More

    ಬೆಳೆ ಮಾಹಿತಿ ದಾಖಲಿಸಲು ರೈತರಿಗೆ ಸಲಹೆ

    ಹಿರೇಕೆರೂರ: ‘ನನ್ನ ಬೆಳೆ ನನ್ನ ಹಕ್ಕು’ ಘೊಷಣೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಬೆಳೆಗಳ ವಿವರವನ್ನು ತಾವೇ ಮೊಬೈಲ್ ಫೋನ್​ನಲ್ಲಿ ದಾಖಲಿಸುವ ಪ್ರಕ್ರಿಯೆ ತಾಲೂಕಿನಲ್ಲಿ ಆರಂಭವಾಗಿದೆ. ಎಲ್ಲ ರೈತರು ಸೆ. 10ರೊಳಗೆ ತಮ್ಮ ಬೆಳೆ ಮಾಹಿತಿ ದಾಖಲಿಸುವಂತೆ ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ತಿಳಿಸಿದರು.

    ತಾಲೂಕಿನ ಆಲದಗೇರಿ ಗ್ರಾಮದ ಸ.ನಂ. 232ರಲ್ಲಿ ಶುಕ್ರವಾರ ‘ರೈತರ ಬೆಳೆ ಸಮೀಕ್ಷೆ ಆಪ್’ನಲ್ಲಿ ಬೆಳೆ ವಿವರ ದಾಖಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಜಮೀನಿನಲ್ಲಿ ಬೆಳೆದ ಬೆಳೆಗಳ ದಾಖಲೆ ಉತಾರ (ಪಹಣಿ ಪತ್ರ)ದಲ್ಲಿ ತಪ್ಪಾಗಿದ್ದರೆ ರೈತರು ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಬೆಳೆ ಸಾಲ, ಸಹಾಯ ಧನ ಸೇರಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸಲು ಸ್ವತಃ ರೈತರೇ ಮೊಬೈಲ್ ಮೂಲಕ ತಮ್ಮ ಬೆಳೆಗಳ ವಿವರ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ತಪ್ಪು ಮಾಹಿತಿ ದಾಖಲಾಗುವುದು ಹಾಗೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವುದು ತಪ್ಪುತ್ತದೆ. ಈಗ ಕಟಾವು ಮಾಡುತ್ತಿರುವ ಹೆಸರು, ಉದ್ದು, ಅಲಸಂದಿ ಮತ್ತು ಕಟಾವು ಹಂತದಲ್ಲಿರುವ ಶೇಂಗಾ ಮತ್ತಿತರ ಬೆಳೆಗಳನ್ನು ಕಟಾವು ಪೂರ್ವದಲ್ಲೇ ದಾಖಲಿಸಬೇಕು. ಗೂಗಲ್ ಪ್ಲೇ ಸ್ಟೋರ್​ನಲ್ಲಿ ‘ರೈತರ ಬೆಳೆ ಸಮೀಕ್ಷೆ ಆಪ್’ ಡೌನ್​ಲೋಡ್ ಮಾಡಬೇಕು. ಅದರಲ್ಲಿ ರೈತರ ಹೆಸರು, ಮೊಬೈಲ್​ಫೋನ್ ಸಂಖ್ಯೆ, ಸರ್ವೆ ನಂಬರ್, ಕ್ಷೇತ್ರ, ಬೆಳೆ ವಿವರ ದಾಖಲಿಸಿ ಬೆಳೆಯ ಫೋಟೋ ಅಪ್​ಲೋಡ್ ಮಾಡಬೇಕು. ಈ ವೇಳೆ ಕೃಷಿ, ಕಂದಾಯ, ಗ್ರಾಪಂ ನೌಕರರು ಮತ್ತಿತರರ ಸಹಾಯ ಪಡೆಯಬಹುದು ಎಂದು ತಿಳಿಸಿದರು.

    ರೈತರಾದ ದಾನಪ್ಪ ಗೌಳಿ, ಪಿಆರ್ ರಮೇಶ ಮೆದೂರು, ನಾಗರಾಜ ಕಟ್ಟಿಮನಿ, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ ಬಣಕಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts