More

  ಕೊಲೆಗಾರರಿಗೆ ರಾಜ್ಯ ಸರ್ಕಾರದ ಶ್ರೀರಕ್ಷೆ; ಡಾ.ಬಸವರಾಜ ಕೇಲಗಾರ ಆರೋಪ; ಅಂಜಲಿ ಹತ್ಯೆ ಖಂಡಿಸಿ ಬಜೆಪಿ ಪತ್ರಿಭಟನೆ

  ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕೊಲೆ ಸುಲಿಗೆ ಮಾಡುವವರಿಗೆ, ದರೋಡೆಕೋರರಿಗೆ, ಭ್ರಷ್ಟಾಚಾರಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಇಂಥವರಿಗೆ ರಾಜ್ಯ ಸರ್ಕಾರವೇ ಶ್ರೀರಕ್ಷೆ ನೀಡುತ್ತಿದೆ. ಇದರಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಆರೋಪಿಸಿದರು.
  ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಾಲು ಸಾಲು ಅತ್ಯಾಚಾರಗಳು ನಡೆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅಂಜಲಿ ಅಂಬಿಗೇರ ಹತ್ಯೆ ನಡೆದಿರುವುದು ಈ ನೆಲದ ಕಾನೂನು ಸುವ್ಯೆವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿ. ಪೊಲೀಸ್ ಇಲಾಖೆಯನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡದೇ ತನ್ನ ಅನುಕೂಲಕ್ಕೆ ತಕ್ಕಂತೆ ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಸಮಾಜದಲ್ಲಿ ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ವಿಫಲವಾಗಿದೆ ಎಂದರು.
  ಹಾವೇರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ರಾಜ್ಯ ಅತ್ಯಾಚಾರಿಗಳು ದರೋಡೆಕೋರರ ತವರುಮನೆಯಾಗಿದೆ. ರಾಜ್ಯ ಸರ್ಕಾರ ಅತ್ಯಾಚಾರಿಗಳನ್ನು ಹಾಗೂ ದರೋಡೆಕೋರರನ್ನು ಮನೆಯ ಮಕ್ಕಳಂತೆ ಪೋಷಿಸಿತ್ತಿದೆ. ಇಂದು ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ ಹಾಗೂ ಕಾನೂನು ಅವ್ಯವಸ್ಥೆಯ ಹೊಣೆಹೊತ್ತು ಸಿದ್ದರಾಮಯ್ಯನವರು ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ ನಡೆದಿವೆ. ಅಲ್ಲದೇ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಮನೆಯಿಂದ ಹೊರಬಂದ ಮಹಿಳೆ ಸುರಕ್ಷಿತವಾಗಿ ಮನೆ ಸೇರುತ್ತಾರೆ ಎಂಬ ನಂಬಿಕೆ ಇಲ್ಲವಾಗಿದೆ. 2 ತಿಂಗಳ ಹಿಂದೆ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದರೆ ಜಿಲ್ಲೆಯಲ್ಲಿರುವ ಯಾವೊಬ್ಬ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಮುಖಂಡರು ಅದನ್ನು ಖಂಡಿಸಲಿಲ್ಲ. ಇದಕ್ಕೆ ಕಾರಣ ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಆರೋಪಿಸಿದರು.
  ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಅಧಿಕಾರದಿಂದ ಕೆಳಗೆ ಇಳಿಯಬೇಕು. ಇಲ್ಲದಿದ್ದರೆ ಮುಂದೆ ರಾಜ್ಯದ ಮಹಿಳೆಯರು ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಎಂದು ಹೇಳಿದರು.
  ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಬಸವರಾಜ ಹಾದಿಮನಿ, ಕಿರಣ ಕೋಣನವರ, ಪ್ರಭು ಹಿಟ್ನಳ್ಳಿ, ನಿರಂಜನ ಹೆರೂರ, ರುದ್ರೇಶ ಚಿನ್ನಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ಶಿವಯೋಗಿ ಶಿರೂರ, ರವೀಂದ್ರ ಅಂಗಡಿ, ವಿಜಯಕುಮಾರ ಚಿನ್ನಿಕಟ್ಟಿ, ಜಗದೀಶ ಕನವಳ್ಳಿ, ಮಂಜುನಾಥ ಹುಲಗೂರ, ಜಗದೀಶ ಕೊಂಡೆಮ್ಮನವರ, ಶಂಭು ಹತ್ತಿ, ರಾಹುಲ್ ನವಲೆ, ಪವನಕುಮಾರ ಖಜುರಕರ, ರತ್ನಾ ಭೀಮಕ್ಕನವರ, ಶ್ರೀದೇವಿ ರೆಡ್ಡಿ, ಸುಜಾತಾ ಆರಾದ್ಯಮಠ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಅಕ್ಕಮಾದೇವಿ ಹರ್ತಿ, ರೇಣುಕಾ ಪಾಟೀಲ, ಇಂದ್ರ ಮಲ್ಲನಗೌಡ್ರ, ಬಾಗ್ಯಶ್ರೀ ಮೋರೆ, ಚದ್ರಕಲಾ ಕೊಟಗಿ, ಅನಿತಾ ಹಬೀಬ, ಸುಮಂಗಲಾ ಚನ್ನವೀರಗೌಡ್ರ, ಸುಮಾ ಕೋಡೆರ, ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts