More

    ಬಿತ್ತನೆಗೆ ಮುಂದಾಗಿದ್ದಾರೆ ರೈತರು

    ರಾಣೆಬೆನ್ನೂರ: ಕಳೆದೊಂದು ವಾರದಿಂದ ಉತ್ತಮ ಮಳೆಯಾಗಿದ್ದು, ತಾಲೂಕಿನಾದ್ಯಂತ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

    ಮಳೆಗೂ ಮುನ್ನವೇ ಜಮೀನುಗಳನ್ನು ಹಸನು ಮಾಡಿಟ್ಟುಕೊಂಡಿದ್ದ ರೈತರು ಇದೀಗ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ಹತ್ತಿ ಹಾಗೂ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ.

    ಸದ್ಯ ಬಿತ್ತನೆಗೆ ಹದವಾಗುವಷ್ಟು ಮಳೆಯಾಗಿದೆ. ಮೇ ತಿಂಗಳಲ್ಲಿ 88 ಮಿಮೀ ವಾಡಿಕೆ ಮಳೆಯಿದ್ದರೆ, ಈ ಬಾರಿ 88.54 ಮಿಮೀ ಮಳೆ ಬಿದ್ದಿದೆ. ಜೂನ್ ತಿಂಗಳಲ್ಲಿ 69 ಮಿಮೀ ವಾಡಿಕೆ ಮಳೆಯಿದ್ದು, ಮೊದಲನೇ ವಾರ ಉತ್ತಮ ಮಳೆಯಾಗಿದೆ. ಮುಂದಿನ ದಿನದಲ್ಲೂ ಉತ್ತಮವಾಗಿ ಮಳೆಯಾದರೆ ಇಳುವರಿ ಹೆಚ್ಚಳವಾಗಲಿದೆ ಎನ್ನುತ್ತಾರೆ ರೈತರು.

    ಬಿತ್ತನೆ ಗುರಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ 41,076 ಮಳೆಯಾಶ್ರಿತ ಹಾಗೂ 12,855 ನೀರಾವರಿ ಸೇರಿ ಒಟ್ಟು 53,931 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ 9,700 ಹೆಕ್ಟೇರ್, 35,307 ಹೆಕ್ಟೇರ್ ಮೆಕ್ಕೆಜೋಳ, 7648 ಹೆಕ್ಟೇರ್ ಭತ್ತ, 600 ಹೆಕ್ಟೇರ್ ಜೋಳ ಹಾಗೂ 676 ಹೆಕ್ಟೇರ್ ಇತರ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ.

    ಬಿತ್ತನೆಗಾಗಿ 2200 ಕ್ವಿಂಟಾಲ್ ಮೆಕ್ಕೆಜೋಳದ ಬೀಜ, 225 ಕ್ವಿಂಟಾಲ್ ಭತ್ತ ಹಾಗೂ ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆಗಳು ಸೇರಿ ಒಟ್ಟು 6240 ಕ್ವಿಂಟಾಲ್ ಬೀಜದ ಬೇಡಿಕೆಯಿದೆ. ಕೃಷಿ ಇಲಾಖೆಯಲ್ಲಿ ಈಗಾಗಲೇ 435 ಕ್ವಿಂಟಾಲ್ ಮೆಕ್ಕೆಜೋಳ ಬೀಜ ಬಂದಿದ್ದು, 180 ಕ್ವಿಂಟಾಲ್ ಮಾರಾಟವಾಗಿದೆ. 108 ಕ್ವಿಂಟಾಲ್ ಭತ್ತದ ಬೀಜ ಬಂದಿದ್ದು, 32 ಕ್ವಿಂಟಾಲ್ ಮಾರಾಟವಾಗಿದೆ. ಒಟ್ಟು 4139 ಕ್ವಿಂಟಾಲ್​ನಷ್ಟು ಇತರ ಬೀಜ ದಾಸ್ತಾನು ಮಾಡಲಾಗಿದ್ದು, ರೈತರ ಅವಶ್ಯಕತೆಗೆ ತಕ್ಕಂತೆ ಬೀಜ, ಗೊಬ್ಬರ ತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ‘ವಿಜಯವಾಣಿ‘ಗೆ ತಿಳಿಸಿದರು.

    ಕಳೆದ ಆಗಸ್ಟ್, ಅಕ್ಟೋಬರ್​ನಲ್ಲಿ ನೆರೆ ಹಾವಳಿ ಎದುರಾಗಿರುವುದನ್ನು ನೋಡಿದರೆ ಮುಂಗಾರು ಮಳೆ ತಡವಾಗಬಹುದು ಎಂದು ಭಾವಿಸಿದ್ದೇವು. ಆದರೆ, ಕಳೆದ ವಾರದಿಂದ ಬಿತ್ತನೆಗೆ ಇಂಬು ನೀಡುವಂತೆ ಮಳೆಯಾಗುತ್ತಿದೆ. ಮಳೆಯನ್ನೇ ನೆಚ್ಚಿಕೊಂಡು ಬಿತ್ತನೆ ಕಾರ್ಯ ಆರಂಭಿಸಿದ್ದೇವೆ. ಮುಂದಿನ ದಿನದಲ್ಲಿ ಉತ್ತಮ ಮಳೆಯಾದರೆ ಅನುಕೂಲ. ಇಲ್ಲವಾದರೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವುದು ತಪ್ಪುವುದಿಲ್ಲ.
    | ಜಗದೀಶಗೌಡ ಪಾಟೀಲ, ರೈತ

    ಕಳೆದ ವಾರದಿಂದ ರೈತರು ಬಿತ್ತನೆ ಆರಂಭಿಸಿದ್ದಾರೆ. ಮುಂದಿನ ದಿನದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಇದೀಗ ಬಿತ್ತನೆ ಮಾಡಲು ಉತ್ತಮ ಸಮಯ.
    | ಎಚ್.ಬಿ. ಗೌಡಪ್ಪಳ್ಳವರ, ಸಹಾಯಕ ಕೃಷಿ ನಿರ್ದೇಶಕ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts