More

    ಬೆಳೆಗಾರರಿಗೆ ಸಿಹಿಯಾಗದ ಈರುಳ್ಳಿ

    ಕುಮಟಾ: ಒಂದೆಡೆ ಹಾವು ಸುಳಿರೋಗದ ಹೊಡೆತ, ಇನ್ನೊಂದೆಡೆ ಕರೊನಾ ಸೋಕು ತಡೆಗಾಗಿ ವಿಧಿಸಿರುವ ಲಾಕ್​ಡೌನ್​ನ ಬಿಸಿ.

    ಕುಮಟಾದ ಪ್ರಸಿದ್ಧ ಸಿಹಿ ಈರುಳ್ಳಿ ಬೆಳೆದ ಕೃಷಿಕರ ದುಸ್ಥಿತಿ ಇದು. ತಾಲೂಕಿನ ಅಂದಾಜು 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಸಿಹಿ ಈರುಳ್ಳಿ ಈ ಬಾರಿ ರೈತರಿಗೆ ಕಹಿಯ ಅನುಭವವನ್ನೇ ತಂದಿದೆ.

    ತಿಂಗಳ ಹಿಂದಷ್ಟೇ ವನ್ನಳ್ಳಿ ಭಾಗದಲ್ಲಿ ಸಿಹಿ ಈರುಳ್ಳಿ ಬೆಳೆಗೆ ಹಾವು ಸುಳಿ ರೋಗ ವ್ಯಾಪಕವಾಗಿ ಕಾಡಿತ್ತು. ತೋಟಗಾರಿಕೆ ಇಲಾಖೆ ತಕ್ಷಣ ರೈತರ ನೆರವಿಗೆ ಬಂದು ಈರುಳ್ಳಿ ಬೆಳೆ ಉಳಿವಿಗೆ ತರಬೇತಿ ಹಾಗೂ ಸಭೆ ನಡೆಸಿ ಮಾಹಿತಿ ನೀಡಿತ್ತು. ವನ್ನಳ್ಳಿಯಲ್ಲಿ ಬೆಳೆಗೆ ಕಾಣಿಸಿಕೊಂಡಿದ್ದ ರೋಗವು ಅಳ್ವೇಕೋಡಿ, ಹಂದಿಗೋಣ ಭಾಗದ ಈರುಳ್ಳಿ ಬೆಳೆಗೂ ತಗಲುವ ಎಚ್ಚರಿಕೆ ನೀಡಲಾಗಿತ್ತು. ಆದರೆ, ವನ್ನಳ್ಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಂದಿಗೋಣ ಭಾಗದ ಈರುಳ್ಳಿ ಗದ್ದೆಗಳು ರೋಗಗ್ರಸ್ಥವಾಗುವುದನ್ನು ತಪ್ಪಿಸಲಾಗಲಿಲ್ಲ. ಬಹಳಷ್ಟು ರೈತರು ಗದ್ದೆಯಲ್ಲಿ ತೋಡಿದ್ದ ತಾತ್ಕಾಲಿಕ ಬಾವಿಗಳನ್ನು ಮುಚ್ಚಿ ಈರುಳ್ಳಿ ಕೃಷಿಯ ಸಹವಾಸ ತೊರೆದರು. ಕೆಲವೇ ರೈತರ ಈರುಳ್ಳಿ ಬೆಳೆ ಮಾತ್ರ ಬಚಾವಾಗಿದೆ. ಇನ್ನೊಂದೆರಡು ವಾರದಲ್ಲಿ ಹಂದಿಗೋಣ, ಅಳ್ವೇಕೋಡಿ ಭಾಗದ ಅಳಿದುಳಿದ ಈರುಳ್ಳಿ ಕೊಯ್ಲು ನಡೆಯಲಿದೆ.

    ವಾರದ ಹಿಂದೆ ಅಳ್ವೇಕೋಡಿಯಲ್ಲಿ ರಾಷ್ಟಿ್ರಯ ಹೆದ್ದಾರಿಯಂಚಿಗೆ ವನ್ನಳ್ಳಿ ಭಾಗದ ಒಂದಷ್ಟು ಈರುಳ್ಳಿ ಪೊತ್ತೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಈರುಳ್ಳಿ ಪೊತ್ತೆಗಳು ಹೆದ್ದಾರಿ ಹೋಕರ ಕಣ್ಣಿಗೆ ಬೀಳುತ್ತಿದ್ದಂತೆ ಕೆಜಿಗೆ 45- ರಿಂದ 55 ರೂ.ವರೆಗೆ ಮಾರಾಟ ಶುರುವಾಗಿತ್ತು. ಆದರೆ, ಕರೊನಾ ಲಾಕ್​ಡೌನ್ ಘೊಷಣೆಯಾದ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಲ್ಪಟ್ಟಿವೆ. ಈರುಳ್ಳಿ ಪೊತ್ತೆಗಳು ಕೊಳ್ಳುವವರಿಲ್ಲದೇ ಸೊರಗಲಾರಂಭಿಸಿವೆ. ಇದರೊಟ್ಟಿಗೆ ಶೇಂಗಾ ಬೆಳೆದವರಿಗೂ ಸಮಸ್ಯೆಎದುರಾಗಿದೆ.

    ಏ. 14ರ ನಂತರವೂ ಲಾಕ್ ಡೌನ್ ಮುಂದುವರಿದರೆ ಅಕ್ಷರಶಃ ಈರುಳ್ಳಿ ಬೆಳೆಗಾರರ ಎದೆಯ ಮೇಲೆ ಚಪ್ಪಡಿ ಎಳೆದಂತಾಗಲಿದೆ. ಮಾರಾಟಗಾರರಿಗೂ ಭಾರಿ ಹಾನಿಯ ಆತಂಕವಿದೆ. ಹೀಗಾಗಿ, ತಾಲೂಕಿನ ವಿಶೇಷ ಬೆಳೆಯಾದ ಸಿಹಿ ಈರುಳ್ಳಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂಬುದು ರೈತ ಸಮುದಾಯದ ಒತ್ತಾಸೆಯಾಗಿದೆ.

    ಲಾಕ್​ಡೌನ್​ನಿಂದ ನಮ್ಮ ಅಂಗಡಿಯಲ್ಲಿರುವ ವನ್ನಳ್ಳಿ ಭಾಗದ ಈರುಳ್ಳಿ ಮಾರಾಟ ಮಾಡಲಾಗದೇ ಹಾಳಾಗುತ್ತಿದೆ. ಕೆಲ ದಿನಗಳಲ್ಲಿ ಹಂದಿಗೋಣ ಆಸುಪಾಸಿನ ಈರುಳ್ಳಿ ಕೊಯ್ಲು ನಡೆಯಲಿದೆ. ಈ ಎಲ್ಲ ಈರುಳ್ಳಿಯ ಮಾರಾಟ ಹೇಗೆಂಬ ಚಿಂತೆ ಕಾಡುತ್ತಿದೆ.
    | ರಾಮಚಂದ್ರ ಪಟಗಾರ ಅಳ್ವೇಕೋಡಿ
    ಈರುಳ್ಳಿ ಮಾರಾಟಗಾರ

    ಕುಮಟಾ ತಾಲೂಕಿನಲ್ಲಿ ಈರುಳ್ಳಿ ಬೆಳೆಗೆ ಹಾವುಸುಳಿ ರೋಗದ ಕಾಟದಿಂದ ವ್ಯಾಪಕ ಹಾನಿಯಾಗಿರುವುದನ್ನು ಸಮೀಕ್ಷೆ ಮಾಡಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ.
    | ಚೇತನ್ ನಾಯ್ಕ
    ತೋಟಗಾರಿಕೆ ಸಹಾಯಕ ನಿರ್ದೇಶಕ, ಕುಮಟಾ

    ಈ ಬಾರಿ ರೋಗದ ಸಮಸ್ಯೆಯಿಂದ ಕುಮಟಾದ ಸಿಹಿ ಈರುಳ್ಳಿ ಬೆಳೆ ತೀರಾ ಕಡಿಮೆಯಾಗಿದೆ. ಹಾವು ಸುಳಿಯ ರೋಗದಿಂದಾಗಿ ಹಲವಾರು ರೈತರು ಅರ್ಧದಲ್ಲೇ ಈರುಳ್ಳಿ ಕೃಷಿಯಿಂದ ಹಿಂದೆ ಸರಿದಿದ್ದಾರೆ. ಸರ್ಕಾರವು ಈರುಳ್ಳಿ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.
    | ಮಯೂರ ಪಟಗಾರ ಹಂದಿಗೋಣ
    ಈರುಳ್ಳಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts