್ನೊಂದು ರೌಂಡ್ ಚರ್ಚೆ ನಡೆಸಲಾಗುವುದು. ಅಲ್ಲದೇ ರೋಗ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ನಾವು ಚಿತ್ರಮಂದಿರ ಆರಂಭಗೊಳಿಸುತ್ತಿಲ್ಲ. ಸ್ಟಾರ್ ಹಾಗೂ ಬಿಗ್ ಬಜೆಟ್ ಸಿನಿಮಾ ಬರಬೇಕು. ಮುಂಬೈ, ಹೈದ್ರಾಬಾದ್ ಇನ್ನು ಓಪನ್ ಆಗಿಲ್ಲ. ಹೆಚ್ಚಿನ ಚಿತ್ರಗಳು ಬಿಡುಗಡೆಗೆ ಬಂದರೆ ತೆರೆಯಲು ಚಿಂತನೆ ನಡೆಸುತ್ತೇವೆ. | ಅಜಿತ ಮಾಗಾವಿ ಹಾವೇರಿ ಜಿಲ್ಲಾ ಪ್ರದರ್ಶಕರ ಸಂಘದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts